ಪ್ರಗತಿವಾಹಿನಿ ಸುದ್ದಿ, ಗೋಕಾಕ : ಇದೇ ಮೊದಲ ಬಾರಿಗೆ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಗೋಕಾಕ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ.
ಈವರೆಗಿನ ಎಲ್ಲ ಚುನಾವಣೆ ಜೊತೆಗೆ ಅರಬಾವಿ ಕ್ಷೇತ್ರದ ಚುನಾವಣೆಯೂ ಬರುತ್ತಿದ್ದುದರಿಂದ ಮತ್ತು ಸಹೋದರ ಒಂದು ಕಡೆ, ಪಕ್ಷ ಇನ್ನೊಂದು ಕಡೆ ಇರುತ್ತಿದ್ದುದರಿಂದ ಬಾಲಚಂದ್ರ ಜಾರಕಿಹೊಳಿ ಗೋಕಾಕ ಕ್ಷೇತ್ರದಲ್ಲಿ ಅಷ್ಟಾಗಿ ಪಾಲ್ಗೊಳ್ಳುತ್ತಿರಲಿಲ್ಲ.
ಆದರೆ ಈ ಬಾರಿ ಸಹೋದ ರಮೇಶ ಜಾರಕಿಹೊಳಿ ಬಿಜೆಪಿ ಸೇರಿದ್ದರಿಂದ ಬಾಲಚಂದ್ರ ಚುನಾವಣೆ ಪ್ರಚಾರದ ಆಖಾಡದಲ್ಲಿ ನೇರವಾಗಿ ಧುಮುಕಿದ್ದಾರೆ. ಒಂದಾದ ಮೇಲೆ ಒಂದು ಸಭೆ ನಡೆಸುತ್ತಿದ್ದಾರೆ.
ಇಂದು ಬೆಳಗ್ಗೆ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೆ. ಅರುಣಕುಮಾರ ಅವರು ಎನ್.ಎಸ್.ಎಫ್. ಅತಿಥಿ ಗೃಹದಲ್ಲಿ ಚುನಾವಣಾ ನಿರ್ವಹಣಾ ಸಮೀತಿಯ ಸಭೆಯನ್ನು ನಡೆಸಿದರು. ಗೋಕಾಕ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಗೆಲುವಿನ ರಣತಂತ್ರ ಹೆಣೆಯುವ ಸಂಬಂಧ ಮುಖಂಡರೊಂದಿಗೆ ಗೌಪ್ಯ ಸಭೆ ನಡೆಸಿದರು.
ಹಿರಿಯ ಶಾಸಕ ಹಾಗೂ ಮಾಜಿ ಸಚಿವರಾದ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಎ.ಎಸ್. ಪಾಟೀಲ(ನಡಹಳ್ಳಿ), ಅಭಯ ಪಾಟೀಲ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಮೂದಲಿಸುವವರಿಗೆ ಉತ್ತರಿಸಿ
ನಂತರ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೆ. ಅರುಣಕುಮಾರ, ರಾಜ್ಯದಲ್ಲಿ ಸ್ಥಿರ ಹಾಗೂ ಪಾರದರ್ಶಕ ಆಡಳಿತ ನಡೆಸಲು ಬಿಜೆಪಿ ಸರ್ಕಾರ ರಚನೆಗೆ ಪದತ್ಯಾಗ ಮಾಡಿರುವ ರಮೇಶ ಜಾರಕಿಹೊಳಿ ಅವರನ್ನು ಅನರ್ಹರೆಂದು ಮೂದಲಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಲು ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಜೆಡಿಎಸ್-ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಉತ್ತರ ನೀಡುವಂತೆ ಕೋರಿದರು.
ರಮೇಶ ಜಾರಕಿಹೊಳಿ ಅವರ ಸಂಘಟನಾ ಪಡೆ ಮತ್ತು ಬಿಜೆಪಿ ಕಾರ್ಯಕರ್ತರ ಪಡೆಗಳು ಕೂಡಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಲು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕಳೆದ ೨೦ ವರ್ಷಗಳಿಂದ ತಮ್ಮದೇ ಆದ ಕಾರ್ಯಪಡೆಯನ್ನು ಹೊಂದಿರುವ ರಮೇಶ ಅವರು ತಮ್ಮ ಸ್ವಾಭಿಮಾನದಿಂದ ಇಡೀ ರಾಜ್ಯದ ಮನ ಗೆದ್ದಿದ್ದಾರೆ. ಕಟ್ಟಾ ಕಾಂಗ್ರೇಸ್ಸಿಗರಾಗಿದ್ದ ಅವರು, ಮೈತ್ರಿ ಸರ್ಕಾರದ ಭ್ರಷ್ಠ ಆಡಳಿತಕ್ಕೆ ಬೇಸತ್ತು ಬಿ.ಎಸ್. ಯಡಿಯೂರಪ್ಪ ಅವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಲಿಕ್ಕೆ ಜೊತೆಗೆ ರಾಜ್ಯದಲ್ಲಿ ಅಸ್ಥಿರತೆಯನ್ನು ಹೋಗಲಾಡಿಸಲು ಬಿಜೆಪಿ ಸರ್ಕಾರ ರಚನೆಗೆ ಮೂಲ ಕಾರಣೀಕರ್ತರಾಗಿದ್ದಾರೆ.
ಪ್ರತಿ ಮತಗಟ್ಟೆ ಹಂತದಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಅಸಾಧ್ಯವಾಗದ ರೀತಿಯಲ್ಲಿ ಅವರನ್ನು ಗೆಲ್ಲಿಸುವ ಮೂಲಕ ಗೋಕಾಕ ಮತಕ್ಷೇತ್ರದಲ್ಲಿ ಬಿಜೆಪಿ ಶಾಶ್ವತ ಅಧಿಕಾರ ಹಿಡಿಯಲು ಭದ್ರ ಬುನಾದಿ ಹಾಕುವಂತೆ ಕಾರ್ಯಕರ್ತರಿಗೆ ಹೇಳಿದರು.
ಇಡೀ ರಾಜ್ಯವೇ ಗೋಕಾಕದತ್ತ ಕೇಂದ್ರೀಕೃತವಾಗಿದೆ. ಈ ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸೋಣ. ರಮೇಶ ಜಾರಕಿಹೊಳಿ ಅವರ ವೈಯಕ್ತಿಕ ಪ್ರಭಾವ ಮತ್ತು ಕೇಂದ್ರ ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಕ್ಷೇತ್ರದಲ್ಲಿರುವ ಎಲ್ಲ ೨.೪೨ ಲಕ್ಷ ಮತದಾರರನ್ನು ಸಂಪರ್ಕ ಸಾಧಿಸಿ ಅವರನ್ನು ಕಮಲ ಚಿಹ್ನೆಯತ್ತ ವಾಲಿಸಲು ಕೆಲಸ ನಿರ್ವಹಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಡಿ.೫ ರಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಲ್ಲ ೧೫ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿಯಾಗಿ ಜಯ ದಾಖಲಿಸಲಿದೆ. ಬಾಕಿ ಉಳಿದಿರುವ ಮೂರುವರೆ ವರ್ಷ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಮತಗಟ್ಟೆ ಮೂಲಕ ಕಾರ್ಯಕರ್ತರು ಅಚ್ಚುಕಟ್ಟಾಗಿ ಕೆಲಸ ಮಾಡಿದರೆ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಕನಿಷ್ಠ ೫೦ ಸಾವಿರ ಮತಗಳ ಮುನ್ನಡೆಯೊಂದಿಗೆ ಜಯ ಸಾಧಿಸುತ್ತಾರೆ. ಈಗಾಗಲೇ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಪಡೆಯನ್ನು ರಚಿಸಲಾಗಿದೆ ಎಂದು ಹೇಳಿದರು.
ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪಾದ ಕಳ್ಳಿ, ಘೂಳಪ್ಪ ಹೊಸಮನಿ, ಧನಂಜಯ ಜಾಧವ, ರವಿ ಹಿರೇಮಠ, ಗೋಕಾಕ ನಗರ ಬಿಜೆಪಿ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಗೋಕಾಕ ಗ್ರಾಮೀಣ ಅಧ್ಯಕ್ಷ ವಿರುಪಾಕ್ಷಿ ಯಲಿಗಾರ, ನಾಗಲಿಂಗ ಪೋತದಾರ, ಸುರೇಶ ಪಾಟೀಲ, ಜಿ.ಎಸ್. ರಜಪೂತ, ಲಕ್ಕಪ್ಪ ತಹಶೀಲ್ದಾರ, ಗೋವಿಂದ ಕೊಪ್ಪದ, ಸುರೇಶ ಕಾಡದವರ, ಮಹಾಂತೇಶ ತಾಂವಶಿ, ಬಸು ಹಿರೇಮಠ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ