
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ಅನೇಕ ವೀರರನ್ನು ಕೊಡುಗೆಯಾಗಿ ಕೊಟ್ಟ ನಾಡು. ವೀರರಾಣಿ ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ವಡ್ಡರ ಯಲ್ಲಣ್ಣ ಸೇರಿದಂತೆ ಅನೇಕರು ಈ ನಾಡಿನ ಉಳಿವಿಗೆ ಹೋರಾಡಿದ್ದಾರೆ. ಅವರ ಶೂರತನ, ದಿಟ್ಟತನ ನಮ್ಮೆಲ್ಲರಿಗೂ ಪ್ರೇರಣೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ (ಫೆ.28) ಬೆಳವಡಿಯಲ್ಲಿ ನಡೆದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ -2025ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಬೆಳೆಗಳನ್ನು ಬೆಳೆದು ವೈಜ್ಞಾನಿಕ ಪದ್ಧತಿಯ ಮೂಲಕ ರೈತ ಮಹಿಳೆ ಕವಿತಾ ಮಿಶ್ರಾ ಅವರಿಗೆ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಶಸ್ತಿ ಲಭಿಸಿದ್ದು, ಸಂತಸದ ವಿಷಯ. ಅವರು ಅನೇಕ ಮಹಿಳೆಯರಿಗೆ ಮಾದರಿ ಎಂದರು.
ಶೂರ ವಡ್ಡರ ಯಲ್ಲಣ್ಣ ಈ ನಾಡಿನ ಇತಿಹಾಸದ ಹೆಮ್ಮಯ ಪುತ್ರ. ವೀರರಾಣಿ ಬೆಳವಡಿ ಮಲ್ಲಮ್ಮನ ಹೆಸರಿನಲ್ಲಿ ಪ್ರಾಧಿಕಾರ ರಚನೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ತಿಳಿಸಿದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, “ಮುಂದಿನ ಪೀಳಿಗೆಗೆ ಬೆಳವಡಿ ಮಲ್ಲಮ್ಮನ ದಿಟ್ಟತನ ಮಾದರಿ. ಮಹಿಳಾ ಸೈನ್ಯ ಕಟ್ಟಿ ಹೋರಾಡಿ ಶೌರ್ಯಕ್ಕೆ ಹೆಸರಾದ ಮಲ್ಲಮ್ಮನ ಸಾಹಸಗಾಥೆ ಜಗತ್ತು ಬೆರಗಾಗುವಂತಹದ್ದು. ಇತಿಹಾಸದಲ್ಲಿ ಅನೇಕ ಹೋರಾಟಗಾರ ತ್ಯಾಗ ಬಲಿದಾನದಿಂದ ಇಂದಿನ ಪೀಳಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ವೀರ ರಾಣಿ ಬೆಳವಡಿ ಮಲ್ಲಮ್ಮನ ಹೆಸರು ಚರಿತ್ರೆಯಲ್ಲಿ ಎಂದಿಗೂ ಅಜರಾಮರ” ಎಂದರು.
ದೇಶದ ಸಂಸ್ಕೃತಿ, ವಿಭಿನ್ನತೆ, ಪರಂಪರೆ, ಮಲ್ಲಮ್ಮನ ಕೀರ್ತಿಯನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕು. ಮಲ್ಲಮ್ಮಳ ಸ್ಮರಣಾರ್ಥವಾಗಿ ನಡೆಯುವ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಷನ್ ತಿಳಿಸಿದರು.
ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಬೆಳವಡಿ ಮಲ್ಲಮ್ಮನ ಉತ್ಸವ ಆಚರಿಸಲಾಗುತ್ತಿದೆ. ಬೆಳವಡಿ ರಾಣಿ ಮಲ್ಲಮ್ಮ ಪ್ರಾಧಿಕಾರವಾಗಬೇಕು ಎಂಬುದು ಈ ಭಾಗದ ಕೂಗು. ರಾಣಿ ಮಲ್ಲಮ್ಮನ ಹೆಸರಿನಲ್ಲಿ ಪ್ರಾಧಿಕಾರವಾಗಬೇಕು ಎಂದು ಈ ಭಾಗದ ಶಾಸಕರು, ಜನಪ್ರತಿನಿಧಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೂಲಿ, ಹಿರೇಮಠ ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಪ್ರತಿ ವರ್ಷ ಆಚರಿಸುತ್ತಿರುವ ಬೆಳವಡಿ ಉತ್ಸವದ ಕಾರ್ಯಕ್ರಮ ಆಯೋಜನೆಗೆ ಬೆಳವಡಿಯಲ್ಲಿ ಜಿಲ್ಲಾಡಳಿತದಿಂದ ಸ್ಥಳ ನಿಗದಿಯಾಗಬೇಕು. ಮಹಿಳೆಯರು ಸಾಧನೆಯ ಮೂಲಕ ಬೆಳವಡಿ ಮಲ್ಲಮ್ಮ ಪ್ರಶಸ್ತಿ ಪಡೆಯುವತ್ತ ಹೆಜ್ಜೆ ಹಾಕಬೇಕು. ಬೆಳವಡಿ ಮಲ್ಲಮ್ಮ ಇತಿಹಾಸ ನಾವೆಲ್ಲರೂ ಅರಿಯಬೇಕು.
ಮಲ್ಲಮ್ಮಳ ಹೆಸರಿನ ಪ್ರಾಧಿಕಾರವಾದಲ್ಲಿ ಮಲ್ಲಮ್ಮನ ಹೆಸರು ಇನ್ನಷ್ಟು ಪ್ರಚಾರವಾಗಲಿದೆ. ಮಲ್ಲಮ್ಮಳಲ್ಲಿ ಅಸಾಮಾನ್ಯವಾದ ಪ್ರತಿಭೆಯಿತ್ತು. ಮರಾಠರ ಸೈನ್ಯದ ವಿರುದ್ಧ ಹೋರಾಡಿ ಕೆಚ್ಚೆದೆಯ ದಿಟ್ಟಗಾತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಧೈರ್ಯ ಎಂಬುದು ಮಲ್ಲಮ್ಮನ ಸ್ವಭಾವತವಾಗಿ ಬಂದ ಬಳುವಳಿ. ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದ ವಿರುದ್ಧ ಹೋರಾಡಿ ಮಹಿಳಾ ಸೈನ್ಯ ಕಟ್ಟಿದ ಮೊದಲ ಮಹಿಳೆ ಎಂಬ ಕೀರ್ತಿ ಬೆಳವಡಿ ಮಲ್ಲಮ್ಮಳದ್ದು.
ಮಲ್ಲಮ್ಮ ಹೆಸರಿನಲ್ಲಿ ಅತೀ ಶೀಘ್ರದಲ್ಲಿ ಪ್ರಾಧಿಕಾರ ರಚೆಯಾಗಬೇಕು ಎಂಬುದು ಪ್ರತಿಯೊಬ್ಬರ ಬೇಡಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಬೆಳವಡಿ ಮಲ್ಲಮ್ಮನ ಉತ್ಸವ ಇನ್ನಷ್ಟು ಬೆಳೆಯಬೇಕು ಎಂದು ಹೂಲಿ, ಹಿರೇಮಠ ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಶಸ್ತಿ ಪ್ರದಾನ
ಮಾದರಿ ಮಹಿಳಾ ರೈತ ಉದ್ಯಮಿ ಕವಿತಾ ಮಿಶ್ರಾ ಅವರಿಗೆ ವೀರರಾಣಿ ಬೆಳವಡಿ ಮಲ್ಲಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ರೀತಿಯಲ್ಲಿ ಬೆಳವಡಿ ಶೂರ ವಡ್ಡರ ಯಲ್ಲಣ್ಣ ಕುರಿತು “ನೆಲದೊಡಲ ಧ್ವನಿ ಶೂರ” ಪುಸ್ತಕ ಹಾಗೂ ಬೆಳವಡಿ ಮಲ್ಲಮ್ಮ ಕುರಿತ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಯಿತು.
ಬಳಿಕ ಪ್ರಶಸ್ತಿ ಪುರಸ್ಕೃತರಾದ ಕವಿತಾ ಮಿಶ್ರಾ ಮಾತನಾಡಿ ಬೆಳವಡಿ ಮಲ್ಲಮ್ಮ ಸಾಧನೆ, ದಿಟ್ಟತನ ಪ್ರತಿಯಬ್ಬರು ಅರಿಯಬೇಕು. ಬೆಳವಡಿ ಮಲ್ಲಮ್ಮ ಪ್ರಶಸ್ತಿ ಪಡೆದು ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂಬ ಪ್ರೇರಣೆ ಲಭಿಸಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಮಹಿಳಾ ಸಾಧಕರಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಹಣಮಂತ ಶಿರಹಟ್ಟಿ, ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ, ಬೈಲಹೊಂಗಲ ಉಪ ಅಧೀಕ್ಷಕ ರವಿ ನಾಯಕ, ಬೆಳವಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರಯ್ಯ ಕಾರಿಮನಿ, ಸಿರಸಿ ತಾಲೂಕು ಸೋಂದಾ ಗ್ರಾಮ ಪಂಚಾಯತಿ ಅಧ್ಯಕ್ಷ ಹೆಗಡೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ