ಪ್ರಗತಿವಾಹಿನಿ Exclusive
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುಮಾರು 12 ವರ್ಷಗಳ ಹಿಂದೆ ಪ್ರಸ್ತಾವಿಸಲ್ಪಟ್ಟು ಸ್ವಲ್ಪ ಮಟ್ಟಿಗೆ ಹಿಂದೆ ಸರಿದಿದ್ದ ಕಿತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜ್ಯ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ 2 ದಿನಗಳ ಹಿಂದೆ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ಸರಕಾರಕ್ಕಿದೆ ಎಂದಿದ್ದಾರೆ. ಕೇಂದ್ರ ಸರಕಾರದ ಜೊತೆ ಸಂಪರ್ಕಿಸದೆ ಇಂತಹ ಹೇಳಿಕೆಯನ್ನು ಅವರು ನೀಡಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಇಂತಹ ಯೋಜನೆಯನ್ನು ಈಗಾಗಲೆ ರೂಪಿಸಿರಬಹುದಾದ ಸಾಧ್ಯತೆ ಇದೆ.
2008 -09ರ ಸಮಯದಲ್ಲಿ ಶಾಸಕ ಅಭಯ ಪಾಟೀಲ ಅವರು ವಿಷನ್ 2020 ರೂಪಿಸಿದ್ದರು. ಈ ಸಂಬಂಧ ಬೆಳಗಾವಿ ಇಂಟಲೆಕ್ಚುವಲ್ಸ್ ಸರಣಿ ಸಭೆಗಳನ್ನು ನಡೆಸಿದ್ದರು. ಆ ಸಂದರ್ಭದಲ್ಲಿ ಕಿತ್ತೂರಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆನ್ನುವ ವಿಷಯ ಸಾಕಷ್ಟು ಚರ್ಚೆಯಾಗಿತ್ತು.
ಬೆಳಗಾವಿ ವಿಮಾನ ನಿಲ್ದಾಣ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವ ಬದಲು, ಈ ಎರಡೂ ವಿಮಾನ ನಿಲ್ದಾಣಗಳಿಗೆ ಬಂಡವಾಳ ಹೂಡುವ ಬದಲು ಕಿತ್ತೂರಲ್ಲಿ ದೊಡ್ಡ ಮಟ್ಟದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಹೆಚ್ಚು ಅನುಕೂಲ, ಹುಬ್ಬಳ್ಳಿ -ಧಾರವಾಡ ಮತ್ತು ಬೆಳಗಾವಿ ಮಹಾನಗರಗಳಿಗೆ ಮಧ್ಯದ ಸ್ಥಳವಾಗಿರುವ ಕಿತ್ತೂರಲ್ಲಿ ಬೃಹತ್ ವಿಮಾನ ನಿಲ್ದಾಣ ಮಾಡುವುದು ಹೆಚ್ಚು ಸೂಕ್ತ ಎನ್ನುವ ಚರ್ಚೆ ನಡೆದಿತ್ತು.
ಆ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳು ಬೆಳೆದಿರಲಿಲ್ಲ. ಇಷ್ಟೊಂದು ವಿಮಾನ ಸಂಚಾರವೂ ಇರಲಿಲ್ಲ. ಎರಡೂ ಕಡೆ ವಿಮಾನ ಹಾರಾಟ ಮಾಡುವಷ್ಟು ಸಂಚಾರ ದಟ್ಟಣೆಯೂ ಇರಲಿಲ್ಲ.
ಆ ನಂತರದಲ್ಲಿ ಉಡಾನ್ ಯೋಜನೆ ಬಂದು ಸಾಕಷ್ಟು ಅಭಿವೃದ್ಧಿಯಾಯಿತು. ಎರಡೂ ವಿಮಾನ ನಿಲ್ದಾಣಗಳು ಮೇಲ್ದರ್ಜೆಗೇರಿದವು. ಈಗ ಎರಡೂ ಕಡೆ ಸಂಚಾರ ದಟ್ಟಣೆ ಹೆಚ್ಚಿದೆ. ಈ ವೇಗವನ್ನು ಗಮನದಲ್ಲಿಟ್ಟುಕೊಂಡರೆ ಇನ್ನು 10 ವರ್ಷದಲ್ಲಿ ಎರಡೂ ನಗರಗಳು ಮತ್ತು ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಗಳು ಮಿತಿ ಮೀರಿ ಸಂಚಾರ ದಟ್ಟಣೆಯಿಂದ ಕೂಡಿರುತ್ತವೆ.
ಈ ಹಿನ್ನೆಲೆಯಲ್ಲಿ ಕಿತ್ತೂರಲ್ಲಿ ದೊಡ್ಡ ಪ್ರಮಾಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಹೆಚ್ಚು ಸೂಕ್ತ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಇಡೀ ಉತ್ತರ ಕರ್ನಾಟಕ, ಅದರಲ್ಲೂ ಕಿತ್ತೂರು ಕರ್ನಾಟಕ ಭಾಗದ ಭಾಗ್ಯದ ಬಾಗಿಲು ತೆರೆದಂತೆಯೇ ಸರಿ.
ಕಿತ್ತೂರಲ್ಲಿ ವಿಮಾನ ನಿಲ್ದಾಣವಾದರೆ ಬೆಳಗಾವಿ ಮತ್ತು ಹುಬ್ಬಳ್ಳಿಯ ಪ್ರಸ್ತುತ ಇರುವ ವಿಮಾನ ನಿಲ್ದಾಣಗಳ ಒತ್ತಡ ಕಡಿಮೆಯಾಗಲಿದೆ. ಇವೆರಡಕ್ಕೂ ಇನ್ನಷ್ಟು ಬೆಳೆಯಲು ಅವಕಾಶವಿಲ್ಲ. ಇವೆರಡನ್ನೂ ಡೊಮೆಸ್ಟಿಕ್ ವಿಮಾನ ನಿಲ್ದಾಣಗಳಾಗಿ ಮುಂದುವರಿಸಬಹುದು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದಾದಲ್ಲಿ ಕನಿಷ್ಟ 2 ಸಾವಿರ ಎಕರೆ ಪ್ರದೇಶದಲ್ಲಿ ಮಾಡಬೇಕು. ಮುಂದಿನ ಕನಿಷ್ಟ 50 ವರ್ಷದ ದೂರದೃಷ್ಟಿಯ ಯೋಜನೆ ಇದಾಗಬೇಕು. ಇಂತಹ ಯೋಜನೆಯಿಂದಾಗಿ ಬೆಳಗಾವಿ ಶರವೇಗದಲ್ಲಿ ಬೆಳವಣಿಗೆ ಹೊಂದಲಿದೆ. ಇಲ್ಲಿನ ಕೈಗಾರಿಕೆಗಳು, ವಾಣಿಜ್ಯ ವ್ಯವಹಾರಗಳು, ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳು ಅತೀ ವೇಗದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಬೆಂಗಳೂರಿನ ಮೇಲೆ ಒತ್ತಡ ಮತ್ತು ಅವಲಂಬನೆ ಭಾರೀ ಪ್ರಮಾಣದಲ್ಲಿ ಕುಸಿಯಲಿದೆ. ಮುಂಬೈಯಲ್ಲಿ ಎರಡು ಪ್ರತ್ಯೇಕ ವಿಮಾನ ನಿಲ್ದಾಣಗಳಿರುವಂತೆ ಇಲ್ಲೂ ಬೆಳವಣಿಗೆ ಸಾಧ್ಯವಾಗಲಿದೆ.
ಕಿತ್ತೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಬೇಕೆನ್ನುವ ಪ್ರಸ್ತಾವನೆಯಿಂದ ಹಿಂದೆಸರಿಯಬಾರದು. ಆದಷ್ಟು ಶೀಘ್ರ ಈ ದಿಸೆಯಲ್ಲಿ ಹೆಜ್ಜೆ ಇಡಬೇಕು. ಇದೊಂದು ಅನಿರೀಕ್ಷಿತ ಪ್ರಸ್ತಾವನೆ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೋರಾಟದ ಅಗತ್ಯವಿಲ್ಲದೆ ತನ್ನಿಂದ ತಾನೇ ಅಭಿವೃದ್ಧಿಯಾಗಲಿದೆ. ಸಾಕಷ್ಟು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.
ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಸಂಬಂಧ ಈವರೆಗೆ ಜಿಲ್ಲಾಡಳಿತಕ್ಕೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಅಗತ್ಯವಾದ ಭೂಮಿ ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ. ಇಂಡಸ್ಟ್ರಿಯಲ್ ಕಾರಿಡಾರ್ ಗೆ ಕಿತ್ತೂರಲ್ಲಿ ಭೂಮಿ ಸಿದ್ಧಪಡಿಸಲಾಗಿದೆ. ಜೊತೆಗೆ ವಿಮಾನ ನಿಲ್ದಾಣಕ್ಕೂ ಬೇಕಾದ ಭೂಮಿ ನೀಡಲಾಗುವುದು.
-ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ
ರಾಷ್ಟ್ರೀಯ ಪಿಂಚಣಿ ಯೋಜನೆ (NPS): ಅರ್ಹತೆ, ಸೇರುವ ಪ್ರಕ್ರಿಯೆ ಮತ್ತು ವಿಧಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ