ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಭಾರತೀಯ ಚರಿತ್ರೆಕಾರರು ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಹೋರಾಟವನ್ನು ದಾಖಲಿಸುವಲ್ಲಿ ನಿರ್ಲಕ್ಷಿಸಿರುವುದು ವಿಷಾದದ ಸಂಗತಿ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಿ. ಕೆ. ರವಿ ಅವರು ಅಭಿಪ್ರಾಯಪಟ್ಟರು.
ಅವರು ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಅಧ್ಯಯನ ಪೀಠಗಳು ಕುವೆಂಪು ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಕಿತ್ತೂರು ಸಂಸ್ಥಾನ: ಚರಿತ್ರೆ ಮತ್ತು ಆಕರಗಳು ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಪ್ರಥಮ ಸ್ವಾತಂತ್ರ ಸಂಗ್ರಾಮ ಕಿತ್ತೂರಿನ ವಿಮೋಚನೆಯ ಹೋರಾಟವೆ ಆಗಿತ್ತು. ಈ ವಿಷಯವನ್ನು ಚರಿತ್ರೆಯಲ್ಲಿ ದಾಖಲಿಸದೆ ಚರಿತ್ರೆಕಾರರು ಚನ್ನಮ್ಮ ಮತ್ತು ರಾಯಣ್ಣರಿಗೆ ನ್ಯಾಯ ಒದಗಿಸಿಲ್ಲ ಎನ್ನುವ ಅಂಶವು ನೋವನ್ನುಂಟು ಮಾಡುತ್ತಿದೆ. ಕಿತ್ತೂರಿನ ಹೋರಾಟವು ಭಾರತೀಯ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲಾಗಬೇಕಾಗಿತ್ತು. ಆದರೆ ಇವರ ಚರಿತ್ರೆಯು ಅಜ್ಞಾತವಾಗಿ ಉಳಿದಿದೆ ಎಂದರು.
ಕಿತ್ತೂರು ಸಂಸ್ಥಾನಕ್ಕೆ ಸೇರಿದ ಎಲ್ಲ ಕೇಂದ್ರಗಳು ರಾಷ್ಟ್ರೀಯ ಸ್ಮಾರಕಗಳಾಗಬೇಕು. ಅದಕ್ಕಾಗಿ ಸಂಗೊಳ್ಳಿ ರಾಯಣ್ಣ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುವುದು ಸ್ವಾಗತಾರ್ಹ ಸಂಗತಿ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಈ ಎರಡು ಅಧ್ಯಯನ ಪೀಠಗಳು ಉತ್ತಮವಾಗಿ ಕೆಲಸ ಮಾಡುವುದರ ಮೂಲಕ ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಕೈಜೋಡಿಸಬೇಕು. ಪರಸ್ಪರ ಪೂರಕವಾಗಿ ಕಾರ್ಯೋನ್ಮುಖವಾಗುವುದರ ಮೂಲಕ ಈ ಭಾಗದ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಅನನ್ಯತೆಯನ್ನು ಎತ್ತಿ ಹಿಡಿಬೇಕೆಂದು ಕರೆಕೊಟ್ಟರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿ ಪ್ರೊ. ರಾಮಚಂದ್ರಗೌಡ ಅವರು, ಎರಡು ಪೀಠಗಳ ಕಾರ್ಯವೈಖರಿ ತೀವ್ರಗೊಳ್ಳಬೇಕಾಗಿದೆ. ವಿಶ್ವವಿದ್ಯಾಲಯವು ಕಿತ್ತೂರು ಸಂಸ್ಥಾನವನ್ನು ಕುರಿತು ತಲಸ್ಪರ್ಶಿ ಅಧ್ಯಯನ ಯೋಜನೆಯನ್ನು ಸಿದ್ಧಪಡಿಸಿದೆ. ಪ್ರತ್ಯೇಕ ಕಟ್ಟಡ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ರಾಯಣ್ಣ ಮತ್ತು ಚನ್ನಮ್ಮರ ಹೆಸರಿನಲ್ಲಿ ಪ್ರಶಸ್ತಿ ಹಾಗೂ ವಿದ್ಯಾರ್ಥಿವೇತನಗಳನ್ನು ನೀಡಲು ವಿಶ್ವವಿದ್ಯಾಲಯವು ಯೋಜನೆಯನ್ನು ರೂಪಿಸಿಕೊಂಡಿದೆ ಎಂದು ಸಭೆಗೆ ತಿಳಿಸಿದರು.
ಅಧ್ಯಯನ ಪೀಠಗಳ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿದರು. ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್. ಪಾಟೀಲ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠದ ಸಂಯೋಜಕರಾದ ಡಾ. ಎಂ.ಎನ್.ರಮೇಶ ಅತಿಥಿಗಳನ್ನು ಪರಿಚಯಿಸಿದರು. ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಂಯೋಜಕರಾದ ಡಾ. ಶೋಭಾ ನಾಯಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ನಿವೇದಿತಾ ಪ್ರಾರ್ಥನಾಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಸಂಗೊಳ್ಳಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯತಿಯ ಸದಸ್ಯರು ಅತಿಥಿಗಳನ್ನು ಹಾಗೂ ಕುಲಪತಿಗಳನ್ನು ಸನ್ಮಾನಿಸಿದರು.
ಸಂಗೊಳ್ಳಿ ರಾಯಣ್ಣನ ವಂಶಸ್ಥರು ಹಾಗು ವಿವಿಧ ವಿಭಾಗಗಳ ಅಧ್ಯಕ್ಷರುಗಳು, ಕಾಲೇಜುಗಳ ಅಧ್ಯಾಪಕರುಗಳು, ಶಾಸ್ತ್ರಿಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ಸಂಸ್ಥೆ ವಿದ್ಯಾಥಿಗಳು ಸಭೆಯಲ್ಲಿ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ