Kannada NewsKarnataka News

ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ಖಂಡನಾರ್ಹ -ತೋಂಟದ ಸಿದ್ಧರಾಮ ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಮದ್ಯಮಾರಾಟಕ್ಕೆ ಕೇಂದ್ರ ಸರಕಾರ ಮತ್ತೆ ಅನುಮತಿ ನೀಡಿರುವುದು ಅತ್ಯಂತ ಆಘಾತಕಾರಿಯಾಗಿದೆ ಎಂದು ಗದಗ-ಡಂಬಳ ಜಗದ್ಗುರು ತೋಂಟದಾರ್ಯಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮದ್ಯಪಾನದಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಮದ್ಯವ್ಯಸನಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಎಲ್ಲಿ ಬೇಕಾದಲ್ಲಿ ಬಿದ್ದು, ಹೊರಳಾಡಿ ಬಂದು ಮನೆಮಂದಿಗೆಲ್ಲ ಕೊರೋನಾ ಹಬ್ಬಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುವರು. ಮದ್ಯವ್ಯಸನಿಗಳಿಂದಾಗಿ ಮೊದಲು ಬೀದಿ ಪಾಲಾಗುತ್ತಿದ್ದ ಕುಟುಂಬಗಳು ಇನ್ನು ಮಸಣದ ಪಾಲಾಗುವ ದಿನಗಳು ದೂರವಿಲ್ಲ ಎನಿಸುತ್ತದೆ.

ಕೊರೋನಾದಿಂದಾಗಿ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಇದ್ದುದರಲ್ಲಿಯೇ ಸಂಸಾರ ನಿರ್ವಹಣೆ ಮಾಡಬೇಕಾದ ಸಂಕಷ್ಟ ಸ್ಥಿತಿ ಮನೆಯ ಹೆಣ್ಣು ಮಕ್ಕಳಿಗಿರುವಾಗ ಹೊಡೆದು ಬಡೆದು ಇದ್ದುದನ್ನೂ ಕಸಿದುಕೊಂಡು ಹೋದರೆ ಅವರ ಪರಿಸ್ಥಿತಿ ಏನು ಎನ್ನುವುದನ್ನು ಸರಕಾರ ಅರ್ಥಮಾಡಿಕೊಳ್ಳಬೇಕು. ಗಾಂಧಿನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ಹಾಗು ಗೃಹಮಂತ್ರಿ ಮಾನ್ಯ ಅಮಿತಷಾ ಅವರಿಂದ ಇಂಥ ಕ್ರಮವನ್ನು ಭಾರತದ ಸಭ್ಯ-ಸುಸಂಸ್ಕೃತ ಸಮಾಜ ನಿರೀಕ್ಷಿಸಿರಲಿಲ್ಲ. ಅವರ ಈ ನಡೆ ದೇಶದ ಬಗ್ಗೆ ಅವರಿಗಿರುವ ಕಾಳಜಿಯನ್ನು ಪ್ರಶ್ನಿಸುವಂತಿದೆ ಎಂದಿದ್ದಾರೆ.

ಇಂದು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸಿದ ಅವರು ಕೇಂದ್ರದ ಈ ನಡೆಯಿಂದ ದೇಶದಲ್ಲಿ ಸಾಂಕ್ರಾಮಿಕ ರೋಗವಾಗಿರುವ ಕೊರೋನಾವನ್ನು ತಡೆಗಟ್ಟುವುದು ಅಸಾಧ್ಯವಾಗುತ್ತದೆ. ಶಿಸ್ತುಬದ್ಧ, ಸಂಯಮದಿಂದ ಕೂಡಿದ ಜೀವನ ಶೈಲಿಯಿಂದ ಮಾತ್ರ ನಾವು ಮಾನವ ಕುಲವನ್ನು ಸಂರಕ್ಷಿಸಬಹುದಾಗಿದೆ.

ಇಂದು ಅಮೇರಿಕೆಯಲ್ಲಿ ೬೫ ಸಾವಿರಕ್ಕೂ ಅಧಿಕ ಜನರು ಕೋರೋನಾದಿಂದ ಸಾವಿಗೀಡಾಗಿರುವುದಕ್ಕೆ ಇಂತಹ ವ್ಯಸನಗಳು, ಶಿಸ್ತುಬದ್ಧ ಆರೋಗ್ಯಪೂರ್ಣ ಜೀವನ ಶೈಲಿಯಿಂದ ಜನರು ವಿಮುಖರಾಗಿರುವುದೇ ಮುಖ್ಯಕಾರಣ ಎಂಬುದು ನಮ್ಮ ಪ್ರಧಾನಿಗಳಿಗೆ ತಿಳಿಯದ ವಿಷಯವೇನಲ್ಲ. ಜನರು ದುರ್ವ್ಯಸನಗಳಿಗೆ ಬಲಿಯಾಗುವುದನ್ನು ತಡೆಗಟ್ಟದೆ ಮಾಡುವ ಲಾಕ್‌ಡೌನ್‌ಗಳಿಂದ ಯಾವುದೇ ಪ್ರಯೋಜನವಿಲ್ಲ. ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿಮಾಡುತ್ತದೆ ಎಂದು ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ಈ ನಡೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಚಲಿತರಾಗಿರಬಹುದು. ಕೋರೋನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಮದ್ಯಪಾನವನ್ನು ಅವರು ಸಂಪೂರ್ಣವಾಗಿ ನಿಷೇಧಿಸಲೇಬೇಕು. ಇಲ್ಲದಿದ್ದರೆ ಮದ್ಯವ್ಯಸನಿಗಳೇ ಕೊರೋನಾ ವೈರಸ್‌ನ ವಾಹಕದಂತೆ ಕಾರ್ಯಮಾಡುವ ಮೂಲಕ ಸರಕಾರದ ಲೆಕ್ಕಾಚಾರವನ್ನು ಬುಡಮೇಲು ಮಾಡುವಲ್ಲಿ ಯಾವುದೇ ಸಂದೇಹವಿಲ್ಲ.

ಮುಖ್ಯಮಂತ್ರಿಗಳು ದಯಮಾಡಿ ಮದ್ಯಮಾರಾಟಕ್ಕೆ ಅನುಮತಿಸಬಾರದು. ಈ ವಿಷಯದಲ್ಲಿ ಈಗಾಗಲೇ ನಾವು ಮುಖ್ಯಮಂತ್ರಿಗಳಿಗೆ ವಿಸ್ತೃತವಾಗಿ ಪತ್ರ ಬರೆದು ಮದ್ಯಮಾರಾಟದಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಮುಖ್ಯಮಂತ್ರಿಗಳು ಅದನ್ನು ಗಮನಿದ್ದಾರೆಂದು ಭಾವಿಸುತ್ತೇವೆ.
ದೇಶದ ಸಭ್ಯ ಸುಸಂಸ್ಕೃತ ನಾಗರಿಕರು, ಧರ್ಮಗುರುಗಳು, ದೇಶಪ್ರೇಮ ಹೊಂದಿದ ಯುವಕ ಯುವತಿಯರು ಕೇಂದ್ರ ಸರಕಾರ ಹಾಗು ರಾಜ್ಯ ಸರಕಾರದ ಮೇಲೆ ಒತ್ತಡ ತರುವ ಮೂಲಕ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಸಹಕರಿಸಬೇಕೆಂದು ಶ್ರೀಗಳು ಕೋರಿದ್ದಾರೆ. ಈ ವಿಷಯದಲ್ಲಿ ಎಲ್ಲ ಧರ್ಮಗುರುಗಳು ಒಗ್ಗಟ್ಟನ್ನು ಪ್ರದರ್ಶಿಸಿ ಸರಕಾರದ ನಡೆಯನ್ನು ಖಂಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

————–

Please open the link and like the Face book page.
ಈ ಲಿಂಕ್ ಓಪನ್ ಮಾಡಿ, ಪೇಜ್ ಲೈಕ್ ಮಾಡಿ.
Thank you

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button