Kannada NewsKarnataka NewsLatest

ಬಾಲಕಿಯ ಕತ್ತು ಕೊಯ್ದು ಕಣಕುಂಬಿ ಅರಣ್ಯದಲ್ಲಿ ಹೂಳಿದ್ದ ದುರುಳರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 2019ರ ನವೆಂಬರ್ ತಿಂಗಳಲ್ಲಿ ಅಪಹರಣವಾಗಿದ್ದ ಅಪ್ರಾಪ್ತ ಬಾಲಕಿಯನ್ನು ನಂತರದಲ್ಲಿ ಕತ್ತು ಸೀಳಿ, ಕೊಲೆ ಮಾಡಿ ಕಣಕುಂಬಿ ಅರಣ್ಯದಲ್ಲಿ ಹೂತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯನ್ನು ಅಪಹರಿಸಲಾಗಿತ್ತು. ಈ ಕುರಿತು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.

ಹಿಡಕಲ್ ಗ್ರಾಮದ ಆದರ್ಶ ದತ್ತು ಪಾರ್ಥನಹಳ್ಳಿ ಎಂಬಾತ ಬಾಲಕಿಯೊಂದಿಗೆ ಸಲುಗೆಯಿಂದಿದ್ದ ಮಾಹಿತಿ ಅರಿತ ಪೊಲೀಸರು ತೀವ್ರ ತನಿಖೆ ನಡೆಸಿದಾಗ ಸಂಪೂರ್ಣ ವಿವರ ಹೊರಬಿದ್ದಿದೆ.

ಆದರ್ಶ ಮತ್ತು ಹಿಡಕಲ್ ಗ್ರಾಮದ ಕಿರಣ ಕೆಂಚಪ್ಪ ಜಗದಾಳ ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕ ಸೇರಿ ಕೃತ್ಯವೆಸಗಿರುವ ವಿಷಯ ಹೊರಬಿದ್ದಿದೆ.

ಆದರ್ಶ ಧಾರವಾಡದಲ್ಲಿ ವಾಸಿಸುತ್ತಿದ್ದು ಬಾಲಕಿಯನ್ನು 2020ರ ಮೇ ತಿಂಗಳವರೆಗೆ ಧಾರವಾಡದಲ್ಲಿಯೇ ತನ್ನ ರೂಂ ನಲ್ಲಿ ಇಟ್ಟುಕೊಂಡಿದ್ದ. ನಂತರ ನಿಪ್ಪಾಣಿ ಸಮೀಪ ತನ್ನ ಗೆಳೆಯನ ಸಂಬಂಧಿಕರ ಮನೆಯಲ್ಲಿಟ್ಟಿದ್ದ.

ಈ ವೇಳೆ ಬಾಲಕಿ ಬೇರೊಬ್ಬನೊಂದಿಗೆ ವಿವಾಹವಾಗಲು ಮುಂದಾಗಿರುವ ವಿಷಯ ತಿಳಿದು ಆಕೆಯನ್ನು ಕಾಣಕುಂಬಿ ಅರಣ್ಯಕ್ಕೆ ಬೈಕ್ ನಲ್ಲಿ ಕರೆದೊಯ್ದು ಕೊಲೆ ಮಾಡಿ ಹೂಳಿ ಹಾಕಿದ್ದ.

ಇದೀಗ ಎಲ್ಲ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಣಕುಂಬಿ ಅರಣ್ಯಕ್ಕೆ ಆರೋಪಿಗಳನ್ನು ಕರೆದೊಯ್ದು ಹೂತಿದ್ದ ಶವವನ್ನು ಹೊರತೆಗೆಸಿದ್ದಾರೆ. ಶವ ಸಂಪೂರ್ಣ ಕೊಳೆತುಹೋಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ಪಿ ಅಮರನಾಥ ರಡ್ಡಿ, ಅಥಣಿ ಡಿಎಸ್ಪಿ ಎಸ್.ವಿ. ಗಿರೀಶ್ , ರಾಯಬಾಗ ಸಿಪಿಐ ಕೆ.ಎಸ್.ಹಟ್ಟಿ ಮಾರ್ಗದರ್ಶನದಲ್ಲಿ ತನಿಖೆ ನಡೆದಿದೆ.

ಹಾರೂಗೇರಿ ಪಿಎಸ್ಐ ಯಮನಪ್ಪ ಮಾಂಗ ನೇತೃತ್ವದಲ್ಲಿ ತನಿಖೆ ನಡೆದಿತ್ತು.

 

ಪ್ರಗತಿವಾಹಿನಿ ಮಾಡಿದ್ದ ವರದಿ –

ಅಪ್ರಾಪ್ತ ಬಾಲಕಿ ಕೊಲೆ ಪ್ರಕರಣ: ರಾಯಬಾಗ ಪೊಲೀಸರಿಂದ ಕಣಕುಂಬಿಯಲ್ಲಿ ತನಿಖೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button