Kannada NewsKarnataka News

16 ವಿವಿ, 34 ಸ್ವಾಯತ್ತ ಶಿಕ್ಷಣ ಸಂಸ್ಥೆ ಸ್ಥಾಪನೆ ಯೋಜನೆ – ಡಾ.ಸಿ.ಎನ್.ಅಶ್ವಥ್ ನಾರಾಯಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಒಂದು ರಾಷ್ಟ್ರ ಸ್ವಾವಲಂಬಿಯಾಗಲು ರಾಷ್ಟ್ರದ ಸಾಂಸ್ಕೃತಿಕ ಮೌಲ್ಯಗಳ ಮೇಲೆ ಗೌರವ ಇರುವ ಯುವಶಕ್ತಿಯನ್ನು ನಿರ್ಮಾಣ ಮಾಡುವುದು ಹೊಸ ಶಿಕ್ಷಣ ನೀತಿಯ ಮುಖ್ಯ ಉದ್ದೇಶವಾಗಿದೆ ಹಾಗೂ ಈ ನೀತಿಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರಕ್ಕಾಗಿ ಕೆಲಸಮಾಡುವಂತಾಗಬೇಕು. ಜ್ಞಾನ ಇದ್ದರೆ ಸಾಲದು, ಜ್ಞಾನ ಕರ್ಮವಾಗಿ ಬದಲಾಗಬೇಕು. ಜ್ಞಾನವನ್ನು ಕರ್ಮವಾಗಿ ಬದಲಾವಣೆ ಮಾಡಿಕೊಳ್ಳಲು ಹೊಸ ಶಿಕ್ಷಣ ನೀತಿ ಸಹಾಯ ಮಾಡುತ್ತದೆ. ಆದ್ದರಿಂದ ಇದಕ್ಕೆ ಸಂಬಂದಪಟ್ಟಿರುವ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಹೊಸ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಎಂದು ರಾಜ್ಯಪಾಲ ವಜುಬಾಯಿ ವಾಲಾ ಕರೆ ನೀಡಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮೈಸೂರಿನ ಇ-ಲರ್ನಿಂಗ್ ಕೇಂದ್ರದಿಂದ ಗುರುವಾರ ಎರ್ಪಡಿಸಿದ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ವೆಬಿನಾರನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಆರು ಸಂಶೋಧನಾ ಕೇಂದ್ರಿತ ವಿಶ್ವವಿದ್ಯಾಲಯಗಳು, ೧೦ ಬೋಧನಾ ಕೇಂದ್ರಿತ ವಿಶ್ವವಿದ್ಯಾಲಯ ಹಾಗೂ ೩೪ ಸ್ವಾಯತ್ತ ಶಿಕ್ಷಣ ಸಂಸ್ಥೆಗಳನ್ನು ಮೂರು ವರ್ಷಗಳಲ್ಲಿ ಸ್ಥಾಪಿಸುವ ಯೋಜನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ತಿಳಿಸಿದರು. ವೆಬನಾರ್ ನಲ್ಲಿ ಮಾತನಾಡಿದ ಅವರು ಹೊಸ ಶಿಕ್ಷಣ ನೀತಿ ಜಾರಿ ಸಂಬಂಧ ಈಗಾಗಲೇ ಹಲವು ಹಂತದ ಸಭೆಗಳನ್ನು ನಡೆಸಲಾಗಿದೆ ಎಂದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಯನ್ನು ಭಾರತೀಯ ಪಾರಂಪರಿಕ ಮೌಲ್ಯಗಳ ಆಧಾರದ ಮೇಲೆ ರಚನೆ ಮಾಡಲಾಗಿದೆ. ಇದು ಯುವಕರಿಗೆ ಮೌಲ್ಯಯುತ ಶಿಕ್ಷಣ ನೀಡುತ್ತದೆ. ಆ ಮೂಲಕ ಭಾರತವನ್ನು ಜ್ಞಾನದ ವಿಶ್ವಗುರುವನ್ನಾಗಿ ಮಾಡಲಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಗುರುದೇವ ಶ್ರೀ ಶ್ರೀ ರವಿಶಂಕರಜಿ ಮಾತನಾಡಿ ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವಲ್ಲಿ ಹೊಸ ಶಿಕ್ಷಣ ನೀತಿ ಸಹಕಾರಿಯಾಗಲಿದೆ. ತಾಂತ್ರಿಕ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕಾಗಿದೆ ಡಿ ವಿ ಜಿ ಅವರ ಹಳೆಬೇರು ಹೊಸಚಿಗುರು ಮಾತನ್ನು ನೆನಪಿಸಿಕೊಂಡ ಅವರು ಆ ನಿಟ್ಟಿನಲ್ಲಿ ಭಾರತದ ಪ್ರಾಚೀನ ಕೊಡುಗೆಗಳಾದ ತತ್ವಜ್ಞಾನ ವಿಜ್ಞಾನ ಮತ್ತು ಗಳ ತಳಹದಿಯ ಮೇಲೆ ತಾಂತ್ರಿಕ ಶಿಕ್ಷಣ ಬದಲಾವಣೆಗೊಳ್ಳಬೇಕಿದೆ. ಅದಕ್ಕೆ ಹೊಸ ಶಿಕ್ಷಣ ನೀತಿ ದಾರಿ ತೋರಿಸುತ್ತದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ದೇಶದಲ್ಲಿ ತಾಂತ್ರಿಕ ಶಿಕ್ಷಣದ ಮೇಲೆ ಪರಿಣಾಮ ಬೀರಿದ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಅಂಶಗಳನ್ನು ಹೊಂದಿದೆ. ನಾವು ಪ್ರಾಚೀನ ಇತಿಹಾಸವನ್ನು ನೋಡಿದರೆ, ಭಾರತವು ಆವಾಗಲೇ ಬೌದ್ಧಿಕವಾಗಿ ಸೂಪರ್ ಪವರ್ ಆಗಿತ್ತು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅನೇಕ ವಿಷಯಗಳಲ್ಲಿ ಕೊಡುಗೆ ನೀಡಿದೆ ಎಂದು ಅವರು ಹೇಳಿದರು. ಎನ್ ಇ ಪಿ ಯ ವಿಷಯಗಳ ಕುರಿತು ಮಾತನಾಡಿದ ಅವರು, ಬಹುಶಿಕ್ಷಣ ಜ್ಞಾನ ಹೊಂದಿರುವ ವಿದ್ಯಾರ್ಥಿಗಳ ಒಟ್ಟಾರೆ ಬೆಳವಣಿಗೆಗೆ ಅವಕಾಶವಿದೆ ಮತ್ತು ಯಾವುದೇ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳು ಒಂದೇ ವಿಷಯದ ಮೇಲೆ ಪದವಿಗಳನ್ನು ನೀಡದೆ ವಿವಿಧ ವಿಷಯಗಳಲ್ಲಿ ಪರಿಣಿತವಾದ ಸಂಸ್ಥೆಗಳು / ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಬಹುಶಿಕ್ಷಣದ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು. ಶಿಕ್ಷಕರ ಪಾತ್ರದ ಬಗ್ಗೆ ಮಾತನಾಡುತ್ತಾ, ಪ್ರತಿಯೊಬ್ಬ ಶಿಕ್ಷಕರು ಶ್ರೇಷ್ಠತೆಯನ್ನು ಸಾಧಿಸಲು ೪P ಅಂಶಗಳಾದ ಪೇಪರ್, ಪೇಟೆಂಟ್, ಪ್ರಾಡಕ್ಟ್ ಮತ್ತು ಪ್ರಕ್ರಿಯೆಯ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.

ಯುಜಿಸಿ ಮತ್ತು ಎನ್ ಇ ಪಿ ಕರಡು ಸಮಿತಿಯ ಪ್ರೊ.ಎಂ.ಕೆ.ಶ್ರೀಧರ್ ಅವರು ಮಾತನಾಡಿ ಪ್ರಮುಖ ಅಂಶಗಳನ್ನು ಹೊಸ ನೀತಿಯ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದರು ಮತ್ತು ಯಾವುದೇ ತಂತ್ರಜ್ಞಾನವು ಪಾರಂಪರಿಕ ಬೋಧನೆಯ ವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಆದರೆ ಶಿಕ್ಷಕರು ತಂತ್ರಜ್ಞಾನದ ಪ್ರಗತಿಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು. ಎನ್‌ಇಪಿ ೨೦೨೦ ವಿದ್ಯಾರ್ಥಿ ಕೇಂದ್ರಿತ ನೀತಿಯಾಗಿದ್ದು, ನಮ್ಮ ರಾಷ್ಟ್ರದ ಜನರ ಕನಸುಗಳನ್ನು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಮಾತೃಭಾಷೆ ಆಧಾರಿತ ಬಾಲ್ಯದ ಶಿಕ್ಷಣಕ್ಕೆ ಒತ್ತು, ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವುದು, ಕ್ರೆಡಿಟ್ ಬ್ಯಾಂಕ್ ಮತ್ತು ಬಹು ಪ್ರವೇಶ ಮತ್ತು ನಿರ್ಗಮನಗಳು ನೀತಿಯ ಕೆಲವು ವಿದ್ಯಾರ್ಥಿ ಕೇಂದ್ರಿತ ಲಕ್ಷಣಗಳಾಗಿವೆ ಎಂದು ಅವರು ಹೇಳಿದರು.

ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಮಾತನಾಡಿ ಹೊಸ ಶಿಕ್ಷಣ ನೀತಿಯಿಂದ ತಾಂತ್ರಿಕ ಶಿಕ್ಷಣದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಾತನಾಡಿ ಹೊಸ ನೀತಿಯ ಪರಿಣಾಮಕಾರಿ ಅನುಷ್ಠಾನದಲ್ಲಿ ವಿ ಟಿ ಯು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸಿದರು. ಕುಲಸಚಿವರಾದ ಪ್ರೊ.ಎ.ಎಸ್.ದೇಶಪಾಂಡೆ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಸತೀಶ ಅಣ್ಣಿಗೇರಿ ವಂದಿಸಿದರು. ಮೈಸೂರು ಇ-ಲರ್ನಿಂಗ್ ಕೇಂದ್ರದ ವಿಶೇಷ ಅಧಿಕಾರಿ ಪ್ರೊ.ಸಂದ್ಯಾ ಸಂಯೋಜಿಸಿದ್ದರು. ವಿ ಟಿ ಯು ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಳ ಸದಸ್ಯರು, ಎಲ್ಲ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿ ಸುಮಾರು ಮೂರು ಸಾವಿರ ಸದಸ್ಯರು ವೆಬಿನಾರ್ ನಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button