Kannada NewsKarnataka NewsLatest

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ ಸರ್ಕಾರ

ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ೪೭೫ ಕೋಟಿ, ೨೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ೩೮೫ ಕೋಟಿ ಸೇರಿ ಒಟ್ಟು ೮೬೦ ಕೋಟಿ ರೂಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಸಚಿವ ಸಂಪುಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿನಿಧಿಸುವ ಅರಭಾವಿ ವಿಧಾನ ಸಭಾ ಮತಕ್ಷೇತ್ರಕ್ಕೆ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಒಟ್ಟು ೮೬೦ ಕೋಟಿ ರೂಗಳ ಮೊತ್ತದ ಎರಡು ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಗುರುವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಂಪುಟ ಸಭೆಯಲ್ಲಿ ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ೪೭೫ ಕೋಟಿ ರೂಗಳು ಮತ್ತು ಘಟಪ್ರಭಾ ನದಿಯಿಂದ ೨೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ೩೮೫ ಕೋಟಿ ರೂಗಳ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆಯನ್ನು ಸೂಚಿಸಿದ್ದು, ಇದರಿಂದ ಅರಭಾವಿ ಕ್ಷೇತ್ರಕ್ಕೆ ೮೬೦ ಕೋಟಿ ರೂಗಳ ಕಾಮಗಾರಿಗೆ ಸಚಿವ ಸಂಪುಟ ಅಸ್ತು ನೀಡಿದೆ.

ಅರಭಾವಿ ಕ್ಷೇತ್ರದ ಮೆಳವಂಕಿ ಹಾಗೂ ಇತರೆ ೧೧೮ ಗ್ರಾಮಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಅನುಷ್ಠಾನಗೊಳ್ಳಲಿದೆ. ಈ ಯೋಜನೆಯಿಂದ ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ನೀಗಿದಂತಾಗಿದೆ. ಗೋಕಾಕ ತಾಲೂಕಿನ ೮೬ ಮತ್ತು ಮೂಡಲಗಿ ತಾಲೂಕಿನ ೩೨ ಗ್ರಾಮಗಳ ಜನವಸತಿಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಿದಂತಾಗಿದೆ.

ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೨೦ ಕೆರೆಗಳನ್ನು ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ೩೮೫ ಕೋಟಿ ರೂಗಳ ಕಾಮಗಾರಿ ನಡೆಯಲಿದ್ದು, ಸುಣಧೋಳಿ ಗ್ರಾಮದ ಹತ್ತಿರ ಪಂಪಹೌಸ್‌ನ್ನು ನಿರ್ಮಿಸಿ ಘಟಪ್ರಭಾ ನದಿಯಿಂದ ೪೭.೬೦ ಎಮ್‌ಸಿಎಫ್‌ಟಿ ನೀರನ್ನೆತ್ತಿ ಲಕ್ಷ್ಮೇಶ್ವರ, ತಪಸಿ, ಗೋಸಬಾಳ, ಬಿಲಕುಂದಿ, ಮನ್ನಿಕೇರಿ, ಕಳ್ಳಿಗುದ್ದಿ, ಹೊನಕುಪ್ಪಿ, ಕುಲಗೋಡ, ಢವಳೇಶ್ವರ, ವೆಂಕಟಾಪೂರ, ಹೊಸಯರಗುದ್ರಿ, ರಡ್ಡೇರಟ್ಟಿ ಮತ್ತು ಕೌಜಲಗಿ ಗ್ರಾಮಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಂಕ್ಷೆಯನ್ನು ಹೊಂದಿದೆ.

ಅರಭಾವಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೨೦ ಕೆರೆಗಳಿಗೆ ಒಳಹರಿವಿನ ಅಭಾವದಿಂದ ನೀರಿನ ಸಂಗ್ರಹಣೆಯಾಗದೇ ಇರುವುದರಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಅಂತರ್ಜಲ ಮಟ್ಟ ಅಭಿವೃದ್ದಿಪಡಿಸುವಂತೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಅರಭಾವಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

*ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ೫೭೦೧.೩೮ ಕೋಟಿ ವೆಚ್ಚದ ನೀರಾವರಿ ಯೋಜನೆಗಳಿಗೆ ಅನುಮೋದನೆ*

https://pragati.taskdun.com/kittur-karnataka-and-kalyan-karnatakairrigation-schemecabinet-meetingapproval/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button