Latest

ಒಂದೂ ಮಾನವ ಜೀವಹಾನಿ ಆಗದಂತೆ ಚಂಡಮಾರುತ ಎದುರಿಸಿದ ಗುಜರಾತ್ ಸರಕಾರ

ಪ್ರಗತಿವಾಹಿನಿ ಸುದ್ದಿ, ಅಹಮದಾಬಾದ್: ಕಳೆದ ಕೆಲ ವರ್ಷಗಳಿಂದ ಪದೇಪದೆ ಚಂಡಮಾರುತಗಳ ಹೊಡೆತ ತಿನ್ನುತ್ತಿರುವ ಗುಜರಾತ್ ಈ ಬಾರಿ ಭಾರೀ ಪ್ರಮಾಣದಲ್ಲಿ ಎದ್ದು ಅಬ್ಬರಿಸಿದ ಬಿಪೊರ್ ಜಾಯ್ ಚಂಡಮಾರುತದ ಹೊಡೆತದಲ್ಲಿ ಒಂದೂ ಮಾನವ ಜೀವ ಹಾನಿಯಾಗದಂತೆ ರಕ್ಷಿಸಿಕೊಳ್ಳುವ ಮೂಲಕ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಯಶಸ್ವಿಯಾಗಿದೆ.

ಅರಬ್ಬೀ ಸಮುದ್ರದಲ್ಲಿ ಉದ್ಭವಗೊಂಡ ಬಿಪೊರ್ ಜಾಯ್ ಚಂಡಮಾರುತ ಜಕಾವು ಬಂದರಿಗೆ ಗುರುವಾರ ಅಪ್ಪಳಿಸಿ ಕರಾವಳಿ ಪ್ರದೇಶದಲ್ಲಿ ಶುಕ್ರವಾರ ಸಂಜೆಯವರೆಗೂ ತನ್ನ ಅಬ್ಬರ ಮುಂದುವರಿಸಿತ್ತು.

ಗುಜರಾತ್ ರಾಜ್ಯ ಮೊದಲೇ ಈ ಚಂಡಮಾರುತದ ಅಬ್ಬರ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರ ಪರಿಣಾಮ ಒಂದೇ ಒಂದು ಮಾನವ ಜೀವಹಾನಿ ಆಗಿಲ್ಲ ಎಂದು ಅಲ್ಲಿನ ಸರಕಾರ ಹೇಳಿಕೊಂಡಿದೆ. ಆದರೆ 23 ಜನ ಗಾಯಗೊಂಡಿದ್ದು ಅಪಾರ ಆಸ್ತಿ ಹಾನಿಗೀಡಾಗಿದೆ. 524 ಜಾನುವಾರುಗಳು ಹಾಗೂ ಇತರ ಪ್ರಾಣಿಗಳು ಅಸು ನೀಗಿವೆ. 476 ಮನೆಗಳು ಭಾಗಶಃ ಹಾನಿಗೀಡಾಗಿವೆ. 5120 ವಿದ್ಯುತ್‌ ಕಂಬಗಳು ಉರುಳಿದ್ದು, 4600 ಗ್ರಾಮಗಳು ವಿದ್ಯುತ್‌ ವ್ಯತ್ಯಯ ಅನುಭವಿಸಿದವು. ಈ ಪೈಕಿ 3560 ಗ್ರಾಮಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಚಂಡಮಾರುತದ ಘಟನೆಗಳಲ್ಲಿ ಒಂದೇ ಒಂದು ಮಾನವ ಜೀವಹಾನಿಯಾಗದಂತೆ ನೋಡಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ. ಇದಕ್ಕಾಗಿ ಗುಜರಾತ್ ಸರಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಚಂಡಮಾರುತ ಮುನ್ಸೂಚನೆ ದೊರೆಯುತ್ತಿದ್ದಂತೆ ಕರಾವಳಿ ಪ್ರದೇಶದಿಂದ 1 ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಅನಾಹುತಕ್ಕೆ ಕಾರಣವಾಗುವ 4 ಸಾವಿರಕ್ಕೂ ಹೆಚ್ಚು ಹೋರ್ಡಿಂಗ್ ಗಳನ್ನು ತೆರವುಗೊಳಿಸಿದ್ದಲ್ಲದೆ, ಗೀರ್ ಅರಣ್ಯದಲ್ಲಿದ್ದ 200 ಸಿಬ್ಬಂದಿ ನೆರವಿನೊಂದಿಗೆ 700 ಸಿಂಹಗಳನ್ನು ಸುರಕ್ಷಿತ ಸ್ಥಳದತ್ತ ಅಟ್ಟಲಾಗಿತ್ತು. ಸಮುದ್ರದಲ್ಲಿ ಯಾವುದೇ ಹಡಗು ಲಂಗರು ಹಾಕದಂತೆ ಎಚ್ಚರಿಕೆ ನೀಡಿ ಸ್ಥಳಾಂತರಗೊಳಿಸಲಾಗಿತ್ತು. ಜತೆಗೆ ರಕ್ಷಣಾ ಪಡೆಗಳನ್ನು ನಿಯೋಜಿಸಿ ಎಲ್ಲ ಕ್ರಮಗಳನ್ನು ವಹಿಸಿದ ಪರಿಣಾಮ ಮಾನವ ಜೀವಹಾನಿಗಳನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button