ಪ್ರಗತಿವಾಹಿನಿ ಸುದ್ದಿ, ಮಾಂಜರಿ -: ನೆರೆಯ ವಿಕೋಪಕ್ಕೆ ಸಿಕ್ಕಿ ಕಷ್ಟದಲ್ಲಿರುವ ರೈತರ ಸಮಸ್ಯೆಗೆ ಸ್ಪಂಧಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಸುಕ್ಷೇತ್ರ ಯಡೂರದ ಶ್ರೀ ವೀರಭದ್ರ ದೇವಸ್ಥಾನ ಮತ್ತು ಶ್ರೀ ಕಾಡಸಿದ್ದೆಶ್ವರ ಮಠದ ವಿಶಾಳಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಚೇತನ ಪ್ರಶಸ್ತಿ ಪ್ರಧಾನ, ಗೋ ಕೈಲಾಸ ಉದ್ಘಾಟನೆ, ನೆರೆ ಸಂತ್ರಸ್ತರ ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ ಮತ್ತು ಯಾತ್ರಿ ನಿವಾಸ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಬಾರಿಗೂ ರೈತರಿಗೆ ಅನುಕೂಲವಾಗುವ ರೈತರ ಬಜೇಟ್ ಮಂಡನೆ ಮಾಡಲಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಮಾತನಾಡಿ, ಸುಕ್ಷೇತ್ರ ಯಡೂರಮಠಕ್ಕೆ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಂದ ನಂತರ ಈ ಭಾಗದ ಚಿತ್ರಣವನ್ನೇ ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮುಂದಿನ ಬಾರಿಯೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದ್ದು, ಮುಂದಿನ ಮುಖ್ಯಮಂತ್ರಿ ಬಿ.ವೈ.ವಿಜಯೇಂದ್ರ ಆಗಲಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್‌ನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಸುಕ್ಷೇತ್ರ ಯಡೂರು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಯಡೂರಿನ ಜಾತ್ರೆ ಕೇವಲ ದೇವರ ದರ್ಶನ ಮತ್ತು ತೇರು ಎಳೆಯಲು ಸೀಮಿಗೊಳಿಸದೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಯಡೂರಿನ ಶ್ರೀಮಠದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಯಾತ್ರಿ ನಿವಾಸದ ಅಡಿಗಲ್ಲು ಸಮಾರಂಭ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ವ್ಹಿಆರ್‌ಎಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅವರಿಗೆ ವಿಶ್ವ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಶೈಲ ಹಾಗೂ ಯಡೂರದ ಶ್ರೀ ೧೦೦೮ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು.
ಹೊನ್ನಾಳಿಯ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಪ್ರಭುದೇವ ಶಿವಾಚಾರ್ಯ ಸ್ವಾಮಿಜಿಗಳು, ಸಿದ್ದನಂದೇಶ್ವರ ಶಿವಾಚಾರ್ಯ ಸ್ವಾಮಿಜಿಗಳು ಹಿರೇಕುರವತ್ತಿ, ಬಂಡಿಗಣ ಯ ಚಕ್ರವರ್ತಿ ದಾನೇಶ್ವರ ಸ್ವಾಮಿಜಿಗಳು, ಮಾಜಿ ಶಾಸಕ ಸಂಜಯ ಪಾಟೀಲ, ಶಂಕರಗೌಡಾ ಪಾಟೀಲ, ಅಜೀತ ದೇಸಾಯಿ, ಮಹೇಶ ಭಾತೆ ಮುಂತಾದವರು ಉಪಸ್ಥಿತರಿದ್ದರು. ಸೋಗುರೇಶ್ವರ ಮಹಾಸ್ವಾಮಿಗಳು ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ