ಪ್ರಗತಿವಾಹಿನಿ ಸುದ್ದಿ, ಗೋಕಾಕ : ಆಯೋಗಗಳ ವರದಿ ಮತ್ತು ಜಿಲ್ಲೆಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿರುವ ಗೋಕಾಕನ್ನು ಕೂಡಲೇ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಗೋಕಾಕ ನ್ಯಾಯವಾದಿಗಳ ಸಂಘ ಇಂದು ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿತು.
ಗೋಕಾಕ ಜಿಲ್ಲಾ ರಚನೆಯ ಕುರಿತು ಸರಕಾರದ ಮೇಲೆ ಒತ್ತಡ ತರುವ ದೃಷ್ಟಿಯಿಂದ ಇಂದು ಮಧ್ಯಾನ್ಹ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು. ಬಿ. ಸಿಂಪಿ ಅವರ ಅಧ್ಯಕ್ಷತೆಯಲ್ಲಿ ಸಂಘದ ಪದಾಧಿಕಾರಿಗಳ ಮತ್ತು ನ್ಯಾಯವಾದಿಗಳ ಸಭೆ ಜರುಗಿತು. ಈ ಸಭೆಯಲ್ಲಿ ಮಾತನಾಡಿದ ನ್ಯಾಯವಾದಿ ಮತ್ತು ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಆಯೋಗಗಳ ವರದಿಗೆ ಪೂರಕವಾಗಿ ಗೋಕಾಕ ಎಂದೋ ಜಿಲ್ಲೆಯಾಗಿ ಘೋಷಣೆಯಾಗಬೇಕಾಗಿತ್ತು. ಆದರೆ ಜಿಲ್ಲೆಯ ರಾಜಕೀಯ ಕಾರಣಗಳಿಂದಾಗಿ ಈ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಂಡಿಲ್ಲ. ಆದರೆ ಇನ್ನು ಮುಂದೆ ಗೋಕಾಕ ಜಿಲ್ಲಾ ರಚನೆಯ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದು ಹೇಳಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ. ಸಿಂಪಿ ಮಾತನಾಡಿ, ಇಂದಿನ ಸಭೆಯಲ್ಲಿ ಗೋಕಾಕ ಜಿಲ್ಲಾ ರಚನೆಗೆ ಸರಕಾರವನ್ನು ಆಗ್ರಹಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಗೋಕಾಕ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಘೋಷಣೆಯಾಗಿರುವದರಿಂದ ಮುಂದಿನ ಹೋರಾಟದ ರೂಪುರೇಷಗಳನ್ನು ಚುನಾವಣೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ ಚುನಾವಣೆಯ ನಂತರ ಶ್ರಿ ಮುರುಘರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಗೋಕಾಕ ನ್ಯಾಯವಾದಿಗಳ ಸಂಘ ಹೋರಾಟವನ್ನು ಮುಂದುವರಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲವಾನ, ಹಿರಿಯ ನ್ಯಾಯವಾದಿ ಬಿ.ಆರ್. ಕೊಪ್ಪ, ಶಾಮಾನಂದ ಪೂಜೇರಿ, ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಶಶಿಧರ ದೇಮಶಟ್ಟಿ, ಉಪಾಧ್ಯಕ್ಷ ಎಸ್.ಎಸ್. ಪಾಟೀಲ, ಸಹಕಾರ್ಯದರ್ಶಿ ಜಿ.ಎಮ್. ಬಟ್ಟಿ, ಖಜಾಂಚಿ ಎಸ್.ಜಿ. ಹಿರಟ್ಟಿ, ಎಮ್.ಕೆ. ಪೂಜೇರಿ, ಜಿ.ಎಸ್. ನಂದಿ, ಜಿ.ಕೆ. ಪೂಜೇರಿ, ಬಿ.ಟಿ. ಬೀರನಗಡ್ಡಿ, ಸಿ.ಬಿ. ಗಿಡ್ಡನ್ನವರ, ಜಿ.ಆರ್. ಪೂಜೇರಿ, ಪ್ರೇಮಾ ಚಿಕ್ಕೋಡಿ ಮುಂತಾದ ವಕೀಲರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ