ಲೀಲಾವತಿಯವರ ನಿಧನ ವಾರ್ತೆ ಸಮಸ್ತ ಕನ್ನಡಿಗರಿಗೆ ಆಘಾತ ತಂದಿದೆ: ನಾಡೋಜ ಡಾ. ಮಹೇಶ ಜೋಶಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕನ್ನಡ ನಾಡಿನ ಹಿರಿಯ ನಟಿ ಲೀಲಾವತಿ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಕನ್ನಡದ ಕಲಾ ಸಾಧಕಿಯೊಬ್ಬರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ, ಸರಿಸುಮಾರು ೬೦೦ ಚಿತ್ರಗಳಲ್ಲಿ ನಟಿಸುವ ಮೂಲಕ ದೇಶದ ಚಿತ್ರ ಜಗತ್ತಿಗೆ ಕನ್ನಡದ ಅಮ್ಮ ಎಂದು ಗುರುತಿಸಿಕೊಂಡ ಲೀಲಾವತಿಯವರ ನಿಧನ ವಾರ್ತೆ ಸಮಸ್ತ ಕನ್ನಡಿಗರಿಗೆ ಆಘಾತ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಸಂತಾಪ ಸೂಚಿಸಿದ್ದಾರೆ.
ಲೀಲಾವತಿ ಅಮ್ಮನವರು ತಮ್ಮೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಹಿಂದೆ ದೂರದರ್ಶನದ ನಿರ್ದೇಶಕರಾಗಿದ್ದಾಗ ನಡೆಸಲಾಗುತ್ತಿರುವ ಮಧುರ ಮಧುರ ವೀ ಮಂಜುಳಗಾನ ಕಾರ್ಯಕ್ರಮದಲ್ಲಿ ಅನೇಕ ಸಲ ಲೀಲಾವತಿಯವರು ಭಾಗವಹಿಸಿದ್ದರು. ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ನಮ್ಮೊಂದಿಗೆ ಇದ್ದು ಸದಾ ಮಾರ್ಗದರ್ಶನವನ್ನು ನೀಡುತ್ತಿದ್ದರು. ಕನ್ನಡ ನಾಡು,ನುಡಿ, ಕಲೆ ಸಂಸ್ಕೃತಿಯ ಬಗ್ಗೆ ಅಪಾರ ಕಳಕಳಿ ಹೊಂದಿರುವ ಹಿರಿಯ ನಟಿ ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು ೬೦೦ ಸಿನಿಮಾಗಳಲ್ಲಿ ನಟಿಸಿದ್ದರು.. ಕನ್ನಡ ಭಾಷೆಯಲ್ಲಿ ಬರೋಬ್ಬರಿ ೪೦೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. “ಭಕ್ತ ಕುಂಬಾರ’, “ಮನ ಮೆಚ್ಚಿದ ಮಡದಿ’ ಮತ್ತು “ಸಂತ ತುಕಾರಾಂ” ಮೊದಲಾದ ಚಿತ್ರಗಳಲ್ಲಿನ ಸ್ಮರಣೀಯ ಅಭಿನಯಕ್ಕಾಗಿ ಅವರು ಹೆಸರುವಾಸಿಯಾಗಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘ಡಾ.ರಾಜಕುಮಾರ್ ಪ್ರಶಸ್ತಿ’ಯನ್ನು ೧೯೯೯-೨೦೦೦ ಸಾಲಿನಲ್ಲಿ ಲೀಲಾವಯವರು ಪಡೆದಿದ್ದು ಅಂದು ತಮ್ಮ ಚಿತ್ರ ಬದುಕಿನ ಸಾರ್ಥಕತೆಗಳನ್ನು ವ್ಯಕ್ತಪಡಿಸಿದ ಕ್ಷಣಗಳನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೆನಪಿಸಿಕೊಂಡರು.
೨೦೦೮ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಚಿಕ್ಕಂದಿನಿಂದಲೇ ಕಲೆಯ ಕುರಿತು ಆಸಕ್ತಿಯನ್ನು ಹೊಂದಿದ್ದ ನಟಿ ಲೀಲಾವತಿ ಅವರು, ಮೈಸೂರಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ವೃತ್ತಿ ರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ನಂತರದ ದಿನಗಳಲ್ಲಿ ಚಿತ್ರರಂಗವನ್ನು ಪ್ರವೇಶಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದ ಲೀಲಾವತಿ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಲೀಲಾವತಿಯವರ ಮೂಲ ಹೆಸರು ಲೀಲಾಕಿರಣ್.ಎನ್ನುವುದಾಗಿ. ಅಭಿನಯದ ಆಕಾಂಕ್ಷೆಯನ್ನು ಹೊತ್ತು ಮೈಸೂರಿಗೆ ಬಂದಿಳಿದ ಅವರಿಗೆ ದೊರೆತಿದ್ದು ೧೯೪೯ರಲ್ಲಿ ಡಿ. ಶಂಕರಸಿಂಗ್ ಅವರ ನಾಗಕನ್ನಿಕಾ ಚಿತ್ರದಲ್ಲಿ ನಾಯಕಿ ನಾಗಕನ್ಯೆಗೆ ಗಾಳಿ ಬೀಸುವ ಸಖಿ ಪಾತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಮಾಡಿದ ಲೀಲಾವತಿಯವರ ಸಾಧನೆ ಪ್ರತಿಯೊಬ್ಬ ಕನ್ನಡಿಗರು ಮೆಚ್ಚಿಕೊಳ್ಳುವಂತಹದ್ದು ಎನ್ನುವ ಅಭಿಪ್ರಾಯವನ್ನು ನಾಡೋಜ ಡಾ. ಮಹೇಶ ಜೋಶಿ ಅವರು ವ್ಯಕ್ತಪಡಿಸಿದರು.
ಲೀಲಾವತಿಯವರು ನಟಿಸಿದ ʻಕನ್ನಡದ ಕಂದʼ, ‘ಗೆಜ್ಜೆಪೂಜೆ’, “ಸಿಪಾಯಿ ರಾಮು’, ‘ಡಾಕ್ಟರ್ ಕೃಷ್ಣ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿಯ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು.
ಮಗ ವಿನೋದ್ ರಾಜ್ ಅವರ ಜೊತೆ ನೆಲಮಂಗಲ ಸಮೀಪದ ಸೋಲದೇವನಹಳ್ಳಿಯಲ್ಲಿ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದ ಅವರು ಜನ ಸೇವೆಯಲ್ಲಿ ಸಹ ತೊಡಗಿಕೊಂಡಿದ್ದರು. ನಾಡು, ನುಡಿ ಕಲೆ ಸಂಸ್ಕೃತಿಗೆ ನಿತ್ಯವೂ ಗೌರವಿಸುವ ಲೀಲಾವತಿ ಸಮಸ್ತ ಕನ್ನಡಿಗರಿಂದ ಅಮ್ಮಾ ಎಂದೇ ಕರೆಸಿಕೊಂಡವರು. ಅವರ ಸಾವು ಕನ್ನಡ ಚಿತ್ರರಂಗಕ್ಕೆ, ಕನ್ನಡ ನಾಡಿಗೆ ಅವರ ಅಭಿಮಾನಿಗಳ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಲೀಲಾವತಿಯವರು ಕನ್ನಡ ಭಾಷೆ, ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವದಿಂದ ಸ್ಮರಿಸಿ, ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ