ಮೀನುಸಾಕಾಣಿಕೆಯ ಋತು ಆರಂಭ
ಪ್ರಗತಿವಾಹಿನಿ ಸುದ್ದಿ – ಮೂಡಲಗಿ : ಜೂನ್- ಜುಲೈ ತಿಂಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಕಟ್ಟೆಗಳು, ಕೃಷಿಹೊಂಡಗಳು ನಿಧಾನವಾಗಿ ತುಂಬಲು ಆರಂಭಗೊಂಡಿವೆ. ಜೊತೆಗೆ, ಮೀನುಮರಿಗಳ ಸಂತಾನೋತ್ಪತ್ತಿಯೂ ಕೂಡ ಈ ಮುಂಗಾರಿನೊಂದಿಗೆ ಶುರುವಾಗಿದೆ. ಮೀನುಮರಿಗಳ ಲಭ್ಯತೆ ಇರುವ ಈ ಸಂದರ್ಭದಲ್ಲಿ ಕೃಷಿ ಹೊಂಡಗಳನ್ನು ಹೊಂದಿರುವ ರೈತರು ಮತ್ತು ಕೆರೆಗಳನ್ನು ಬಾಡಿಗೆಯಾಧಾರದಲ್ಲಿ ಪಡೆದ ಮೀನುಗಾರರು ಮೀನುಕೃಷಿಗೆ ಮುನ್ನಡಿ ಇಡುವ ಸಮಯ ಇದಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆ, ಹಿಡಕಲ್ ಡ್ಯಾಂ ಹಾಗೂ ಮೀನುಗಾರಿಕೆ ಇಲಾಖೆ, ನವಿಲು ತೀರ್ಥ ಇಲ್ಲಿ ಮೀನುಮರಿಗಳ ಲಭ್ಯತೆಯು ಹೆಚ್ಚು ಕಡಿಮೆ ಈ ತಿಂಗಳ ಅಂತ್ಯದಲ್ಲಿ ಶುರುವಾಗುತ್ತದೆ. ಕಾಟ್ಲಾ, ರೋಹು, ಮೃಗಾಲ್ ಹಾಗೂ ಕಾಮನ್ ಕಾರ್ಪ ತಳಿಗಳು ನಮ್ಮ ಜಿಲ್ಲೆಯಲ್ಲಿ ದೊರಕುವ ಮುಖ್ಯವಾದ ಮೀನಿನ ತಳಿಗಳು. ಜುಲೈ- ಆಗಸ್ಟ್ ತಿಂಗಳುಗಳಲ್ಲಿ ಮೀನುಮರಿಗಳ ಸಾಕಾಣಿಕೆಯನ್ನು ಶುರುಮಾಡಿದರೆ ಮುಂದಿನ ಏಪಿಲ್- ಮೇ ತಿಂಗಳಿನ ಅವಧಿಯಲ್ಲಿ ಮೀನುಗಳು ಹೆಚ್ಚು ಕಡಿಮೆ 1 ಕಿಲೋದಷ್ಟು ತೂಕವನ್ನು ಪಡೆದುಕೊಂಡು ಮಾರಾಟಕ್ಕೆ ತಯಾರಾಗುತ್ತವೆ.
ಪ್ರತಿ ಚದರಮೀಟರ್ ವಿಸ್ತೀರ್ಣದಲ್ಲಿ ತಲಾ ಒಂದು ಅಥವಾ ಹೆಚ್ಚೆಂದರೆ 2 ಮರಿಗಳನ್ನು ಬಿತ್ತನೆ ಮಾಡಬೇಕು. ಅಂದರೆ ಪ್ರತಿ ಗುಂಟೆಗೆ 100ರಿಂದ 200ಮರಿಗಳು ಮಾತ್ರ. ಇದಕ್ಕೂ ಮೀರಿ ಹೆಚ್ಚಿನ ಸಾಂದ್ರತೆಯಲ್ಲಿ ಮೀನುಮರಿಗಳನ್ನು ಕೊಳಗಳಲ್ಲಿ ಬಿಟ್ಟರೆ ಆಹಾರ ಹಾಗೂ ಸ್ಥಳಾವಕಾಶಕ್ಕಾಗಿ ವಿಪರೀತ ಪೈಪೋಟಿ ನಡೆದು ಒತ್ತಡದ ಸನ್ನಿವೇಶ ಏರ್ಪಟ್ಟು ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಕೆಲವು ಖಾಸಗಿ ವ್ಯಾಪಾರಿಗಳು ಪ್ರತಿಗುಂಟೆಗೆ 10,000ದಿಂದ 20,000ದವರೆಗೂ ಮೀನುಮರಿಗಳನ್ನು ಸಾಕುವುದರಿಂದ ಹೆಚ್ಚನ ಲಾಭಸಿಗುತ್ತದೆ ಎಂದು ರೈತರಿಗೆ ಮೋಸಮಾಡಿದ ಉದಾಹರಣೆಗಳು ಅನೇಕ. ಆದ್ದರಿಂದ ರೈತರು ಎಚ್ಚರವಾಗಿದ್ದುಕೊಂಡು ಈ ಮೊದಲು ತಿಳಿಸಿದಂತೆ ಪ್ರತಿಗುಂಟೆಗೆ 100ರಿಂದ 200ರಷ್ಟು ಮರಿಗಳನ್ನು ಸಾಕಾಣಿಗೆ ಮಾಡವುದು ಸೂಕ್ತ. ಇದರಿಂದಾಗಿ ಎಲ್ಲಾ ರೀತಿಯ ಖರ್ಚುಗಳು ಕಡಿಮೆಯಾಗುತ್ತದೆ. ಅಲ್ಲದೆ ನಿಯಮಿತ ಆಹಾರ ಹಾಗೂ ಸ್ಥಳಾವಕಾಶದ ಲಭ್ಯತೆಯಿಂದಾಗಿ ಮೀನುಗಳ ಉತ್ತಮ ಬೆಳವಣಿಗೆ ಸಾಧ್ಯವಾಗುತ್ತದೆ.
ಮೀನುಮರಿಗಳನ್ನು ಕೊಳಕ್ಕೆ ಸೇರಿಸುವ ಒಂದು ವಾರ ಮೊದಲು ಪ್ರತಿ ಗುಂಟೆಗೆ 40ಕಿಲೊ ಸಗಣಿ, 250 ಗ್ರಾಂ ಯೂರಿಯಾ ಹಾಗೂ 400 ಗ್ರಾಂ ಸಿಂಗಲ್ ಸೂಪರ್ ಪಾಸ್ಪೇಟನ್ನು ನೀರಿನಲ್ಲಿ ಕರಗಿಸಿ ಸೇರಿಸಬೇಕು. ಮೀನುಮರಿಗಳನ್ನು ಬಿಟ್ಟ ನಂತರ ಪ್ರತಿ ತಿಂಗಳಿಗೊಮ್ಮೆ ಈ ಮೇಲೆ ತಿಳಿಸಿದ ಪ್ರಮಾಣದಲ್ಲಿ ಗೊಬ್ಬರವನ್ನು ನೀಡಬೇಕು. ಇದರಿಂದಾಗಿ ಮೀನುಗಳ ನೈಸರ್ಗಿಕ ಆಹಾರವಾದ ಪ್ಲಾಂಕ್ಟಾನಗಳನ್ನು ನೀರಿನಲ್ಲಿ ಉತ್ಪತ್ತಿ ಮಾಡಬಹುದಾಗಿದೆ.
ಮೀನುಗಳಿಗೆ ಆಹಾರವಾಗಿ 1:1 ಪ್ರಮಾಣದಲ್ಲಿ ಅಕ್ಕಿ ತೌಡು ಅಥವಾ ಗೋವಿನಜೋಳ, ಜೋಳದ ಹಿಟ್ಟುಗಳು ಹಾಗೂ ಶೇಂಗಾ ಹಿಂಡಿಯನ್ನು ಪ್ರತಿ 5000 ಮರಿಗಳಿಗೆ ಮೊದಲ ತಿಂಗಳು 1ಕಿಲೋದಂತೆ ನೀಡಬೇಕು. ನಂತರದ ತಿಂಗಳಲ್ಲಿ ಆಹಾರವನ್ನು 40% ಹೆಚ್ಚಿಸುತ್ತಾ ಹೋಗಬೇಕು. ಮೀನುಮರಿಗಳನ್ನು ತಂದುಬಿಡುವ ಮೊದಲು ಒಂದು ತಿಂಗಳಿಗೆ ಬೇಕಾದ ಆಹಾರವನ್ನು ತಂದಿಟ್ಟುಕೊಂಡರುವುದರಿಂದ ಆಹಾರ ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ತಡೆಯಬಹುದು.
ಮುತುವರ್ಜಿಯಿಂದ ಕೈಗೊಂಡಲ್ಲಿ ಮೀನುಸಾಕಾಣಿಯು ಒಂದು ಅತ್ಯುತ್ತಮ ಉದ್ದಿಮೆ. ಈ ಋತುವು ಮೀನುಸಾಕಾಣಿಕೆಯನ್ನು ಕೈಗೊಳ್ಳುವ ರೈತರಿಗೆ ಫಲಪ್ರದವಾಗಿರಲಿ ಎಂದು ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಆದರ್ಶ ಹೆಚ್ಚ್.ಎಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ