ಪ್ರಗತಿವಾಹಿನಿ ಸುದ್ದಿ, ಗೋಕಾಕ: ನಾನು ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ವಿರೋಧಿ ಅಲ್ಲ. ಪರಿಶಿಷ್ಟ ಜಾತಿ ಜನಾಂಗ ಅಥವಾ ಲಿಂಗಾಯತರ ವಿರೋಧಿ ಅಲ್ಲ. ನಮ್ಮ ಮೇಲೆ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ಹಾಗೂ ವಾಸ್ತವಕ್ಕೆ ದೂರವಾಗಿವೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟ ಪಡಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ನಿವಾಸದಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಗಳಾದಾಗ 8 ಜನ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೆ. 5 ಜನ ಪರಿಶಿಷ್ಟ ಜಾತಿಯ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದೆ. ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ ಸೇರಿದಂತೆ ಅನೇಕ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿ ಜನಾಂಗದ ನಾಯಕರನ್ನು ಬೆಳೆಸಿದ್ದೇನೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಅವರು ಬೇರೆ ಬೇರೆ ಪಕ್ಷಗಳಲ್ಲಿ ಸೇರಿಕೊಂಡು ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಈ ಭಾಗದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮತ್ತು ಮಾರ್ಕಂಡೇಯ ಯೋಜನೆಗಳು ಜಾರಿಯಾಗಲು ನಾನೇ ಕಾರಣ. ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗಳಿಗೆ 200 ಕೋಟಿ ರೂ. ಕೇಳಿದ್ದೆ. ಕೇಂದ್ರದಿಂದ ನಿರೀಕ್ಷಿತ ಅನುದಾನ ಬರದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಭಾಗಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದೇನೆ ಎಂದ ಅವರು, ನನ್ನ ರಾಜಕೀಯ ಜೀವನದಲ್ಲಿ ಈ ಭಾಗದ ಕೊಡುಗೆ ಅಪಾರವಾಗಿದೆ. ನಾನು ಮುಖ್ಯಮಂತ್ರಿಯಾದಾಗ ಬೆಳಗಾವಿಯಿಂದ ನಮ್ಮ ಪಕ್ಷದ 14 ಶಾಸಕರು ಗೆದ್ದಿದ್ದರು. ನಾನು ಪ್ರಧಾನ ಮಂತ್ರಿಯಾಗಲೂ ಈ ಭಾಗದ ಸಹಕಾರವೇ ಕಾರಣ. ಪ್ರಧಾನ ಮಂತ್ರಿಗಳಾದಾಗ ಬೆಳಗಾವಿಯ ಎರಡು ಕ್ಷೇತ್ರಗಳಲ್ಲಿ ಪಕ್ಷದ ಸಂಸದರು ಆಯ್ಕೆಯಾಗಿದ್ದರು. ಬೆಳಗಾವಿಯೊಂದಿಗೆ ನನಗೆ ಅವಿನಾಭಾವ ಸಂಬಂಧ ಇದೆ ಎಂದರು.
ಯಡಿಯೂರಪ್ಪ ಈಗ ಲಿಂಗಾಯತ ನಾಯಕರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಯಾವ ಲಿಂಗಾಯತ ನಾಯಕರನ್ನು ಬೆಳೆಸಿದ್ದಾರೆ? ಉಮೇಶ ಕತ್ತಿ ಅವರಂಥಹ ಹಿರಿಯ ಲಿಂಗಾಯತ ಶಾಸಕರನ್ನು ಬಿಟ್ಟು, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋತಿರುವ ಲಕ್ಷ್ಮಣ ಸವದಿಗೆ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ಲಿಂಗಾಯತರಿಗೆ ನೀಡಿರುವ ಗೌರವವೇ ಎಂದು ಪ್ರಶ್ನಿಸಿದ ಅವರು, ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಗೋಕಾಕ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಗೋಕಾಕ್ ನಲ್ಲಿ ಹಿರಿಯ ರಾಜಕಾರಣಿ ಅಶೋಕ ಪೂಜಾರಿ ಅವರಿಗೆ ಮತ ನೀಡುವ ಮೂಲಕ ಲಿಂಗಾಯತ ವಿರೋಧಿ ಎಂಬ ಆರೋಪದಿಂದ ನನ್ನನ್ನು ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.
ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಾಲ ಮನ್ನಾದಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಉತ್ತಮ ಆಡಳಿತ ನೀಡುತ್ತಿರುವಾಗ ಯಡಿಯೂರಪ್ಪನವರು ನಡೆಸಿದ ಕುದುರೆ ವ್ಯಾಪಾರದಿಂದ ಸರಕಾರ ಪತನವಾಯಿತು. ಈಗ ಅಧಿಕಾರದಲ್ಲಿರುವ ಯಡಿಯೂರಪ್ಪನವರು ಆಡುತ್ತಿರುವ ಮಾತುಗಳು ತಮಾಶೆಯಾಗಿ ಕಾಣುತ್ತಿವೆ. ಹೋದಲೆಲ್ಲ ಅನರ್ಹರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಈಗಾಗಲೇ 18 ಸಚಿವರಿದ್ದಾರೆ. ಉಳಿದಿರುವ ಎಲ್ಲ 15 ಸ್ಥಾನಗಳನ್ನು ಅನರ್ಹರಿಗೆ ನೀಡಿದರೆ, ಪಕ್ಷದ ಹಿರಿಯ ಶಾಸಕರು ಸುಮ್ಮನಿರುತ್ತಾರಾ ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಕೆರೆಗಳು ತುಂಬಿವೆ ಎಂದು ಬಿಜೆಪಿಯ ಮುಖಂಡರುಗಳು ಹೇಳುತ್ತಿರುವುದೂ ಹಾಸ್ಯಾಸ್ಪದವಾಗಿದೆ. ನೆರೆಯಿಂದ ಕೆರೆಗಳು ತುಂಬಿವೆ. ನೆರೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಸಕಾಲಕ್ಕೆ ಜನರ ನೆರವಿಗೆ ಬರುವ ಬದಲು ಹಾಸ್ಯಾಸ್ಪದವಾದ ಸಮರ್ಥನೆಗಳನ್ನು ಮಾಡಿಕೊಳ್ಳುತ್ತಿರುವುದು ಕಳವಳವನ್ನುಂಟು ಮಾಡಿದೆ ಎಂದರು.
ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿ ಬೇರೆ. ಮಹಾರಾಷ್ಟ್ರದಲ್ಲಿರುವಂತೆ ಇಲ್ಲಿ ಶಿವಸೇನೆ ಇಲ್ಲ. ಎನ್‍ಸಿಪಿ ಇಲ್ಲ. ಒಂದು ಪ್ರಾದೇಶಿಕ ಪಕ್ಷದ ಅಧ್ಯಕ್ಷನಾಗಿ ಎರಡೂ ರಾಷ್ಟ್ರೀಯ ಪಕ್ಷದ ವಿರುದ್ಧ ಸೆಣಸಾಡುತ್ತಿದ್ದೇನೆ. ಬಿಜೆಪಿಯೊಂದಿಗೆ ಸರಕಾರ ಮಾಡಿ ಪಶ್ಚಾತಾಪ ಪಟ್ಟಿದ್ದೇನೆ ಎಂದು ಸ್ವತಃ ಕುಮಾರಸ್ವಾಮಿ ಅವರೇ ಹೇಳಿರುವುದರಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಮೇಯವೇ ಇಲ್ಲ.
ಸಿದ್ದರಾಮಯ್ಯನವರೊಂದಿಗೆ ಮತ್ತೆ ಹೊಂದಾಣಿಕೆ ದೂರದ ಮಾತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಸಮಾಧಾನದಿಂದ ನಡೆದುಕೊಳ್ಳಬೇಕು. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಒಬ್ಬರೆ ನಾಯಕರಲ್ಲ. ಇನ್ನೂ ಅನೇಕ ನಾಯಕರಿದ್ದಾರೆ ಎಂದು ಹೇಳುವ ಮೂಲಕ ಉಪಚುನಾವಣೆಯ ನಂತರ, ಬಿಜೆಪಿ ಬಹುಮತ ಸಾಧಿಸದಿದ್ದಲ್ಲಿ ಕಾಂಗ್ರೆಸ್ ನಲ್ಲಿ ಪರ್ಯಾಯ ನಾಯಕತ್ವದ ಷರತ್ತಿನೊಂದಿಗೆ ಹೊಂದಾಣಿಕೆ ಸಾಧ್ಯತೆಯ ಸುಳಿವು ನೀಡಿದರು.
ಪತ್ರಿಕಾ ಗೋಷ್ಠಿಯ ನಂತರ ಮತಕ್ಷೇತ್ರದ ಅನೇಕ ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಪಕ್ಷದ ಅಭ್ಯರ್ಥಿ ಅಶೋಕ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಮತ್ತೆ ಕಾಂಗ್ರೆಸ್ ಜೊತೆ ಸಖ್ಯ: ಸ್ಫಷ್ಟವಾಗಿ ತಳ್ಳಿ ಹಾಕಿದ ದೇವೇಗೌಡ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ