Latest

ಸರಕಾರಕ್ಕೆ ಸೆಡ್ಡು ಹೊಡೆಯಲು KMF ಸಜ್ಜು ; ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಿಸಲು ನಿರ್ಧಾರ

*ಕೆಎಂಎಫ್‍ನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ನಿರ್ಣಯ*

    ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :  ಹಾಲಿನ ದರ ಹೆಚ್ಚಿಸುವಂತೆ ಕಳೆದ 8 ತಿಂಗಳಿನಿಂದ ಸರಕಾರಕ್ಕೆ 3 ಬಾರಿ ಮನವಿ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ  ಪ್ರತಿ ಲೀಟರ್ ಹಾಲಿಗೆ 3 ರೂ. ಹೆಚ್ಚಳ ಮಾಡಲು ಕೆಎಂಎಫ್ ನಿರ್ಧರಿಸಿದೆ.
 ಕಳೆದ ಶುಕ್ರವಾರ  ಕೆಎಂಎಫ್‍ನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಕೆಎಂಎಫ್‍ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದರ ಬಗ್ಗೆ ಒಲುವು ತೋರಿವೆ.
ತನ್ಮೂಲಕ ಸರಕಾರಕ್ಕೆ ನೇರವಾಗಿ ಸೆಡ್ಡು ಹೊಡೆಯಲು ಕೆಎಂಎಫ್ ನಿರ್ಧರಿಸಿದೆ.
ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳುಗಳಿಂದ ರಾಜ್ಯದ ಜಿಲ್ಲಾ ಹಾಲು ಒಕ್ಕೂಟಗಳು ಕೆಎಂಎಫ್‍ಗೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದನೆ ನೀಡದ್ದರಿಂದ ಕೊನೆಗೂ ರೈತರ ಅನುಕೂಲಕ್ಕೋಸ್ಕರ ದರ ಹೆಚ್ಚಳಕ್ಕೆ ಮುಂದಾಗಿದೆ.
 ಬಾಲಚಂದ್ರ ಜಾರಕಿಹೊಳಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಹಾಲಿನ ದರ ಹೆಚ್ಚಿಸಲು ಒಪ್ಪಿಗೆ ನೀಡುವಂತೆ ಕೋರಿದ್ದರು.
 ದೇಶದಲ್ಲಿ ಕೆಎಂಎಫ್ ಹೊರತುಪಡಿಸಿ ಉಳಿದೆಲ್ಲ ಬೇರೆ ಬೇರೆ ಖಾಸಗಿ ಬ್ರಾಂಡ್‍ಗಳು ಹಾಲಿನ ದರದಲ್ಲಿ ಭಾರಿ ಬದಲಾವಣೆ ಮಾಡಿವೆ. ಕೆಎಂಎಫ್ ಮಾತ್ರ ಪ್ರತಿ ಲೀಟರ್ ಹಾಲಿಗೆ 37 ರೂ.ಗಳನ್ನು ನೀಡುತ್ತಿದೆ. ಬೇರೆ- ಬೇರೆ ಬ್ರಾಂಡ್‍ಗಳಿಗೆ ಹೋಲಿಕೆ ಮಾಡಿದರೆ 8 ರಿಂದ 10 ರೂ.ಗಳು ವ್ಯತ್ಯಾಸ ಕಂಡುಬರುತ್ತಿದೆ. ರೈತರ ಹಿತಕ್ಕಾಗಿ ನಂದಿನಿ ಹಾಲಿನ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಿರುವ ಕೆಎಂಎಫ್, 3 ರೂ. ಹೆಚ್ಚಳ ಮಾಡಲು ಮುಂದಾಗಿದ್ದು ಏರಿಕೆ ಮಾಡಲಿರುವ ದರವನ್ನು ರೈತರಿಗೆ ನೀಡಲು ನಿರ್ಧಾರ ಕೈಗೊಂಡಿದೆ.
  ದಕ್ಷಿಣ ಭಾರತದಲ್ಲಿ ವಿಪರೀತ ಮಳೆಯಾಗುತ್ತಿರುವದರಿಂದ ರೈತರ ಬೆಳೆಗಳು ಹಾನಿಯಾಗಿವೆ. ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ನಂದಿನಿ ವರದಾನವಾಗಿದ್ದು, ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತೇಜಿಸಲು ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಲಿನ ದರದಲ್ಲಿ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಕೆಎಂಎಫ್‍ ಅಭಿಪ್ರಾಯಪಟ್ಟಿದೆ.
ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಜನರ ವಿರೋಧ ಎದುರಿಸಬೇಕಾಗಬಹುದು ಎನ್ನುವ ಕಾರಣಕ್ಕೆ ಸರಕಾರ ಹಾಲಿನ ದರವನ್ನು ಹೆಚ್ಚಿಸುಲ ಹಿಂದೇಟು ಹಾಕುತ್ತಿರುವಂತಿದೆ. ಆದರೆ ಕೆಎಂಎಫ್ ಸರಕಾರದ ಧೋರಣೆಗೆ ಪ್ರತಿರೋಧ ವ್ಯಕ್ತಪಡಿಸಿ ಹಾಲಿನ ದರ ಹೆಚ್ಚಳದ ಘೋಷಣೆ ಮಾಡಲು ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

 

https://pragati.taskdun.com/latest/kmfmilk-ratehike/

https://pragati.taskdun.com/latest/amul-milkpricehikeamul-products/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button