ಕೊಳ್ಳೆಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್, ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಅವರು ಹೇಳಿದಂತೆ ಗೆದ್ದ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಾದ ಎಂಟಿಬಿ ನಾಗರಾಜ್ ಹಾಗೂ ಹೆಚ್.ವಿಶ್ವನಾಥ್ ಕೂಡ ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸ್ ಪ್ರಸಾದ್, ಗೆದ್ದವರಿಗೆ ಮಾತ್ರ ಸಚಿವ ಸ್ಥಾನ. ಸುಪ್ರೀಂ ಕೋರ್ಟ್ ಕೂಡ ಇದನ್ನೇ ಸ್ಪಷ್ಟವಾಗಿ ಹೇಳಿದೆ. ಚುನಾವಣೆಯಲ್ಲಿ ಗೆದ್ದುಬಂದು ಶಾಸಕರಾಗಿ, ನಂತರ ಸಚಿವರಾಗಿ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲೇ ತಿಳಿಸಿದೆ. ಸೋತು ಮತ್ರಿಯಾಗಿ ಎಂದು ಸುಪ್ರೀಂ ಕೋರ್ಟ್ ಹೇಳಿಲ್ಲ ಇದನ್ನು ಅರ್ಥಮಾಡಿಕೊಳ್ಳಬೇಕು. ಸೋತವರಿಗೆ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಧನುರ್ಮಾಸ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರಿಗೆ ಯಾವ ಖಾತೆ ಎಂಬ ಬಗ್ಗೆ ನಾಯಕರು ನಿರ್ಧರಿಸುತ್ತಾರೆ ಎಂದು ತಿಳಿಸಿದಿದರು.
ಇದೇ ವೇಳೆ ಕಪಾಲಿ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದ ಬಳಿಕ ಸ್ತಿಮಿತಕಳೆದುಕೊಂಡಿದ್ದಾರೆ. ಅವರೊಬ್ಬ ಹಿರಿಯ ಹಾಗೂ ಅನುಭವಿ ರಾಜಕಾರಣಿ. ಆದರೀಗ ಅವರ ಹೇಳಿಕೆಗಳಿಗೆ ಅರ್ಥವಿಲ್ಲ. ಕ್ರಿಶ್ಚಿಯನ್ನರಿಗೆ ಪ್ರಾರ್ಥನೆ ಮಾಡಲು ಸೌಲಭ್ಯ ಒದಗಿಸಬೇಕು ಎಂದರೆ ಡಿಕೆಶಿಯವರು ಸಾಮಾಜಿಕ ಸೇವೆ ಮೂಲಕ ಒದಗಿಸಬಹುದಿತ್ತು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ