*ನೀರಿನ ಸಂರಕ್ಷಣೆಯಲ್ಲಿ ಎಲ್ಲ ಇಲಾಖೆಗಳ ಪಾತ್ರ ಬಹು ಮುಖ್ಯ: ಕೇಂದ್ರ ಜಲ ಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ ಸ್ವಾಮಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೀರಿನ ಸಂರಕ್ಷಣೆ ಜಲಶಕ್ತಿ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಅಭಿಯಾನದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಕೇಂದ್ರ ಜಲ ಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ. ಸ್ವಾಮಿ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ (ಜ-30) ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಲಶಕ್ತಿ ಅಭಿಯಾನದ ಪೊಸ್ಟ್ ಮಾನಸೂನ್ ಭೇಟಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರಿನ ಸಂರಕ್ಷಣೆಯ ಜೊತೆಗೆ ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳು, ಕೆರೆ-ಕಟ್ಟೆಗಳ ನವೀಕರಣ ಕೊಳವೆ ಬಾವಿಗಳ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ ಕಾಮಗಾರಿಗಳನ್ನು ಆದ್ಯತೆ ಮೇಲೆ ಅನುಷ್ಠಾನಗೊಳಿಸಿರುವುದು ಪ್ರಶಂಸನೀಯವಾಗಿದೆ ಎಂದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಬೆಂಬಲದೊಂದಿಗೆ ಜಲಶಕ್ತಿ ಅಭಿಯಾನದಡಿ ಜಲಾನಯನ ಪರಿಕಲ್ಪನೆಯಡಿ ಮೈಕ್ರೊ ವಾಟರ್ ಶೆಡ್ಗಳ ಮುಖಾಂತರ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮುಂದಿನ ವರ್ಷಗಳಲ್ಲಿ ಕ್ರಮ ವಹಿಸಲು ಸೂಚಿಸಿದರು. ಹಾಗೂ ಈಗಾಗಲೇ ಅನುಷ್ಠಾನಗೊಳಿಸಿದ ಮಣ್ಣು ನೀರು ಸಂರಕ್ಷಣಾ ಕಾಮಗಾರಿಗಳಿಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ತಯಾರಿಸಲು ತಿಳಿಸಿದರು.
ಜಲಶಕ್ತಿ ಅಭಿಯಾನದಡಿ ಕೈಗೊಂಡ ಕಾಮಗಾರಿಗಳಿಂದ ಸುತ್ತಲಿನ ಜನರು ಅಥವಾ ಸ್ಥಳಗಳಲ್ಲಿ ಆಗುತ್ತಿರುವ ಪ್ರಯೋಜನಗಳು, ಅಂತರ್ಜಲಮಟ್ಟ ಹಾಗೂ ನೀರು ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು ಹಾಗೂ ಸ್ವಸಹಾಯ ಸಂಘ, ಸಂಸ್ಥೆಗಳ ನೆರವಿನಿಂದ ಜಲಮೂಲಗಳನ್ನು ಅಭಿವೃದ್ಧಿಪಡಿಸಬೇಕು. ಎನ್.ಆರ್.ಎಲ್.ಎಮ್. ಯೋಜನೆಯ ಸ್ವಸಹಾಯ ಸಂಘಗಳು ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಂಘಗಳ ಸದಸ್ಯರನ್ನು ಜಲಮೂಲಗಳ ಸಂರಕ್ಷಣೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು.
ಎಲ್ಲ ಸರ್ಕಾರಿ ಇಲಾಖೆಗಳು, ಶಾಲಾ-ಕಾಲೇಜುಗಳ ಕಟ್ಟಡದ ಮೇಲೆ ಮಳೆ ನೀರು ಕೊಯ್ಲು ನಿರ್ಮಿಸಲು ಕಡ್ಡಾಯವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಅದೇ ರೀತಿ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಕೂಡ ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನಿಡಬೇಕು. ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳು ಜಲಮೂಲಗಳ ಸಂರಕ್ಷಣೆಯಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸೆಂಟ್ರಲ್ ಗ್ರೌಂಡ ವಾಟರ್ ಬೊರ್ಡ ವಿಜ್ಞಾನಿ ಡಾ: ಸುಚೆತನಾ ಬಿಸ್ವಾಸ್, ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ ಸೇರಿದಂತೆ ಕೃಷಿ, ತೋಟಗಾರಿಕೆ, ಅರಣ್ಯ, ಜಿಯೋಲಾಜಿಕಲ್ ಇಲಾಖೆ, ಸಣ್ಣ ನೀರಾವರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ ರಾಜ್ ಇಂಜನೀಯರಿಂಗ ಇಲಾಖೆ, ನಗರಾಭಿವೃದ್ಧಿ ಕೋಶ (ಡಿ.ಯು.ಡಿಸಿ) ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ