Latest

ಸದಭಿಮಾನದ ಗೂಡು ಖಾಲಿಯಾಗುವತ್ತ. ಕನ್ನಡಿಗರ ಮನದ ನೆಲ ಬೋಳು ಬೋಳಾಗುವತ್ತ – ಒಂದು ವಿಚಾರ.

– ರವಿ ಕರಣಂ.

ಕನ್ನಡ ನಾಡನ್ನು ಸಶಕ್ತ ನಾಡನ್ನಾಗಿ ಕಟ್ಟುವ ಕೆಲಸವನ್ನು ಇಂದಿನ ಪೀಳಿಗೆಯ ಯುವಕರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಸಮಾಜದ ಹಿರಿಯರು, ಕವಿಗಳು, ಸಾಹಿತಿಗಳು, ಎಲ್ಲ ಬರಹಗಾರರು ಅವರಿವರೆನ್ನದೇ ಎಲ್ಲ ಕನ್ನಡಿಗರು ಮುತುವರ್ಜಿಯಿಂದ ಕೈಗೆತ್ತಿಕೊಳ್ಳಬೇಕು. ಇಂತಹ ವಿಷಯಗಳಲ್ಲಿ, ಅಹಮಿಕೆಯನ್ನು ಬದಿಗಿರಿಸಬೇಕು. ಇದು ನಾಡು-ನುಡಿಗಾಗಿ ಶ್ರದ್ಧಾ ಭಕ್ತಿಯಿಂದ ದುಡಿಯಬೇಕಾದುದು. ಇಲ್ಲಿ ಸ್ವ ಪ್ರತಿಷ್ಠೆ ಅಥವಾ ಹೆಚ್ಚುಗಾರಿಕೆಯು ತಲೆ ಹಾಕಲೇಬಾರದು. ಅದ್ಭುತ ಭಾಷಿಕರಾದುದೇ ನಮ್ಮ ಪುಣ್ಯವೆಂದರಿತು ಸಾಗಬೇಕಿದೆ.

ಹಿಂದೆ ಕವಿಗಳು, ಕಥೆಗಾರರು,ಸಾಹಿತಿಗಳು, ಕಾದಂಬರಿಕಾರರು, ಲೇಖಕರೆಲ್ಲರೂ ಅಖಂಡ ಕರ್ಣಾಟಕ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1982 ರಲ್ಲಿ ಪಾಟೀಲ ಪುಟ್ಟಪ್ಪ, ಡಾ. ರಾಜ್ ಕುಮಾರ್ ಗೋಕಾಕ್ ಚಳವಳಿ ಮಾಡಿದ್ದರು. ನಮಗೀಗ ಅಂತಹದ್ದೇನೂ ಮಾಡಬೇಕಾದ ಅವಶ್ಯಕತೆ ಇಲ್ಲವೆಂದಲ್ಲ. ಮತ್ತೊಂದು ಜಾಗೃತಿ ಮೂಡಿಸುವ ಅಭಿಯಾನ ಶುರುವಾಗಬೇಕಿದೆ. ಚಳುವಳಿ, ಭಾಷಾ ಸಮೃದ್ಧಿಗೆ ಮತ್ತೊಂದು ಹೆಜ್ಜೆಯಿಡಬೇಕಿದೆ. ಇದ್ದುದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಬೇಕಿದೆ. ಕಾರಣ ಆಧುನಿಕ ಬದುಕಿನಲ್ಲಿ ಹಲವು ಭಾಷೆಗಳ ಹೊಡೆತಕ್ಕೆ ನಲುಗುತ್ತಿರುವ ಕನ್ನಡಕ್ಕೆ ಒಂದು ಪ್ರಮಾಣದ ಮಾರ್ಗದ ಅಗತ್ಯತೆಯಿದೆ. ಅದರ ಕಡೆಗಣನೆಯೂ ನಮ್ಮೊಳಗಿನಿಂದಲೇ ಉದಯಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಯಾವ ಸಂದರ್ಭದಲ್ಲಿ ಯಾವ ಭಾಷೆಯ ಅವಶ್ಯಕತೆ ಇರುತ್ತದೆಯೋ ಆ ಸಂದರ್ಭದಲ್ಲಿ ಮಾತ್ರ ಪ್ರಯೋಗಿಸಬೇಕು. ಅದನ್ನು ಬಿಟ್ಟು, ಮಾತೃಭಾಷೆಯ ಬಳಕೆಯನ್ನು ಮಿತಗೊಳಿಸಿ ಅನ್ಯ ಭಾಷೆಯ ಮೋಹಕ್ಕೆ ಬಲಿಯಾಗುವುದಿದೆಯಲ್ಲ. ಅದು ನಿಜಕ್ಕೂ ದುರಂತವೇ ಸರಿ !

ಇದು ಅತಿಯಾದ ಹೊಗಳಿಕೆಯೆಂತಾಗಲೀ, ಉತ್ಪ್ರೇಕ್ಷೆಯೆಂತಾಗಲೀ ಭಾವಿಸಬಾರದು. ನಿಮಗೆ ಗೊತ್ತಿರಬಹುದು. ಇಡೀ ಭಾರತದಲ್ಲಿ ಜೀವನ ಯೋಗ್ಯ, ನೆಮ್ಮದಿಯ ತಾಣವೇನಾದರೂ ಇದ್ದಲ್ಲಿ, ನಿಸ್ಸಂದೇಹವಾಗಿ ನೂರಕ್ಕೆ ನೂರರಷ್ಟು ಅದು ಕರ್ಣಾಟಕವೆಂದೇ ಹೇಳಬೇಕು. ಕೇವಲ ಒಂದೆರೆಡು ವಿಷಯಗಳಲ್ಲ. ಮೂಲಭೂತ ಅವಶ್ಯಕತೆಗಳನ್ನು ಸಂಪೂರ್ಣ ಒದಗಿಸುವಿಕೆಯು ಈ ನೆಲದಲ್ಲಿ ದೊರೆಯುತ್ತದೆ ಎಂಬುದು ಸತ್ಯ.

ನೀವೇನಾದರೂ ಪ್ರವಾಸ ಪ್ರಿಯರಾಗಿದ್ದರೆ ಒಂದು ಸಲ ಬಿಹಾರ, ಝಾರ್ಖಂಡ್, ಛತ್ತೀಸ್‍ಘಡ್ , ತೆಲಂಗಾಣ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಒರಿಸ್ಸಾ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಲ್ಲಿ ಸುತ್ತು ಹಾಕಿ, ಆ ಜನರ ನಡುವೆ ಇದ್ದು ನೋಡಿ. ನಿಮಗೆ ಖಂಡಿತ ಅನುಭವಕ್ಕೆ ಬರುತ್ತದೆ. ನಾವು ಎಷ್ಟು ಸುಲಭವಾಗಿ ನಮ್ಮವರು, ನಾವೆಲ್ಲ ಭಾರತೀಯರು ಎಂದು ಸ್ವೀಕರಿಸುತ್ತೇವೆಯೋ ಹಾಗೇ ಅವರು ಸ್ವೀಕರಿಸುತ್ತಾರೆಯೇ ಎಂಬುದನ್ನು ಮನವರಿಕೆ ಮಾಡಿಕೊಂಡು ಬರಲು ಬಯಸುತ್ತೇನೆ. ಹಾಗೆಂದು ಪ್ರಾದೇಶಿಕತೆಯ ಭಾವವನ್ನು, ಮನಸುಗಳ ನಡುವೆ ಬಿರುಕನ್ನು ಖಂಡಿತ ಮೂಡಿಸಲಾರೆ. ಅದು ನಮ್ಮ ತಾಯ್ನಾಡು ನನಗೆ ಕಲಿಸಿಲ್ಲ. ಸತ್ಯ ಕಹಿಯೆಂಬುದು ನಿಜವೇ.

ಭಾರತದ ಉತ್ತರ ಭಾಗದವರಿಗೆ ನಿಜಕ್ಕೂ ತಾತ್ಸಾರದ ಭಾವ ನೂರಕ್ಕೆ ಶೇ 60 ರಿಂದ 75 ಜನರಲ್ಲಿದೆ. ಅವರು ತೋರುವ ಅಸಹಕಾರದ ವರ್ತನೆ ಬೇಸರ ತರಿಸುತ್ತದೆ. ಕೆಲವರು ಹಣದ ಮುಖವನ್ನು ನೋಡಿ ಸಹಕರಿಸಲು ಮುಂದಾಗುತ್ತಾರೆ. ಇಷ್ಟೆಲ್ಲ ಹೇಳಬೇಕಾದ ಅವಶ್ಯಕತೆ ಇತ್ತು. ಅದಕ್ಕೆ ಹೇಳಿದೆ. ನಮ್ಮ ಉದಾರ ಗುಣ, ನಮ್ಮ ನೆಲಕ್ಕೆ ಬಲವಾದ ಹೊಡೆತ ಕೊಡುತ್ತಿದೆ ಎಂಬುದರಲ್ಲಿ ಲವಲೇಶವೂ ಅನುಮಾನವಿಲ್ಲ. ಗೊತ್ತಿರಲಿ.

ಹೆಚ್ಚಾಗಿ ಗುಜರಾತಿಗಳು, ರಾಜಸ್ಥಾನಿಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ನೆಲೆಯೂರಿ, ಕೇವಲ ಹಣ ಗಳಿಕೆಯೊಂದೇ ಅಲ್ಲದೇ ಸಾಂಸ್ಕೃತಿಕ ರಂಗದಲ್ಲಿ ತೀವ್ರ ತರದ ಬದಲಾವಣೆಗೆ ಕಾರಣಕರ್ತರಾಗುತ್ತಿದ್ದಾರೆಂದರೆ ನೀವು ನಂಬಲಿಕ್ಕಿಲ್ಲ. ಪಾನಿಪೂರಿ, ಗೋಬಿ ಮಂಚೂರಿಗಳನ್ನು ತಿನ್ನಿಸಿದ್ದರೆ ಪರವಾಗಿಲ್ಲ ಎನ್ನಬಹುದು. ಆದರೆ ನವರಾತ್ರಿಯ ಸಂದರ್ಭದಲ್ಲಿ ತಮ್ಮದೇ ನೃತ್ಯ ಪ್ರದರ್ಶನದ (ದಾಂಡಿಯಾ)ಅಸಂಖ್ಯಾತ ಕಾರ್ಯಕ್ರಮಗಳು ನೂರಾರು ತಾಲೂಕುಗಳಲ್ಲಿ ಆಯೋಜಿಸುವ ಮಟ್ಟಕ್ಕೆ ತಮ್ಮ ಕಲೆಯನ್ನು ಪಸರಿಸಲು ತೊಡಗಿ, ಸದ್ದಿಲ್ಲದೇ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮೊದಲ ಸಿಡಿಲ ಹೊಡೆತ ಕೊಟ್ಟಿದ್ದಾರೆ. ನಮ್ಮ ಮುಗ್ಧ ಜನ ಮನೋರಂಜನೆ ಎಂದು ಅವರ ಕಲೆಯನ್ನು ಒಳಕ್ಕೆ ತಂದುಕೊಂಡು, ನಮ್ಮದನ್ನು ಬದಿಗೆ ಸರಿಸುವಲ್ಲಿ ನಿರತರಾಗಿರುವುದು ನಿಮ್ಮ ಅನುಭವಕ್ಕೆ ಬಂದಿದೆಯೇ ? ಅವರೆಂದೂ ಕನ್ನಡ ಕಲಿಯುವುದಿಲ್ಲ. ಬದಲಿಗೆ ನಮಗೆ ಹಿಂದಿ ಕಲಿಸಿ, ತಮ್ಮ ಕಾರ್ಯ ಸಾಧನೆಗೆ ಅನುಕೂಲ ಮಾಡಿಕೊಳ್ಳುತ್ತಾರೆ. ಅವರಲ್ಲಿನ ಸ್ವಾಭಿಮಾನ, ಭಾಷಾ ದುರಭಿಮಾನಕ್ಕೆ ಎಣೆಯಿಲ್ಲ. ನಮ್ಮವರಿಗೆ ಅವರೊಂದಿಗೆ ಕನ್ನಡದಲ್ಲಿ ಮನಸೇ ಬಾರದು. ಅವರಂತೆಯೇ ಹೋಗಿಬಿಡುವುದು ಇದೆಯಲ್ಲ ಅತ್ಯಂತ ಅಪಾಯಕಾರಿ.

ಇನ್ನು ಉತ್ತರ ಪ್ರದೇಶ, ಬಿಹಾರದಿಂದ ಅತಿ ಹೆಚ್ಚು ಕಾರ್ಮಿಕರು ವಲಸೆ ಬರುತ್ತಿರುವುದು ಅಪಾಯದ ಮುನ್ಸೂಚನೆ. ಕಟ್ಟಡಗಳಿಗೆ ಬಣ್ಣ ಹಾಕುವ ಕೆಲಸದಲ್ಲಿ ನಿಪುಣರು. ಎಂತಹ ಕಟ್ಟಡವನ್ನಾದರೂ ಸರಿಯೇ, ಹಗ್ಗ, ಕಟ್ಟಿಗೆಯ ಕೋಲುಗಳಿಂದ ಕಟ್ಟಿ, ಗಗನ ಚುಂಬಿ ಕಟ್ಟಡಗಳಿಗೆ ಬಣ್ಣ ಹಾಕಿ ಬಿಡುತ್ತಾರೆ. ಇಲ್ಲಿಗೆ ಬಂದು ನಮ್ಮವರ ಉದ್ಯೋಗಗಳನ್ನು ಕಸಿದುಕೊಂಡು ತಾವು ಬದುಕುತ್ತಾರೆ. ಆದರೆ ಅವರ ಜಾಗಕ್ಕೆ ನಾವು ಹೋದಲ್ಲಿ, ಸರಿಯಾದ ವಿಳಾಸವನ್ನು ಹೇಳಲು ಮುಂದಾಗುವುದಿಲ್ಲ ಎಂದರೆ ನಂಬುತ್ತೀರಾ ? ಮನೆ ಬಾಡಿಗೆ ಕೊಡುವುದಿಲ್ಲ. ಗ್ಯಾಸ್ ಸಿಲಿಂಡರ್ ಇತ್ಯಾದಿ ಜೀವನಾವಶ್ಯಕ ವಸ್ತುಗಳನ್ನು ಹೊಂದಲು ಅನುಕೂಲ ಕಲ್ಪಿಸಿಕೊಡುವುದಿಲ್ಲ. ಇದು ಪ್ರತ್ಯಕ್ಷ ಅನುಭವ. ಅಸಹಕಾರ ತೋರುವುದು ಸರ್ವೇ ಸಾಮಾನ್ಯ. ಆದರೂ ನಾವು ಸಹನಾಶೀಲರು. ಸಹಿಸಿಕೊಂಡು ಬಂದು ಬಿಡುತ್ತೇವೆ.

ತಮ್ಮ ನೆಲದಲ್ಲಿ ಬದುಕಲು ಯೋಗ್ಯ ವಾತಾವರಣವಿಲ್ಲ. ಜೀವನಾವಶ್ಯಕ ವಸ್ತುಗಳ ಕೊರತೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ ಅವರನ್ನು ವಲಸಿಗರನ್ನಾಗಿ ಮಾಡಿದ್ದು ಕಠೋರ ಸತ್ಯ. ಮನಸಾರೆ ಒಂದು ಲೋಟ ನೀರು ಕೊಡಲು ಮುಂದಾಗದ ಈ ಜನರನ್ನು ನಮ್ಮ ನೆಲ ಅದೆಷ್ಟು ಭವ್ಯವಾಗಿ ಸ್ವಾಗತಿಸುತ್ತದೆ ಎಂದು ನೋಡಿದರೆ ಅಚ್ಚರಿ! ಈಗೀಗ ಅವರಿಗೆ ಬಾಡಿಗೆಗೆ ಅಂಗಡಿಗಳನ್ನು, ಮನೆಗಳನ್ನು ಕೊಡಲು ನಮ್ಮವರು ಉತ್ಸುಕತೆಯಲ್ಲಿದ್ದಾರೆ. ಇದ್ದ ಕನ್ನಡಿಗರನ್ನು ಖಾಲಿ ಮಾಡಿಸಿ, ಅವರಿಗೆ ಕರೆದು ಕೊಡುತ್ತಿದ್ದಾರೆ. ಕಾರಣ ಗೊತ್ತಾ ? ಏಳು ಎಂಟು ಸಾವಿರ ರೂಪಾಯಿಗಳ ಬಾಡಿಗೆ ಅಂಗಡಿಗಳನ್ನು ಮಾರ್ವಾಡಿಗಳು, 20-25 ಸಾವಿರ ರೂಗಳಿಗೆ ತೆಗೆದುಕೊಂಡು, ಕಿರಾಣಿ, ಬಟ್ಟೆ, ಎಲೆಕ್ಟ್ರಿಕ್, ಬೇಕರಿ ಹೀಗೆ ಹಲವು ತರದಲ್ಲಿ ವ್ಯಾಪಾರಕ್ಕಿಳಿಯುತ್ತಾರೆ. ಅಲ್ಲೇ ನಮ್ಮವರು ನಮ್ಮವರಿಂದಲೇ ಜಾಗ ಖಾಲಿ ಮಾಡಿ, ಬೇರೆಯವರಿಗೆ ಮಣೆ ಹಾಕುವುದು ಕೇವಲ ಹಣಕ್ಕಾಗಿ. ಆ ಮೂಲಕ ನಾಡಿಗೆ ಅಪಚಾರವೆಸಗುತಿದ್ದಾರೆ. ಒಬ್ಬರ ಬದುಕನ್ನು ಕಿತ್ತುಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುವಲ್ಲಿ ನಮ್ಮವರು ಹೇಗೆ ಸಹಕರಿಸುವ ಮನಸಾಯಿತೆಂದರೆ ಎಂಜಲು ಕಾಸು ! ಹಣದ ಹಪಾಹಪಿತನ !

ಅವರು ಇಷ್ಟು ಹಣ ಎಲ್ಲಿಂದ ತರುತ್ತಾರೆಂದರೆ ಅವರ ಸಮುದಾಯಗಳಲ್ಲಿ ಬಲು ಒಗ್ಗಟ್ಟು. ಕೇವಲ ಎರೆಡು ಪರ್ಸೆಂಟ್ ಬಡ್ಡಿಯಂತೆ ಲಕ್ಷ ಲಕ್ಷ ಹಣ ಕೊಟ್ಟು, ಮೇಲ್ವಿಚಾರಣೆಯಲ್ಲಿ ಇಟ್ಟಿರುತ್ತಾರೆ. ಕ್ರಮೇಣ ಹಣ ವಾಪಾಸ್ ಪಡೆದು, ಅವನು ನೆಲೆ ನಿಂತ ಮೇಲೆ, ಅವನಿಂದ ಮತ್ತೋರ್ವನಿಗೆ ಹಣ ಕೊಡಿಸುವ ಜಾಲ ಹಬ್ಬಿದೆ. ಹೀಗೆ ಬೆಳೆಸುವ ಕಲೆ ಮುಂದುವರೆದು, ಆ ಮೂಲಕ ಇಡೀ ದೇಶಾದ್ಯಂತ ಸಮುದಾಯದ ವ್ಯಾಪಾರ ಪ್ರಸರಣದ ಗುರಿ ಗುಟ್ಟಾಗಿದೆ. ಆದರೆ ನಮ್ಮವರ ಸ್ಥಿತಿ ಗತಿ ನೋಡಿ. ನಮ್ಮವರ ಬದುಕನ್ನು ನಾವೇ ಕಿತ್ತುಕೊಳ್ಳುತ್ತಿದ್ದೇವೆ. ಅವರಲ್ಲಿ ಒಗ್ಗಟ್ಟು ನಮ್ಮಲ್ಲಿ ಬಿಕ್ಕಟ್ಟು ! ಹಣದಲ್ಲಿ ಮುಗ್ಗಟ್ಟು !

ಪರ ರಾಜ್ಯದವರ ವಲಸೆಗೆ ಮಿತಿಯಿಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಅನುಕೂಲವಿದೆಯೋ ಅಷ್ಟೇ ಅಸಮಾಧಾನಕ್ಕೂ ಎಡೆ ಮಾಡುತ್ತದೆ. ಹಾಗೆಂದ ಮಾತ್ರಕ್ಕೆ ನಿರಂಕುಶ, ರಾಜಪ್ರಭುತ್ವ ಒಳ್ಳೆಯದೆಂದರ್ಥವಲ್ಲ. ಇತಿಮಿತಿಗಳು ಬೇಕಲ್ಲ. ನೋಡಿ. ಇರಾನಿಗಳು, ಬಾಂಗ್ಲಾ ದೇಶದ ಜನರ ಒಳ ನುಸುಳುವಿಕೆ ಸದ್ದಿಲ್ಲದೇ ನಡೆದು , ಕಡೆಗೆ ಯಾರು ನಮ್ಮವರು ಎಂಬಂತಾಗಿ ಹೋಗುತ್ತದೆ. ಅವರ ಅಕ್ರಮ ಚಟುವಟಿಕೆಗಳು ದೇಶದ ಹಿತಕ್ಕೆ ಮಾರಕ. ಅದಕ್ಕಾಗಿ ತಂದ ಯೋಜನೆಯನ್ನು ನಮ್ಮವರೇ ಪ್ರತಿಭಟಿಸಬೇಕೇ ? ನಾನೊಬ್ಬ ಭಾರತೀಯ ಪ್ರಜೆ ಎಂದು ತೋರಿಸಿಕೊಳ್ಳಲು ಒಂದು ಆಧಾರ ಕೇಳಿದರೆ, ಅದರಲ್ಲೂ ರಾಜಕೀಯವೇ! ಕೇವಲ ಮತಗಳಿಗಾಗಿ ! ಓಲೈಕೆಗೊಂದು ಮಿತಿ ಬೇಡವೇ ? ರಾಜಕಾರಣದ ತುಷ್ಟೀಕರಣವೆಂದರೆ ತಪ್ಪೇನು ? ದೇಶದ ಭದ್ರತೆ, ಹಿತಕ್ಕಿಂತ ಮತಗಳು ಮುಖ್ಯವಾಗುತ್ತದೆಯೇ ? ಭಯೋತ್ಪಾದಕರಿಗೆ ಆಸರೆಯ ತಾಣವನ್ನು ಇವರೇ ಕೊಟ್ಟಂತಲ್ಲವೇ ? ಅದಿರಲಿ. ಸಧ್ಯದ ವಿಚಾರ ನಮ್ಮ ನೆಲದ ಭಾಷೆ, ನೆಲದ ರಕ್ಷಣೆ.

ಆ ನೆಲದ ನುಡಿಯನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಎದುರಾಗುತ್ತಿದೆ. ಒಂದು ದೇಶ, ಒಂದು ಭಾಷೆ, ಒಂದೇ ಶಿಕ್ಷಣ ಹೀಗೇ ಒಂದೇ ಮಾಡಲು ಹೊರಟ ಕೇಂದ್ರ ಸರ್ಕಾರದ ನಿರ್ಧಾರಗಳು ಮನಸ್ಸನ್ನು ಒಡೆಯುತ್ತವೆಯೇ ಹೊರತು, ದೇಶವನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಈ ನೆಲ ನಾಗರಿಕತೆಯ ಆದಿಯಿಂದಲೂ ಬಹು ಭಾಷೆ, ಧರ್ಮ, ಪಂಥ,ಸಂಸ್ಕೃತಿ, ಆಹಾರ, ಜೀವನ ಕ್ರಮ, ವೇಷಭೂಷಣ, ಕಲೆ ಹಲವಾರು ವಿಷಯಗಳಲ್ಲಿ ವೈವಿಧ್ಯತೆ ಹೊಂದಿದ್ದು, ಅದು ಜಗತ್ತಿನ ನಡೆವಳಿಕೆಯ ಮಾರ್ಗಕ್ಕೆ ಕಳಸಪ್ರಾಯದಂತಿದೆ. ಬದಲಾವಣೆ ಇಂತಹ ವಿಷಯದಲ್ಲಿ ಅಸಾಧ್ಯ. ಒಂದು ಮಾರ್ಗದಲ್ಲಿ ನೂರಾ ನಲವತ್ತು ಕೋಟಿ ಜನರನ್ನು ಹಿಡಿದಿಡಲು ಮೂರ್ಖತನವೇ. ಇಂತಹ ಸಂವೇದನಾಶೀಲ ವಿಷಯಗಳಿಗೆ ಕೈ ಹಾಕಿದ್ದೇ ಆದರೆ, ಸಾಮಾಜಿಕ ಸ್ವಾಸ್ಥ್ಯ ಹಾಳಾಗಿ, ದ್ವೇಷಪೂರಿತ ವಾತಾವರಣ ನಿರ್ಮಾಣವಾಗುತ್ತದೆ. ಹಿಂದಿ ಭಾಷೆಯನ್ನು ರಾಜ್ಯಗಳ ಮೇಲೆ ಹೇರ ಹೊರಟ ಮಂದಿಗೆ, ನಮ್ಮ ಭಾಷೆಯನ್ನು ಕಲಿಯಿರಿ ಎಂದರೆ ಅವರ ನಾಲಿಗೆ ಹೊರಳುತ್ತದೆಯೇ ? ಅವರ ಭಾಷೆ ನಮಗೆ ಅವಶ್ಯವಿದ್ದರೆ ಮಾತ್ರ ಕಲಿಯಬಹುದು. ಇಲ್ಲವಾದರೆ ಬೇಕಿಲ್ಲ. ಆದರೆ ಶಾಲೆಗಳಲ್ಲಿ ತೃತೀಯ ಭಾಷೆಯನ್ನಾಗಿ ಕಡ್ಡಾಯ ಮಾಡಿದ್ದು ಸರಿಯೇನೂ ಅಲ್ಲ. ಅದು ಐಚ್ಚಿಕವಾಗಿರಬೇಕು ಅಷ್ಟೇ. ಇಂದು ಅದನ್ನು ಕಲಿತು ಕಟ್ಟೆ ಹಾಕಿದ್ದಾದರೂ ಏನು ?
ನಾವಷ್ಟೇ ದೇಶದ ಐಕ್ಯತೆ, ವ್ಯವಹಾರಕ್ಕೆಂದು ಹಿಂದಿ ಕಲಿಯಬೇಕೇ ? ಉಳಿದವರು ಕನ್ನಡ ಕಲಿಯಬಾರದೇ ? ಹೀಗೇ ವಾದಕ್ಕಿಳಿದರೆ, ಮುಗಿಯದ ಕಥೆ.

ಇಂದು ನಮ್ಮ ರಾಜಧಾನಿಯಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರ ನೆಲೆಸುವಿಕೆಯೇ ಹೆಚ್ಚಾಗಿದೆಯೆಂದು ಕನ್ನಡಿಗರ ಅಳಲು. ಗಡಿ ಹಂಚಿಕೊಂಡ ತಮಿಳು ನಾಡು, ಕೇರಳ, ಆಂಧ್ರದವರು ಅತಿ ಹೆಚ್ಚು ವಲಸೆ ಬರುತ್ತಿರುವುದು ಒಂದೆಡೆ. ಮತ್ತೊಂದೆಡೆ ಕನ್ನಡದ ನೆಲದಲ್ಲಿ ತಮ್ಮ ಛಾಪು ಮೂಡಿಸುತ್ತಿರುವುದರ ಜೊತೆಗೆ, ನಮ್ಮ ಕನ್ನಡಿಗರನ್ನು ಬಹು ಭಾಷಿತರನ್ನಾಗಿಸುತ್ತಾರೆಯೇ ಹೊರತು, ತಾವೆಂದೂ ಕನ್ನಡ ಕಲಿಯಲಾರರು. ಇದರ ಬಗ್ಗೆ ಪರ-ವಿರೋಧ ಏನೇ ಆದರೂ ಕನ್ನಡ ಭಾಷಾ ಪ್ರಯೋಗದ ಪ್ರಮಾಣವೆಷ್ಟು ? ಎಂಬುದನ್ನು ತೋರಿಸಬೇಕು. ಯಾರೂ ಭಾಷೆ ಉಳಿಸುವ ಹೋರಾಟ ಮಾಡಿದ್ದಿಲ್ಲ. ಕನ್ನಡಕ್ಕೇಕೆ ಇಂಥದ್ದೊಂದು ದುರ್ಗತಿ ?

ಅಂದರೆ ನಮ್ಮೊಳಗೆ ನಮ್ಮತನದ ಬಗ್ಗೆ ಅರಿವಿಲ್ಲವೆಂದುಕೊಳ್ಳಬೇಕೇ ? ಅಭಿಮಾನ ಶೂನ್ಯರೆಂದುಕೊಳ್ಳಬೇಕೇ ? ಅಥವಾ ನಮ್ಮಮೇಲಿನ ಆಕ್ರಮಣಗಳೆಂದುಕೊಳ್ಳಬೇಕೆ ? ಒಂದು ತಿಳಿದಂತಾಗಿದೆ. ನಮ್ಮ ಭಾಷೆಯ ಬಗೆಗೆ ಏಕೆ ಉಳಿದವರಿಗೆ ಅಸಡ್ಡೆ? ಯಾವ ಭಾಷೆಯನ್ನು ತೆಗಳದ ಕನ್ನಡಿಗರ ಮೇಲೆ, ಈ ಪರಿ ಘೋರ ಅನ್ಯಾಯ ? ಬೆಳಗಾವಿ ಭಾಷೆಯ ದೃಷ್ಟಿಯಿಂದ ಗಲಭೆ ಪೀಡಿತ ಪ್ರದೇಶ. ಅದಕ್ಕೆ ಪರಿಹಾರವಿದ್ದೂ, ನಿಭಾಯಿಸಲು ಮುಂದಾಗುವುದಿಲ್ಲ. ಕಾರಣ, ಆ ವಿಷಯವೇ ಚುನಾವಣೆಯಲ್ಲಿ ಮುನ್ನೆಲೆಗೆ ಬಂದು, ಮತ ಕಬಳಿಕೆಗೆ ದಾರಿ ಮಾಡಿಕೊಳ್ಳುವ ಒಂದು ವರ್ಗವಿದೆ. ಆದರೆ ಅದು ಕಾರ್ಯ ಸಾಧುವಾಗದೇ ಜನತೆ ಎಚ್ಚೆತ್ತಿದ್ದಾರೆಂಬುದು ಈಗ ಮನವರಿಕೆಯಾಗಿದೆ. ಆದರೆ ಇದರಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂಬುದನ್ನು ಮನಗಾಣಬೇಕು. ಅದು ದಿಟವೂ ಕೂಡಾ. ಸುತ್ತಮುತ್ತಲು ಇರುವ ರಾಜ್ಯಗಳವರು ಕೆಲವರು ಪ್ರದೇಶಗಳನ್ನು ಕೇಳುತ್ತಲೇ ಇರುತ್ತಾರೆ. ಗೋವಾದವರು ದಾಂಡೇಲಿ ಜೋಯಿಡಾ ಪ್ರದೇಶಗಳನ್ನು, ಆಂಧ್ರದವರು ಬಳ್ಳಾರಿ ಪ್ರದೇಶಗಳ ಮೇಲೆ ಕಣ್ಣು ಹಾಗೆಯೇ ಕಾಸರಗೋಡನ್ನು ಕೇರಳದವರು ತಮ್ಮಲ್ಲಿ ಇಟ್ಟುಕೊಂಡಿದ್ದಾರೆ. ಜತ್ತ, ಮತ್ತಿತರ ಕನ್ನಡ ಭಾಷಿಕರು ಇರುವ ಸ್ಥಳಗಳು ಮಹಾರಾಷ್ಟ್ರದಲ್ಲಿ ಸೇರಿ ಹೋಗಿವೆ.
ಉದಾರತೆ ಎಂಬುದು ಒಂದು ಬದಿಯಲ್ಲಿದ್ದರೆ ಸಾಲದು. ಎರೆಡೂ ಬದಿಯಿಂದಲೂ ಸಂಧಿಸಬೇಕು.

ಈ ಎಲ್ಲ ದೃಷ್ಟಿಕೋನಗಳಿಂದ ಕನ್ನಡಿಗರು ಒಂದಾಗಬೇಕು. ಕನ್ನಡ ಭಾಷೆ, ನೆಲ-ಜಲ ಆಚಾರ-ವಿಚಾರ, ಸಂಸ್ಕೃತಿ, ಸಾಹಿತ್ಯ, ಕಲೆ ಚಿತ್ರಕಲೆ ಪ್ರತಿಯೊಂದನ್ನು ಕೂಡ, ಜಾಗತಿಕ ಮಟ್ಟದಲ್ಲಿ ಎಬ್ಬಿಸಿ ನಿಲ್ಲಿಸಲು ಮುಂದಾಗಬೇಕು. ಉದಾರತೆಯು ಇರಬೇಕು. ಸಹಿಸಿಕೊಳ್ಳುವ ಗುಣವು ಇರಬೇಕು. ಹಾಗೆಂದ ಮಾತ್ರಕ್ಕೆ ನಮ್ಮತನವನ್ನು ಸಡಿಲ ಮಾಡಿಕೊಂಡು ಬದುಕಬೇಕು ಎಂದರ್ಥವಲ್ಲ. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಸಿಡಿದೆದ್ದು ನಿಲ್ಲುವುದು ಅನಿವಾರ್ಯವಾಗುತ್ತದೆ. ಕಾರಣ ಅದು ನಮ್ಮ ತಾಯಿ ನೆಲ. ತಾಯಿ ನುಡಿ. ತಾಯಿ ಸಂಸ್ಕೃತಿ. ಹಾಗಾಗಿ ತಾಯಿಗೆ ಪೆಟ್ಟಾದರೆ ಪ್ರತಿಭಟಿಸಲೇ ಬೇಕಾಗುತ್ತದೆ.

ಅಭಿಯಾನಗಳು, ಕಾರ್ಯ ಕ್ರಮಗಳು, ಚಟುವಟಿಕೆಗಳು ಯಾವತ್ತೂ ಕ್ರಿಯಾಶೀಲವಾಗಿರಬೇಕು. ಸಾಹಿತ್ಯ ಸಮ್ಮೇಳನ ರಾಜಕೀಯ ಪ್ರೇರಿತವಾಗಿದೆ. ಅದರ ಮೂಲ ಉದ್ದೇಶಗಳು ಮಾಯವಾಗಿ, ಸರ್ಕಾರದ ಆದೇಶಗಳಂತೆ ನಡೆಯುವಂತಾಗಿದೆ. ಸ್ವತಂತ್ರ ವಿಚಾರಗಳಿಗೆ ಬೆಲೆಯೂ ಇಲ್ಲ. ಕಾರ್ಯರೂಪಕ್ಕೆ ಬರುವುದೂ ಕಡಿಮೆ. ಕನ್ನಡದ ಬಗೆಗೆ ಜಾಗೃತಿ ಮೂಡಿಸುವಂತಹ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿ, ಆ ಮೂಲಕ ಮಕ್ಕಳಲ್ಲಿ ಜಾಗೃತಿಯನ್ನು ತರಬೇಕು. ಇಂದು ಆ ಕಾರ್ಯವನ್ನು ಪ್ರಾರಂಭ ಮಾಡಿದರೆ,ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ, ಕನ್ನಡ ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಮತ್ತು ಅದೊಂದು ನಿರೀಕ್ಷೆಯೂ ಕೂಡಾ. ಅಂತಹ ಮನಸ್ಸನ್ನು ಉಳ್ಳವರು ಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕು.

*ಮೂವರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ತಾಯಿ ಆತ್ಮಹತ್ಯೆ*

https://pragati.taskdun.com/mother3-childrensuicidevijayapura/

 ಜ.29ರಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ

https://pragati.taskdun.com/veerarani-kittoor-chennamma-mega-drama-from-jan-29/

*ನನ್ನ ಮುಂದಿನ ಜನ್ಮ ಶಿಗ್ಗಾವಿಯಲ್ಲೇ ಆಗಲಿ – ಮುಖ್ಯಮಂತ್ರಿ ಬೊಮ್ಮಾಯಿ*

https://pragati.taskdun.com/may-my-next-birth-be-in-shiggawi-chief-minister-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button