ಪ್ರವಾಹ ಬಂದು ವರ್ಷವಾದರೂ ಪರಿಹಾರ ಕೊಟ್ಟಿಲ್ಲ
ಸಂತೋಷಕುಮಾರ ಕಾಮತ
ಪ್ರಗತಿವಾಹಿನಿ ಸುದ್ದಿ, ಮಾಂಜರಿ – ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗ ಹಾಗೂ ಗಡಿ ಭಾಗದಲ್ಲಿ ಭಾರಿ ಮಳೆಯಿಂದ ಕಳೆದ ವರ್ಷ ಉಂಟಾದ ಭೀಕರ ಪ್ರವಾಹಕ್ಕೆ ಈಗ ಒಂದು ವರ್ಷ.
ಆದರೆ ಕಳೆದ ವರ್ಷದ ಪ್ರವಾಹಕ್ಕೆ ನಲುಗಿ ಹೋದ ನದಿ ತೀರದ ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ಚೇತರಿಸಿಕೊಳ್ಳಲಾಗದಷ್ಟು ಹಾನಿಯಾಗಿದೆ. ಸರ್ಕಾರ ಮಾತ್ರ ಆರಂಭದಲ್ಲಿ ನೀಡಿದ ಭರವಸೆ ಈಡೇರಿಸಿಲ್ಲ, ಹೀಗಾಗಿ ಅರ್ಧಕ್ಕಿಂತ ಹೆಚ್ಚು ಸಂತ್ರಸ್ತರು ಸಮರ್ಪಕ ಪರಿಹಾರ ಇಲ್ಲದೆ ಪರದಾಡುವಂತಾಗಿದೆ.
ಗಡಿ ಭಾಗದ ಕೃಷ್ಣಾ, ದೂಧಗಂಗಾ, ವೇದಗಂಗಾ ಮತ್ತು ಪಂಚಗಂಗಾ ಹಾಗೂ ಚಿಕ್ಕೋತ್ರಾ ನದಿಗಳ ಅಬ್ಬರದಿಂದಾಗಿ ರಾಜ್ಯ ಹಿಂದೆಂದೂ ಕಂಡರಿಯದ ಮಹಾ ಪ್ರವಾಹಕ್ಕೆ ತುತ್ತಾಗಿ ಹೋಗಿತ್ತು. ಪ್ರವಾಹದಲ್ಲಿ ಸಂತ್ರಸ್ತರು ಕಳೆದುಕೊಂಡ ಮನೆಗಳು ಇನ್ನೂ ನಿರ್ಮಾಣವಾಗಿಲ್ಲ, ರಾಜ್ಯ ಸರಕಾರ ಘೋಷಣೆ ಮಾಡಿರುವ ಐದು ಲಕ್ಷ ರೂ ನಂಬಿ ಹೊಸ ಮನೆ ಕಟ್ಟಿಕೊಳ್ಳಲು ಆರಂಭಿಸಿರುವ ಸಂತ್ರಸ್ತರು ಎರಡನೆ ಕಂತಿನ ಹಣ ಬರದೇ ಗೋಳಾಡುತ್ತಿದ್ದಾರೆ.
ಕಳೆದ ಆಗಷ್ಟ್ ತಿಂಗಳಲ್ಲಿ ಧಾರಾಕಾರ ಮಳೆಯಿಂದ ನದಿಗಳ ಭೀಕರ ಪ್ರವಾಹದಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಹತ್ತಾರು ಹಳ್ಳಿಗಳು ಮುಳುಗಡೆಗೊಂಡು ತೀವ್ರ ಸಂಕಷ್ಟಕ್ಕೆ ಒಳಗಾಗಿ ಮನೆಮಠ ಕಳೆದುಕೊಂಡು ಸಂತ್ರಸ್ತರು ಅತಂತ್ರರಾಗಿದ್ದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸರ್ವೇ ಕಾರ್ಯಕೈಗೊಂಡು ಸೂಕ್ತ ಪರಿಹಾರ ನೀಡಲಾಗುತ್ತದೆಂದು ಭರವಸೆ ನೀಡಿತ್ತು.
ಆರಂಭದಲ್ಲಿ ತರಾತುರಿಯಲ್ಲಿ ಸರ್ವೇ ಕಾರ್ಯಕೈಗೊಂಡು ಕಾಗದ ಪತ್ರಗಳನ್ನು ಹೊಂದಿರುವ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಮೊದಲನೆ ಕಂತು ಬಿಡುಗಡೆ ಮಾಡಿ ಮನೆ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಿದರು. ಆದರೆ ತಡವಾಗಿ ಸರ್ವೇಯಾದ ಫಲಾನುಭವಿಗಳಿಗೆ ಮಾತ್ರ ಮನೆ ಸಿಕ್ಕಿಲ್ಲ. ಹೀಗಾಗಿ ಬಹಳಷ್ಟು ಸಂತ್ರಸ್ತರಿಗೆ ದನದ ಕೊಟ್ಟಿಗೆಯೇ ಆಶ್ರಯತಾಣವಾಗಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ, ಯಡೂರ, ಇಂಗಳಿ, ಅಂಕಲಿ, ಮಾಂಜರಿ, ಯಡೂರವಾಡಿ, ಚೆಂದೂರ, ಚೆಂದೂರ ಟೇಕ,ಯಕ್ಸಂಬಾ, ಸದಲಗಾ, ಮಲಿಕವಾಡ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಒಕ್ಕರಿಸಿಕೊಂಡ ಪ್ರವಾಹ ಇಡೀ ಗ್ರಾಮಗಳನ್ನೇ ಆವರಿಸಿಬಿಟ್ಟಿತ್ತು. ತಾಲೂಕಿನಲ್ಲಿ ಸರ್ಕಾರ ಸರ್ವೇ ಮಾಡಿದ ಪ್ರಕಾರ ಒಟ್ಟು ೪೪೨೪ ಮನೆಗಳಿಗೆ ಪರಿಹಾರ ನೀಡಲು ಸಮ್ಮತ್ತಿ ಸೂಚಿಸಿತ್ತು. ಎ ಕೆಟಗೆರಿಯಲ್ಲಿ ೫೩೮ ಮನೆಗಳ ಪೈಕಿ ೪೮೭ ಮನೆಗಳು ಪ್ರಗತಿಯಲ್ಲಿವೆ. ಬಿ ಕೆಟಗೆರಿಯಲ್ಲಿ ೧೨೨೭ ಮನೆಗಳ ಪೈಕಿ ೭೯೬ ಮನೆಗಳು ಪ್ರಗತಿಯಲ್ಲಿವೆ. ಸಿ ಕೆಟಗೆರಿಯ ೨೭೦೯ ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಸತಿ ಲಾಗಿನ್ ಬಂದ್: ಪ್ರವಾಹ ಬಂದು ವರ್ಷ ಗತಿಸಿದರೂ ಅರ್ಹ ಫಲಾನುಭವಿಗಳಿಗೆ ಮನೆ ಸಿಕ್ಕಿಲ್ಲ. ಸರ್ವೇ ಮಾಡಿದ ಫಲಾನುಭವಿಗಳ ದಾಖಲಾತಿಗಳು ರಾಜ್ಯ ಸರ್ಕಾರದ ಅಂಗಳಕ್ಕೆ ಹೋಗದೇ ಸ್ಥಳೀಯ ಪಂಚಾಯತಿಯಲ್ಲಿ ದೂಳು ತಿನ್ನುತ್ತಿವೆ. ಪ್ರವಾಹ ಬಂದು ಎರಡು ತಿಂಗಳಲ್ಲಿಯೇ ವಸತಿ ಲಾಗಿನ್ ಬಂದ್ ಆಗಿದೆ. ಹೀಗಾಗಿ ಬಹಳಷ್ಟು ಸಂತ್ರಸ್ತರಿಗೆ ಮನೆಗಳ ಪರಿಹಾರ ದೊರಕಿಲ್ಲ, ಪರಿಹಾರ ಕೊಡಿ ಎಂದು ಸ್ಥಳೀಯ ಅಧಿಕಾರಿಗಳನ್ನು ಕೇಳಿದರೆ ಲಾಗಿನ್ ಬಂದ್ ಆಗಿದೆ. ಆರಂಭವಾದಾಗ ಮನೆಗಳಿಗೆ ಪರಿಹಾರ ಸಿಗುತ್ತದೆಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಕೊಡಲು ಸರ್ಕಾರ ಮೀನಮೇಷ: ಪ್ರವಾಹ ಬಂದು ಹೋಗಿ ವರ್ಷ ಕಳೆದಿದೆ. ಸಂತ್ರಸ್ತರ ಬದುಕಿಗೆ ಹೊಸ ಜೀವನ ಕಟ್ಟಿಕೊಡಲು ಸರ್ಕಾರ ವಿಫಲವಾಗಿದೆ. ಅನೇಕ ಜನರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಸರ್ಕಾರದ ಪರಿಹಾರ ನಂಬಿ ಸಾಲ ಮಾಡಿ ಮನೆ ಕಟ್ಟಲು ಆರಂಭಿಸಲಾಗಿದೆ. ಆದರೆ ಸರ್ಕಾರ ಮಾತ್ರ ಪೂರ್ಣಪ್ರಮಾಣದ ಪರಿಹಾರ ನೀಡುತ್ತಿಲ್ಲ, ಮನೆ ಇಲ್ಲದವರಿಗೆ ಹೊಸ ಅರ್ಜಿ ಕೊಡಲು ಲಾಗಿನ್ ಬಂದ್ ಮಾಡಿ ಬಿಟ್ಟಿದೆ ಎಂದು ಮಾಂಜರಿ ಗ್ರಾಮದ ಸಿದ್ಧಾರ್ಥ ಗಾಯಗೋಳ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಲ್ಲಿ ಮನೆ ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ ಮನೆ ಸಿಕ್ಕಿಲ್ಲ, ಸಮರ್ಪಕ ಸರ್ವೇ ಮಾಡಬೇಕೆಂದು ಒತ್ತಾಯ ಮಾಡಿದರೂ ಪ್ರಯೋಜನವಾಗಿಲ್ಲ, ಹೊಸ ಮನೆ ಅರ್ಜಿ ಕೊಡಲು ವಸತಿ ಲಾಗಿನ್ ಬಂದಾಗಿದೆ. ಹೀಗಾಗಿ ಪ್ರವಾಹ ಸಂತ್ರಸ್ತರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರನ್ನು ನಂಬಿಸಲು ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ.
-ಮುಕೇಶಕುಮಾರ ಲಂಬುಗೋಳ, ಮಾಂಜರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ