ಗೋವಾದಲ್ಲಿ ಜೋರಾಗುತ್ತಿದೆ ಮಹದಾಯಿ ಫೈಟ್

 ಪ್ರಗತಿವಾಹಿನಿ ಸುದ್ದಿ, ಪಣಜಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಗೋವಾ ರಾಜ್ಯ ಜಯಗಳಿಸಲಿದೆ. ವಿಜಯ ಗೋವಾ ರಾಜ್ಯದ್ದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಗೋವಾ ಮುಖ್ಯಮಂತ್ರಿ ಸಾವಂತ್, ಗೋವಾ ಫಾರ್ವರ್ಡ ಪಕ್ಷದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಮುಖ್ಯಮಂತ್ರಿ ಪ್ರಮೋದ ಸಾವಂತ್

ಮಹದಾಯಿ ವಿಷಯದಲ್ಲಿ ಗೋವಾ ಫಾರ್ವರ್ಡ ಪಕ್ಷವು ರಾಷ್ಟ್ರೀಯ ಹಸಿರು ಪೀಠದ ಮೆಟ್ಟಿಲೇರಿ ಗೋವಾಕ್ಕೆ ನಷ್ಠವನ್ನುಂಟುಮಾಡಿದೆ. ಅವರ ಮನವಿಯನ್ನು ನ್ಯಾಯಾಧೀಕರಣ ಸಮ್ಮತಿಸಿಲ್ಲ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಹದಾಯಿ ಪ್ರಕರಣದಲ್ಲಿ ನಮ್ಮದು ವೇಟ್ ಎಂಡ್ ವಾಚ್ ನಿಲುವಾಗಿದೆ. ಮಹದಾಯಿ ವಿಷಯದಲ್ಲಿ ನಾವು ಯಾವುದೇ ರೀತಿಯ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಈಗಲೂ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಮಹದಾಯಿ ವಿಷಯದಲ್ಲಿ ನನಗೆ ಕೇಂದ್ರ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ವಿಷಯದಲ್ಲಿ ಎಲ್ಲರೂ ಕೊಂಚ ತಾಳ್ಮೆ ಪಡೆದುಕೊಳ್ಳಬೇಕು. ನನಗೆ ಕೇಂದ್ರ ಪರಿಸರ ಮಂತ್ರಿ ಪ್ರಕಾಶ್ ಜಾವಡೇಕರ್ ರವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದರಿಂದಾಗಿ ನಾನು ಸದ್ಯ ಏನನ್ನೂ ಹೇಳುವುದಿಲ್ಲ. ಈ ವಿಷಯದಲ್ಲಿ ಗೋವಾಕ್ಕೆ ಜಯವಾದ ನಂತರ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ರಾಜಕಾರಣ ಬೇಡ-ವಿಜಯ್ ಸರ್ದೇಸಾಯಿ

ಗೋವಾ ಫಾರ್ವರ್ಡ ಪಕ್ಷದ ಅಧ್ಯಕ್ಷ ವಿಜಯ್ ಸರ್ದೇಸಾಯಿ ಮುಖ್ಯಮಂತ್ರಿಗಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿ- ಮಹದಾಯಿ ನದಿ ನೀರು ವಿಷಯದಲ್ಲಿ ಮುಖ್ಯಮಂತ್ರಿಗಳು ರಾಜಕಾರಣ ಮಾಡಬಾರದು. ಗೋವಾ ಫಾರ್ವರ್ಡ ಪಕ್ಷವು ಮಹದಾಯಿ ವಿಷಯದಲ್ಲಿ ರಾಷ್ಟ್ರೀಯ ಹಸಿರು ಪೀಠದ ಮೆಟ್ಟಿಲೇರಿದ್ದನ್ನು ಮುಖ್ಯಮಂತ್ರಿಗಳು ರಾಜಕಾರಣದ ದೃಷ್ಟಿಯಿಂದ ನೋಡಬಾರದು. ಮುಖ್ಯಮಂತ್ರಿಗಳು ಮಹದಾಯಿ ವಿಷಯದಲ್ಲಿ ಗಂಭೀರವಾಗಿಲ್ಲ. ಇಂತಹ ನಾಯಕರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವುದು ಗೋವಾ ರಾಜ್ಯಕ್ಕೆ ಮಾರಕವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

ನಾಳೆ ಜಾವಡೆಕರ್ ಗೆ ಸಂಕಷ್ಟ

 

ಕರ್ನಾಟಕದ ಕಳಸಾ-ಬಂಡೂರಿಗೆ ಕೇಂದ್ರ ಪರಿಸರ ಇಲಾಖೆ ನೀಡಿರುವ ಪತ್ರವನ್ನು ಇದುವರೆಗೂ ಹಿಂಪಡೆಯದ ಹಿನ್ನೆಲೆಯಲ್ಲಿ ನವೆಂಬರ್ ೨೮ ರಂದು ಪಣಜಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಿರುವ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್ ರವರಿಗೆ “ವೊ ತೊ ಟ್ರೇಲರ್ ಥಾ ಪಿಚ್ಚರ್ ಅಭಿ ಬಾಕಿಹೈ” ಎಂಬ ಸಂದೇಶ ನೀಡಿದೆ.

ಕರ್ನಾಟಕದ ಕಳಸಾ ಬಂಡೂರಿ ಯೋಜನೆಗೆ ನೀಡಿರುವ ಪರವಾನಗಿ ಪತ್ರವನ್ನು ಹಿಂಪಡೆಯದ ಹೊರತು ಗೋವಾಕ್ಕೆ ಕಾಲಿಡಬಾರದು ಎಂಬ ಸಂದೇಶವನ್ನು ಗೋವಾ ಕಾಂಗ್ರೇಸ್ ನೀಡಿದೆ. ನವೆಂಬರ್ ೨೦ ರಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉಧ್ಘಾಟನಾ ಸಮಾರಂಭಲ್ಲಿ ಕೇಂದ್ರ ಮಂತ್ರಿ ಜಾವಡೇಕರ್ ಪಾಲ್ಗೊಂಡ ಸಂದರ್ಭದಲ್ಲಿ ಸಮಾರಂಭದಲ್ಲಿಯೇ ಮೂವರು ಕಾಂಗ್ರೇಸ್ ಕಾರ್ಯಕರ್ತರು ಜಾವಡೇಕರ್ ವಿರುದ್ಧ ಘೋಷಣೆ ಕೂಗಿದ್ದರಿಂದ ಅವರನ್ನು ಬಂಧಿಸಲಾಗಿತ್ತು.

ಇದೀಗ ಗುರುವಾರದಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು ಜಾವಡೇಕರ್ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಮಭದಲ್ಲಿ ಪಾಲ್ಗೊಳ್ಳಲಿರುವ ಜಾವಡೇಕರ್ ರವರಿಗೆ ಗೋವಾದ ಜನತೆಯ ಭಾವನೆಗಳನ್ನು ಮತ್ತೊಮ್ಮೆ ತಿಳಿಸುವ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಇಂದು ” ವೊ ತೊ ಟ್ರೇಲರ್ ಥಾ ಪಿಚ್ಚರ್ ಅಭಿ ಬಾಕಿ ಹೈ” ಎಂಬ ಪೋಸ್ಟರ್ ಹಾಕಲಾಗಿದೆ ಎಂದು ಯುವ ಕಾಂಗ್ರೇಸ್ ಅಧ್ಯಕ್ಷ ವರದ್ ಮಾರ್ದೋಳಕರ್ ಮಾಹಿತಿ ನೀಡಿದರು.
ಗೋವಾ ಪ್ರದೇಶ ಕಾಂಗ್ರೇಸ್ ಸಮೀತಿಯ ವತಿಯಿಂದ “ಮಹದಾಯಿ ಜಾಗರ” ಆಂದೋಲನ ಡಿಜಿಟಲ್ ಹೋರಾಟ ಆರಂಭಿಸಲಾಗಿದ್ದು ಇದೀಗ ಕೇಂದ್ರ ಮಂತ್ರಿ ಜಾವಡೇಕರ್ ರವರಿಗೆ ಸಂದೇಶ ನೀಡುವ ಪೋಸ್ಟರ್‌ನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಲಾಗಿದೆ.

 

ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಮಹದಾಯಿ ಜನಜಾಗೃತಿ ಮೆರವಣಿಗೆ ನಡೆಸುತ್ತಿದ್ದ ಕಾಂಗ್ರೇಸ್ ಯುವ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು.

ರಾಜ್ಯದಲ್ಲಿ ೧೪೪ ನೇ ಕಲಂ ನಿಷೇದಾಜ್ಞೆ ಜಾರಿಯಿರುವ ಸಂದರ್ಭದಲ್ಲಿ ಪಣಜಿಯಲ್ಲಿ ಮಹದಾಯಿ ನದಿ ನೀರು ಉಳಿವಿಗಾಗಿ ಬುಧವಾರ ಜನಜಾಗೃತಿ ಮೆರವಣಿಗೆ ನಡೆಸುತ್ತಿದ್ದ ಕಾಂಗ್ರೇಸ್ ಯುವ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ತಿಂಗಳ ಕಾಲ ೧೪೪ ನೇಯ ಕಲಂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಕರ್ನಾಟಕದ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯು ನೀಡಿದ್ದ ಪರವಾನಗಿ ಪತ್ರವನ್ನು ಇದುವರೆಗೂ ಹಿಂಪಡೆಯದ ಕಾರಣ ಗೋವಾದಲ್ಲಿ ಪ್ರತಿಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಮಹದಾಯಿ ರಕ್ಷಣೆಗಾಗಿ ಹೋರಾಟ ಆರಂಭಿಸಿವೆ.

ಬುಧವಾರ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿರುವ ಐನೊಕ್ಸ ಮತ್ತು ಕಲಾ ಅಕಾಡೆಮಿಯ ಪರಿಸರದಲ್ಲಿ ಕಾಂಗ್ರೇಸ್ ಯುವ ಕಾರ್ಯಕರ್ತರಾದ ವರದ್ ಮಾರ್ದೋಳಕರ್ ಮತ್ತು ಜನಾರ್ಧನ ಭಂಡಾರಿ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಮೆರವಣಿಗೆ ನಡೆಸಲಾಗುತ್ತಿತ್ತು. ರಾಜ್ಯದಲ್ಲಿ ಜಾರಿಯಲ್ಲಿದ್ದ ೧೪೪ ನೇಯ ಕಲಂ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕಾಂಗ್ರೇಸ್ ಯುವ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button