ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಸ್ಥೆಯನ್ನು ಕಟ್ಟಲು ನಡೆಸಿದ ಸಂಘಟಿತ ಹೋರಾಟಗಳನ್ನು ನೆನೆಯುವುದು ನಮ್ಮ ಕರ್ತವ್ಯವಾಗಿದೆ. ಭಾಷೆ, ಸಂಸ್ಕೃತಿಯನ್ನು ಗಡಿಭಾಗದಲ್ಲಿ ಜತನಮಾಡುವುದಕ್ಕೆಂದೆ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳ ಸಂಸ್ಥೆಯ ಸ್ಥಾಪನೆಯಾಯಿತೆಂದು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಮಾಜಿ ಕಾರ್ಯದರ್ಶಿ ಪ್ರಾಚಾರ್ಯ ವಿ.ಎ.ಪಾಟೀಲ ಅವರು ಹೇಳಿದರು.
ಅವರು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳ ಸಂಸ್ಥೆಯ ಸುವರ್ಣ ಮಹೋತ್ಸವ ಸಂಭ್ರಮ-೨೦೧೯-೨೦ ರ ಮಾಜಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ವೇದಿಕೆಯ ಮೇಲೆ ಪ್ರೊ.ಅನಿತಾ ಪಾಟೀಲ, ಪ್ರೊ. ವಿಕ್ರಮ ಪಾಟೀಲ, ಆರ್.ವೈ.ಪಾಟೀಲ, ನ್ಯಾಯವಾದಿ ರಾಜಾಭಾವು ಪಾಟೀಲ, ಸುಭಾಷ ಓವುಳಕರ, ಎನ್.ಬಿ.ಖಾಂಡೇಕರ ಇದ್ದರು.
ಮಾಜಿ ವಿದ್ಯಾರ್ಥಿಗಳಾದ ಎ.ಕೆ.ಜಾಧವ, ಪ್ರಭಾ ಶಹಾಪುರಕರ , ಸವಿತಾ ಜಾಧವ, ನ್ಯಾಯವಾದಿ ತರಳೆ ಅವರು ದೀಪ ಬೆಳಗಿಸಿ ಮಾಜಿವಿದ್ಯಾರ್ಥಿಗಳ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿದರು.
ವಿ.ಎ.ಪಾಟೀಲರು ಮಾತನಾಡುತ್ತ, ಸಾಮಾನ್ಯ ಜನರ ದೇಣಿಗೆಯಿಂದ ಮತ್ತು ಅನೇಕ ಯೋಜನೆಗಳ ಬಲದಿಂದ ಹಣ ಸಂಗ್ರಹಿಸಿ ಈ ಸಂಸ್ಥೆಯನ್ನು ಕಟ್ಟಲಾಯಿತು. ಭಾಯಿ ದಾಜೀಬಾ ದೇಸಾಯಿ ಮತ್ತು ಅವರ ಸಮಾನ ಮನಸ್ಕ ಮಿತ್ರರು ಒಂದುಗೂಡಿ ಇದನ್ನು ಕಟ್ಟಿ ಬೆಳೆಸಿದರು. ಅದು ಈಗ ಹೆಮ್ಮರವಾಗಿದೆ ಎಂದರು.
ಆರಂಭದಲ್ಲಿ ಕಾಲೇಜಿನ ಮಹಿಳಾ ಅಧ್ಯಾಪಕರು ಮತ್ತು ಸಿಬ್ಬಂದಿ ಸ್ವಾಗತ ಗೀತೆ ಹಾಡಿದರು. ಮಾಜಿ ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಆರ್.ವೈ.ಪಾಟೀಲ ಸ್ವಾಗತ ಮತ್ತು ಪ್ರಾಸ್ಥಾವಿಕ ಮಾತನಾಡಿದರು. ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ನಿವೃತ್ತ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳನ್ನು ಸತ್ಕರಿಸಲಾಯಿತು. ಸುರೇಶ ಭಾತಖಾಂಡೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ