ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷಿತ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಕಾರ್ಯವನ್ನು ಆರಂಭಿಸಲು ಇಲಾಖೆ ಅನುಮತಿ ನೀಡಿದ್ದು ಕಂದಾಯ ಸಚಿವ ಆರ್.ಅಶೋಕ್ ಅವರು ಡಿ. 20 ರಂದು ಸಂಜೆ 5 ಗಂಟೆಗೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಅರಬಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಈಗಾಗಲೇ ಹೊಸದಾಗಿ ಆರಂಭಿಸಲಾಗಿರುವ ಉಪ ನೋಂದಣಿ ಕಚೇರಿಯಲ್ಲಿ ಸಂಬಂಧಪಟ್ಟ ಎಲ್ಲ ಕೆಲಸಗಳು ಪೂರ್ಣಗೊಂಡಿವೆ. ಕಾವೇರಿ ತಂತ್ರಾಂಶ ಮತ್ತು ಖಜಾನೆ-2 ಗೆ ಸಂಬಂಧಿಸಿದ ಕಾರ್ಯಗಳು ಸಹ ಮುಗಿದಿವೆ. ಜತೆಗೆ ಕಛೇರಿಗೆ ಒಳಪಡುವ ಗ್ರಾಮಗಳ ಸಮೀಕ್ಷೆಗಳು ಮುಗಿದಿವೆ.
ಈ ಕಚೇರಿಯಿಂದ ಮೂಡಲಗಿ ತಾಲೂಕಿನ 48 ಗ್ರಾಮಗಳ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಇಲ್ಲಿಯವರೆಗೆ ಇದೇ ಕೆಲಸಕ್ಕೆ ದಿನನಿತ್ಯ ಗೋಕಾಕ್ ನಗರಕ್ಕೆ ಹೋಗುತ್ತಿದ್ದ ಸಾರ್ವಜನಿಕರ ಅಲೆದಾಟ ತಪ್ಪಲಿದೆ. ಮೂಡಲಗಿಯಲ್ಲಿಯೇ ಇನ್ಮುಂದೆ ಎಲ್ಲ ಸೇವೆಗಳು ಸಿಗಲಿವೆ.
ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನಿರಂತರ ಪ್ರಯತ್ನದಿಂದ ಮೂಡಲಗಿ ಹೊಸ ತಾಲೂಕಿಗೆ ಉಪ ನೋಂದಣಿ ಕಚೇರಿ ಆರಂಭವಾಗಿದೆ.
ಮೂಡಲಗಿ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಕಾರ್ಯವನ್ನು ಕಂದಾಯ ಸಚಿವ ಅಶೋಕ್ ಅವರು ಉದ್ಘಾಟಿಸುವ ಮೂಲಕ ಸಾರ್ವಜನಿಕ ಸೇವೆಗೆ ಅರ್ಪಿಸಲಿದ್ದಾರೆ.
ಪೇರಳೆ ಹಣ್ಣಿನ ಈ 9 ಅಮೂಲ್ಯ ಪ್ರಯೋಜನಗಳು ಗೊತ್ತೆ ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ