*ದೇಶದ ಸಾರ್ವಜನಿಕ ಜೀವನ ರೂಪಿಸುವಲ್ಲಿ ಅಂಬೇಡ್ಕರ್ ತತ್ವಗಳ ಪಾತ್ರ ಅಗಾಧ: ಪ್ರೊ. ರಾಜೀವ ಭಾರ್ಗವ ಅಭಿಮತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಾ.ಬಿ. ಆರ್ ಅಂಬೇಡ್ಕರ್ ಅವರ ಒಳನೋಟಗಳು, ನೈತಿಕ ತತ್ವಗಳು ಮತ್ತು ದೃಷ್ಟಿಕೋನಗಳು ದೇಶದ ಸಾರ್ವಜನಿಕ ಜೀವನವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದವು , ಅವರ ಸ್ಪಷ್ಟ ಚಿಂತನೆಯ ಮೂಲಕ ಶಿಕ್ಷಣವನ್ನು ಮುಖ್ಯವಾಹಿನಿಗೆ ತಂದು, ಸಾಮಾಜಿಕ ಪಿಡುಗಾದ ಜಾತಿ ತಾರತಮ್ಯವನ್ನು ಹೋಗಲಾಡಿಸಲು ಜವಾಬ್ದಾರಿಯಿಂದ ಶ್ರಮಿಸಿದರು ಎಂದು ಹೆಸರಾಂತ ರಾಜ್ಯಶಾಸ್ತ್ರಜ್ಞ ಮತ್ತು ಖ್ಯಾತ ಚಿಂತಕರಾದ ಪ್ರೊ. ರಾಜೀವ ಭಾರ್ಗವ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ.ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಮಾಜ ಕಾರ್ಯ ವಿಭಾಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಡಾ. ಬಿ. ಎಸ್. ಜಿರಗೆ ಸಭಾಭವನದಲ್ಲಿ ಶುಕ್ರವಾರದಂದು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ” ವಿವೇಚನೆ, ವೈಚಾರಿಕತೆ ಮತ್ತು ಗಣರಾಜ್ಯ: ಡಾ.ಬಿ. ಆರ್. ಅಂಬೇಡ್ಕರ್” ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು, ಡಾ .ಬಿ. ಆರ್ ಅಂಬೇಡ್ಕರ್ ಅವರು ಎಂದೂ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಬದಲಾಗಿ ನ್ಯಾಯದ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜಾತಿ ವ್ಯವಸ್ಥೆಯಲ್ಲಿ ತಾರತಮ್ಯ ಆಕಸ್ಮಿಕವಲ್ಲ, ಅದು ಒಂದು ನಿರ್ಮಿತ ವ್ಯವಸ್ಥೆ. ಈ ವ್ಯವಸ್ಥೆಯನ್ನು ಹೋಗಲಾಡಿಸಲು ಮತ್ತು ಸಮಾಜದ ಸುಸ್ಥಿರ ಯೋಗಕ್ಷೇಮವನ್ನು ಕಾಪಾಡಲು ನೈತಿಕ ತತ್ವಗಳೊಂದಿಗೆ ಬೆಸೆದ ರೂಢಿಗಳು ಅತ್ಯಗತ್ಯ ಎಂಬ ತತ್ವವನ್ನು ಅವರು ನಂಬಿದ್ದರು ಎಂದು ನೆನೆದರು.

ಪ್ರಸ್ತುತ ಯುವಸಮೂಹ ಯಾವುದೇ ತರಹದ ತಾರತಮ್ಯಕ್ಕೆ ಆಸ್ಪದ ನೀಡದೆ, ಸಕ್ರಿಯವಾದ ಜ್ಞಾನಾರ್ಜನೆಯಲ್ಲಿ ತೊಡಗಿಕೊಂಡು , ತಮ್ಮ ನೈತಿಕ ಕ್ಷಿತಿಜವನ್ನ ವಿಸ್ತರಿಸಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳು ಕಟ್ಟುನಿಟ್ಟಾಗಿ ತಮ್ಮ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ, ಡಾ. ಸಾಬಿರ್ ಅಹ್ಮದ್ ಮುಲ್ಲಾ ಮಾತನಾಡಿ, ಉತ್ತರ ಕರ್ನಾಟಕದ ವಿಶ್ವವಿದ್ಯಾಲಯಗಳಿಗೆ ಸರಕಾರವು ಹೆಚ್ಚಿನ ಅನುದಾನವನ್ನು ನೀಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಉಪಯುಕ್ತವಾಗುವ ಯೋಜನೆಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಕಾರ್ಯಪ್ರವೃತ್ತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಸಿ. ಎಂ ತ್ಯಾಗರಾಜ, ಪ್ರಸ್ತುತ ಕಾಲಮಾನದಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಪಡೆದು ಸ್ವಾವಲಂಬಿ ಮತ್ತು ಸಮರ್ಥರಾಗುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಅಂಕ ಗಳಿಕೆಗಿಂತ ಆಂತರಿಕ ಪ್ರಯಾಣದಲ್ಲಿ ತೊಡಗಿಕೊಂಡು ತತ್ವ ಮತ್ತು ಜ್ಞಾನಕ್ಕೆ ಶರಣಾಗಬೇಕು. ಈ ಆಂತರಿಕ ಪ್ರಯಾಣ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಅವರ ತತ್ವ ಮತ್ತು ವಿಚಾರಧಾರೆಗಳು ನೆರವಾಗಲಿವೆ ಎಂದು ಹೇಳಿದರು. ಸರಕಾರ ಒಳ್ಳೆಯ ಮೂಲಸೌಕರ್ಯಗಳನ್ನು ಕಲ್ಪಿಸಿದಾಗ ವಿದ್ಯಾರ್ಥಿಗಳು ಸ್ವಾವಲಂಬಿಗಳಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ತರಬೇತಿ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಾಧ್ಯಾಪಕ ಡಾ. ಜೆ .ಸೋಮಶೇಖರ, ಕುಲಸಚಿವ ಸಂತೋಷ್ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ಡಿ. ಏನ್. ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಅಶೋಕ್ ಡಿಸೋಜಾ, ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿರರಿದ್ದರು. ಡಾ. ಗಜಾನನ ನಾಯ್ಕ ನಿರೂಪಿಸಿದರು. ಡಾ. ಅಶ್ವಿನಿ ಎಂ ಜಾಮೂನಿ ವಂದಿಸಿದರು.




