Kannada NewsKarnataka News

ಭಕ್ತಿ ಪರಂಪರೆ ಮುಂದುವರೆಯಬೇಕು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  -ಪ್ರತಿಯೊಬ್ಬರೂ ಗುರುಗಳ, ಭಗವಂತನ ನಾಮಸ್ಮರಣೆಯನ್ನು ಮಾಡುತ್ತಿರಬೇಕು. ಪ್ರತಿ ಕ್ಷಣ ಕ್ಷಣದಲ್ಲಿಯೂ ಭಗವಂತನ ನೆನೆಯುತ್ತಿರಬೇಕು. ಯಾವುದೇ ಕಾರ‍್ಯ ಆರಂಭ, ಮಧ್ಯದಲ್ಲಿ, ಅಂತ್ಯದಲ್ಲಿ ಆ ಕಾರ‍್ಯವನ್ನು ಭಗವಂತನಿಗೆ ಅರ್ಪಿಸುತ್ತಿರಬೇಕು.

ನೀವು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿಕೊಂಡಾಗ ನಿಮಗೆ ಅದರ ಫಲ ಸಿಗುವುದರಲ್ಲಿ ಸಂಶಯವೇ ಇಲ್ಲ. ನೀವು ಭಗವಂತನಲ್ಲಿ ಭಕ್ತಿ ತೋರಿ ಅಕ್ಷರ ರೂಪದಲ್ಲಿ ದಾಖಲಿಸಿ ಅನುಭವಿಸಿ ನೋಡಿ ಭಕ್ತಿಯ ಫಲವನ್ನು ಕಂಡುಕೊಳ್ಳಿ. ಈ ಕುರಿತಂತೆ ನಿಮ್ಮ ಮಕ್ಕಳಲ್ಲಿ, ಮೊಮ್ಮಕ್ಕಳಲ್ಲಿ ಹೇಳಿ ಈ ಭಕ್ತಿ ಪರಂಪರೆಯು ಹೀಗೆ ಮುಂದುವರೆಯುವಂತೆ ಮಾಡಿ ಎಂದು ಉತ್ತರಾಧಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.

ರೇಲ್ವೆ ನಿಲ್ದಾಣದ ಹತ್ತಿರವಿರುವ ಬಿ. ಕೆ. ಮಾಡೆಲ್ ಹೈಸ್ಕೂಲ ಹೊರ ಆವರಣದಲ್ಲಿ ಹಾಕಲಾಗಿದ್ದ ಭವ್ಯ ವೇದಿಕೆಯಲ್ಲಿ ನಗರದ ಪಾದುಕಾ ಮಹಾಸಮಾರಾಧನೆ ಸೇವಾ ಸಮಿತಿಯವರು ಹಮ್ಮಿಕೊಂಡಿರುವ ಶ್ರೀಮತ್ ಅನುವ್ಯಾಖ್ಯಾನ ಶ್ರೀಮನ್‌ನ್ಯಾಯಸುಧಾ ಮಂಗಲ ಮಹೋತ್ಸವ (ಶ್ರೀ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ) ಹಾಗೂ ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರ ೨೩ ನೇ ಪಾದುಕಾ ಮಹಾಸಮಾರಾಧನೆಯ ಸಂದರ್ಭದಲ್ಲಿ ಆಶೀರ್ವಚನದಲ್ಲಿ  ಭಕ್ತಿಯ ಫಲದ ಕುರಿತು ಹೇಳಿದರು.

ಮುಂದೆ ಮಾತನಾಡುತ್ತ ಅವರು, ಇದಕ್ಕೆ ಜೀವಂತ ಸಾಕ್ಷಿಯಂದರೆ ನಾನೇ. ಮಂಗಳಾರತಿ ಎತ್ತಲಾರದ – ತೀರ್ಥವನು ಕೊಡಲಾರದಂತಹ ಸಂದರ್ಭ ನನಗೊದಗಿ ಬಂದಿತ್ತು. ಸರ್ವಶಕ್ತ ಭಗವಂತನ ಕೃಪೆಯಿಂದ ನನಗೆ ರಾಮದೇವರ ಪೂಜೆ ಮಾಡಲು, ಮುದ್ರಾಧಾರಣೆ ಮಾಡಲು ಯಾವುದೇ ತೊಂದರೆಯಾಗಲಿಲ್ಲ. ಇದನ್ನು ನಾನೇಕೆ ಹೇಳುತ್ತಿದ್ದೇನೆ ಎಂದರೆ ನೀವೂ ಭಗವಂತನ ಸೇವೆ ಮಾಡಿ ಫಲವನ್ನು ಅನುಭವಿಸಿ ಎಂಬುದಾಗಿದೆ ಅಷ್ಟೆ. ಭಕ್ತಿಯ ಫಲ ಅನುಭವಿಸಿ ನೋಡಿದಾಗಲೇ ಅದರ ಸುಖ ಗೊತ್ತಾಗುವುದು ಎಂದು ಹೇಳಿದರು.

ಉಪಕಾರ ಸ್ಮರಣೆಯನ್ನು ನೆನೆಯುವುದೇ ನಮ್ಮ ಭಾರತೀಯ ಸಂಸ್ಕೃತಿ. ರಾಮ ಹುಟ್ಟಿದ ಮಣ್ಣಿನ ಗುಣ. ಸ್ವತಃ ರಾಮನೇ ತನ್ನ ಪ್ರಜೆಗಳಲ್ಲಿಯ ನೂರು ತಪ್ಪುಗಳನ್ನು ಕ್ಷಮಿಸಿ ಮಾಡಿದ ಒಳ್ಳೆಯ ಕಾರ‍್ಯವನ್ನು ಕೊಂಡಾಡುತ್ತಿದ್ದ. ಹೀಗೆ ಒಳ್ಳೆಯದನ್ನು ಕಾಣುವ ಪರಂಪರೆ ನಮ್ಮದು ಎಂದು ಹೇಳಿದರು.

ಪಂ. ಸುಧಾಕರಾಚಾರ್ಯ ಕಲ್ಲೂರಕರ (ಅಗ್ನಿಹೋತ್ರ, ಮಹತಿ ಮಾಹಿತಿ) ಪಂ. ಕೃಷ್ಣಾಚಾರ್ಯ ಬಿದರಹಳ್ಳಿ (ಏಕಾದಶಿ ನಿಯಮಗಳು), ಪಂ. ರಘೂತ್ತಮಾಚಾರ್ಯ ನಾಗಸಂಪಿಗೆ (ಅವತಾರಗಳ ಅನುಕ್ರಮಣಿಕೆ) ಪಂ. ವಿದ್ಯಾನರಸಿಂಹಾಚಾರ್ಯ ಮಾಹುಲಿ (ಧರ್ಮ-ಭೀತಿ, ಪ್ರೀತಿ), ಪಂ. ಆನಂದತೀರ್ಥಾಚಾರ್ಯ ನಾಗಸಂಪಿಗೆ (ಗುರುತತ್ವ) ವಿಷಯಗಳ ಕುರಿತಂತೆ ವಿಶೇಷ ಉಪನ್ಯಾಸಗಳು ನಡೆದವು. ಧ್ಯಾನಪ್ರಮೋದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಶ್ರೀವತ್ಸ ಹುದ್ದಾರ ಇವರಿಂದ ಭಕ್ತಿ ಸಂಗೀತ,  ಸೀತಾ ಛಪ್ಪರ ಹಾಗೂ ತಂಡದವರಿಂದ ರೂಪಕ ಕೃಷ್ಣಭೌಮ’ ಹಾಗೂ ಮುಧೋಳದ ಸತ್ಯ ಹಂಸ ಭಜನಾ ಮಂಡಳಿಯವರಿಂದ ರೂಪಕಗಳು ಜರುಗಿದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button