Belagavi NewsBelgaum NewsKannada NewsKarnataka News

ಜಗತ್ತಿನ ಪರಿಪೂರ್ಣವಾದ ಸುಂದರ ಭಾಷೆ ಎಂದರೆ ಕನ್ನಡ: ನಾಡೋಜ ಮಹೇಶ್ ಜೋಶಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗತ್ತಿನ ಪರಿಪೂರ್ಣವಾದ ಮತ್ತು ಅತ್ಯಂತ ಸುಂದರವಾದ ಭಾಷೆ ಎಂದರೆ ಅದು ಕನ್ನಡ ಮಾತ್ರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳ 135ನೇ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸ್ವಂತ ಲಿಪಿಯನ್ನು ಹೊಂದಿರುವ ಸ್ವಂತ ವ್ಯಾಕರಣವನ್ನು ಹೊಂದಿರುವ ಸ್ವಂತ ಅಂಕಿ  ಅಂಕಿಗಳನ್ನು ಹೊಂದಿರುವ ಭಾಷೆ ಎಂದರೆ ಅದು ಕನ್ನಡ ಭಾಷೆ. ಬರೆದಂತೆ ಉಚ್ಚಾರಣೆ ಮಾಡುವ ಭಾಷೆ ಇದಾಗಿದೆ. ಈ ಭಾಷೆಯಲ್ಲಿ ಸ್ತ್ರೀಲಿಂಗ, ಪುಲ್ಲಿಂಗ , ನಪುಂಸಕಲಿಂಗ ಎಂದು ಗುರುತಿಸಬಹುದಾಗಿದೆ. ಅದೇ ರೀತಿ ಉಚ್ಚರಿಸಬಹುದಾಗಿದೆ ಎಂದರು. 

ಜಗತ್ತಿನ ಏಳು ಚಿರಂಜೀವಿಗಳಲ್ಲಿ ಇಬ್ಬರು ಕನ್ನಡದವರು. ಅದು ನಮಗೆ ಹೆಮ್ಮೆಯ ವಿಚಾರ. ಅವರೆಂದರೆ ಒಬ್ಬ ಹನುಮಂತ, ಮತ್ತೊಬ್ಬ ಇದೇ ಜಿಲ್ಲೆಯ ಪರಶುರಾಮ ಎಂದು ಹೇಳಿದ ಅವರು, ನಮ್ಮ ಮಾತೃಭಾಷೆ ಕನ್ನಡ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಅನಿಸುತ್ತದೆ ಎಂದರು. ಜಗತ್ತಿನ ಎಲ್ಲ ದೇಶಗಳಲ್ಲಿ ಕಂಪ್ಯೂಟರ್ ಜಗತ್ತನ್ನು ಕನ್ನಡಿಗರೇ ಅಳುತ್ತಿದ್ದಾರೆ. ಬಹು ಸಂಖ್ಯಾತ ಕನ್ನಡಿಗರು ಇಂದು ತಾಂತ್ರಿಕ ಜಗತ್ತನ್ನು ಆಳುತ್ತಿದ್ದಾರೆ ಎಂದವರು ನುಡಿದರು. 

ಫಜಲ್ ಅಲಿ ಆಯೋಗದ ಮುಂದೆ ಬಲವಾದ ಸಾಕ್ಷಿಗಳನ್ನು ಮಂಡಿಸುವ ಮೂಲಕ ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿದ ಕೀರ್ತಿ ಲಿಂಗೈಕ್ಯ ಶಿವಬಸವ ಶ್ರೀ ಗಳಿಗೆ ಸಲ್ಲುತ್ತದೆ. ಕನ್ನಡಕ್ಕಾಗಿ  ಶ್ರಮಿಸಿದ ಶ್ರೀಗಳು ಕಟ್ಟಿದ ಈ ಮಠ ಕನ್ನಡದ ಮಠ ಎಂದು ಹೆಸರಾಯಿತು ಎಂದು ಅವರು ನುಡಿದರು.

ಇಂದು ಮುಂಜಾನೆ ಅರಭಾವಿ- ಕಡೋಲಿಯ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ಶ್ರೀ ಗುರುಬಸವಲಿಂಗ ಸ್ವಾಮೀಜಿಯವರಿಂದ “ಷಟಸ್ಥಲ ದ್ವಜಾರೋಹಣ”  ನೆರವೇರುವುದರೊಂದಿಗೆ ನಾಲ್ಕು ದಿನಗಳ ಮಹೋತ್ಸವವು ಆರಂಭಗೊಂಡಿತು. 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟಕೋಳ ಚೌಕಿಮಠದ ಶ್ರೀ ನಾಗಭೂಷಣ ಮಹಾಸ್ವಾಮಿಗಳು ವಹಿಸಿದ್ದರು, ನೇತೃತ್ವವನ್ನು ಶೇಗುಣಸಿ ವಿರಕ್ತಮಠದ ಡಾ.ಮಹಾಂತ ಪ್ರಭು ಮಹಾಸ್ವಾಮಿಗಳ ಸಮ್ಮುಖದಲ್ಲಿದ್ದರು. ಜಮಖಂಡಿ ಓಲೆಮಠದ ಉತ್ತರಾಧಿಕಾರಿ ಶ್ರೀ ಆನಂದ ದೇವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ವರ್ಷದಲ್ಲಿರುವ  ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳಿಗೆ ಅಮೃತ ಗೌರವ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರಿನ ಎಚ್.ಬಿ. ನಾಗೇಂದ್ರ ಪ್ರಸಾದ್ ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರಹಟ್ಟಿಯ ಬಾಳಸಾಹೇಬ ಲೋಕಾಪುರ್ ಅವರನ್ನು ಸತ್ಕರಿಸಲಾಯಿತು. ಶ್ರೀಮಠದಿಂದ ಕೊಡ ಮಾಡಲಾಗುವ “ಕನ್ನಡ ನುಡಿಶ್ರೀ” ಪ್ರಶಸ್ತಿಯನ್ನು ಬೆಂಗಳೂರಿನ ಜನಶಕ್ತಿ ಸಂಘದ ಅಧ್ಯಕ್ಷ ಸಿ. ಕೆ. ರಾಮೇಗೌಡ, ಬೆಳಗಾವಿಯ ಮಲ್ಲಪ್ಪ ಅಕ್ಷರದ ಮತ್ತು ಪತ್ರಕರ್ತ ಮಹೇಶ ವಿಜಾಪುರ ಅವರುಗಳಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಾಗನೂರಿನ ಜಾನಕಿದೇವಿ ಭದ್ರಣ್ಣವರ್ ವಿರಚಿತ  “ಜೋಳಿಗೆ ಧರಿಸಿದ” ಕವನ ಸಂಕಲನವನ್ನು ಲೋಕಾರ್ಪಣೆ ಗೊಳಿಸಲಾಯಿತು.

ಎ. ಎಂ. ಪಾಟೀಲ್ ಅವರು ಸ್ವಾಗತಿಸಿದರು, ಕಾರ್ಯಕ್ರಮವನ್ನು ರಾಜಶೇಖರ್ ಪಾಟೀಲ್ ನಿರ್ವಹಿಸಿದರು. ಎ.ಕೆ. ಪಾಟೀಲ್ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button