ಪರಿಹಾರ ನೀಡುವ ಮಾನದಂಡವನ್ನು ಮಾರ್ಪಾಡು ಮಾಡಬೇಕು
ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ಪ್ರವಾಹದಲ್ಲಿ ಹಾನಿಯಾಗಿರುವ ರೈತರ ಬೆಳೆಗೆ ಸರ್ಕಾರದ ಮಿತಿಯ ಮಾನದಂಡವನ್ನು ಅನುಸರಿಸದೆ ಹಾನಿಯಾಗಿರುವ ಸಂಪೂರ್ಣ ಬೆಳೆಗೆ ಪರಿಹಾರ ದೊರೆಯುವಂತಾಗಬೇಕು ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ರಾಮಲಿಂಗಾರಡ್ಡಿ ಸರ್ಕಾರವನ್ನು ಒತ್ತಾಯಿಸಿದರು.
ನದಿ ಪ್ರವಾಹಕ್ಕೆ ಒಳಗಾಗಿದ್ದ ತಾಲ್ಲೂಕಿನ ಗ್ರಾಮಗಳಿಗೆ ಮತ್ತು ಪರಿಹಾರ ಕೇಂದ್ರಗಳಿಗೆ ಶನಿವಾರ ತೆರಳಿ ನಿರಾಶ್ರಿತರಿಗೆ ಆಹಾರ ಪದಾರ್ಥ ಮತ್ತು ಬಟ್ಟೆ, ಹೊದಿಕೆಗಳನ್ನು ನೀಡಿ ನಂತರ ಮೂಡಲಗಿಯ ವೇಮನ ಸೋಸಾಯಿಟಿಯಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ – ಸಂತ್ರಸ್ತ ಪ್ರದೇಶಗಳಿಗೆ ರಾಮಲಿಂಗಾ ರಡ್ಡಿ, ವೇಮನಾನಂದ ಸ್ವಾಮೀಜಿ ಭೇಟಿ
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪರಿಹಾರ ನೀಡುವ ಮಿತಿಯ ಮಾನದಂಡವನ್ನು ಮಾರ್ಪಾಡು ಮಾಡಬೇಕು ಎಂದರು.
ಬೆಳೆ ಹಾನಿಗೆ ಸರ್ಕಾರದ ಮಿತಿಯನ್ನು ಅನುರಿಸಿದರೆ ಅದರಿಂದ ರೈತರಿಗೆ ಏನೂ ಅನುಕೂಲವಾಗುವದಿಲ್ಲ. ರೈತರ ಬೆಳೆಯು ಎಷ್ಟು ಹಾನಿಯಾಗಿದೆ ಎನ್ನುವುದನ್ನು ಸರಿಯಾಗಿ ಸಮೀಕ್ಷೆ ಮಾಡಿ ರೈತರಿಗೆ ಸರಿಯಾಗಿ ಪರಿಹಾರ ದೊರೆಯುವಂತೆ ಆಗಬೇಕು ಎಂದರು.
ಪ್ರವಾಹದಲ್ಲಿ ಸಾಕಷ್ಟು ಮನೆಗಳು ಕೊಚ್ಚಿಹೋಗಿವೆ. ಅಂಥ ಗ್ರಾಮದ ಸಂತ್ರಸ್ತರಿಗೆ ಮುಳಗಡೆ ಪ್ರದೇಶಗಳಿಗೆ ಪರಿಹಾರ ನೀಡುವ ರೀತಿಯಲ್ಲಿ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕು, ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಕೇಂದ್ರ ಸರ್ಕಾರವು ಪ್ರವಾಹಕ್ಕೆ ಹಾನಿಗಾಗಿ ರಾಜ್ಯಕ್ಕೆ ಶೀಘ್ರವಾಗಿ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದರು.
ಸಂತ್ರಸ್ತರ ಕಷ್ಟದೊಂದಿಗೆ ಬೆರೆಯುವ ಉದ್ದೇಶದಿಂದ ಉತ್ತರ ಕರ್ನಾಟಕದ ಪ್ರವಾಹ ಸ್ಥಳಗಳಿಗೆ ತಾವು ಭೇಟಿ ನೀಡುತ್ತಿದ್ದು, ತಮ್ಮೊಂದಿಗೆ ಪಕ್ಷಾತಿತವಾಗಿ ಅನೇಕ ಕಾರ್ಯಕರ್ತರು, ಸಂಘ, ಸಂಸ್ಥೆಯವರು ಮತ್ತು ಅಭಿಮಾನಿಗಳು ಕೈಜೋಡಿಸಿದ್ದಾರೆ, ಆಯಾ ಪ್ರದೇಶದ ಸಂತ್ರಸ್ತರಿಗೆ ಈವರೆಗೆ ಸರ್ಕಾರ ಮತ್ತು ವಿವಿಧೆಡೆಯ ಸಂಘ, ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಉತ್ತಮ ನೆರವು ನೀಡಿದ್ದು ಶ್ಲಾಘನೀಯವಾಗಿದೆ ಎಂದರು.
ಮೂಡಲಗಿ ತಾಲ್ಲೂಕಿನ ಹುಣಶ್ಯಾಳ ಪಿವೈ, ಢವಳೇಶ್ವರ, ಅರಳಿಮಟ್ಟಿ, ಅವರಾದಿ, ಕಮಲದಿನ್ನಿ, ಮುನ್ಯಾಳ, ಮುಧೋಳ ತಾಲ್ಲೂಕಿನ ಮಲ್ಲಾಪೂರ, ಮಿರ್ಜಿ, ಒಂಟಗೋಡಿ, ರೂಗಿ, ಮಳಲಿ ಗ್ರಾಮಗಳ ಸಂತ್ರಸ್ತರಿಗೆ ತಮ್ಮೊಂದಿಗೆ ತಂದಿದ್ದ ನೆರವು ನೀಡಿ ಸಾಂತ್ವನ ಹೇಳಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯಕುಮಾರ ಸೋನವಾಲಕರ, ದಯಾನಂದ ಪಾಟೀಲ, ಎಸ್.ಆರ್. ಸೋನವಾಲಕರ, ಎಸ್.ಎಚ್. ಸೋನವಾಲಕರ, ಬಾಬು ಸೋನವಾಲಕರ, ಸತೀಶ ವಂಟಗೋಡಿ, ರಮೇಶ ಮಳಲಿ, ಆರ್.ಪಿ. ಸೋನವಾಲಕರ, ರಮೇಶ ಪ್ಯಾಟಿಗೌಡರ, ಸಂತೋಷ ಸೋನವಾಲಕರ, ಕೆ.ಬಿ. ಪಾಟೀಲ, ಹನಮಂತ ಪ್ಯಾಟಿಗೌಡರ, ಪಿ.ಆರ್ ಸೋನವಾಲಕರ, ರೇವಪ್ಪ ಕುರಬಗಟ್ಟಿ, ಸುಭಾಷ ಸಣ್ಣಕ್ಕಿ, ಬೆಂಗಳೂರಿನ ಎಸ್ ಮನೊಹರ, ಜಿ ಜನಾರ್ಧನ, ಎ ಆನಂದ, ಆದಿತ್ಯಾ, ಹೇಮರಾಜು, ಪುಟ್ಟರಾಜು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ