ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಬೆಳೆಯುತ್ತಿರುವ ಈ ಯುಗದಲ್ಲಿ, ತಂತ್ರಜ್ಞಾನ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ಸಮಾಜಕ್ಕೆ ತಿಳಿಸುವುದು ಎಂಜಿನಿಯರಿಂಗ್ ಪದವೀಧರರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ವಿ ಜಿ ಎಸ್ ಟಿ ಸಲಹಗಾರರಾದ ಡಾ. ಶ್ರೀಕಂಠೇಶ್ವರಸ್ವಾಮಿ ಹೇಳಿದರು.
ಭಾನುವಾರ ಬೆಳಗಾವಿಯ ಕೆಎಲ್‌ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಅಭಿನಂದಿಸಿದ ಅವರು, ಬಿ.ಇ. ಮುಗಿಸಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರಿಂಗ್ ಪದವೀಧರರು ಅವರು ಕಲಿತಂತ ಸಂಸ್ಥೆಗಳನ್ನ ಮರಿಯದೆ ಸಂಸ್ಥೆಗಳ ಬ್ರಾಂಡ್ ಅಂಬಾಸಿಡರ್ ಆಗಬೇಕು ಮತ್ತು ಅವರು ಆಯಾ ಕ್ಷೇತ್ರದಲ್ಲಿ ಆಗುವ ಯಾವುದೇ ಹೊಸ ತಂತ್ರಜ್ಞಾನ ಅಥವಾ ಬೆಳವಣಿಗೆಗಳನ್ನು ಸಂಸ್ಥೆಯ ಜೊತೆ ಹಂಚಿಕೊಳ್ಳಬೇಕು ಎಂದು ಅವರು ಹೇಳಿದರು.
ಇದರಿಂದಾಗಿ ಪಠ್ಯಕ್ರಮದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತಂದು ಅದನ್ನು ಅನುಷ್ಠಾನಗೊಳಿಸುವುದರಿಂದ ಮುಂದಿನ ಪದವೀಧರರಿಗೆ ಸಹಾಯವಾಗುತ್ತದೆ ಎಂದು ಹೇಳಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುವ ಜಿ ಐ ಟಿ ಸಂಪ್ರದಾಯವನ್ನು ಅವರು ಶ್ಲಾಘಿಸಿದರು ಮತ್ತು ಸಂಸ್ಥೆಗಳಿಂದ ಈ ರೀತಿಯ ಮಾನ್ಯತೆ ನಿಜವಾಗಿಯೂ ವಿದ್ಯಾರ್ಥಿಗಳಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಹೆಚ್ಚು ಸಾಧಿಸಲು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಯಶಸ್ಸಿನಲ್ಲಿ ನಿರಂತರತೆಯನ್ನು ಸಾಧಿಸಲು ಈ ರೀತಿಯ ಮಾನ್ಯತೆಗಳು ಮತ್ತು ಮೆಚ್ಚುಗೆಗಳು ಅವರ ಸಂಸ್ಥೆಗಳಿಂದ ನಡೆಯಬೇಕು. ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತ ಸಂಶೋಧನಾ ಕ್ಷೇತ್ರದಲ್ಲಿ ಯುವ ತಂತ್ರಜ್ಞರಿಗೆ ಲಭ್ಯವಿರುವ ಅವಕಾಶಗಳನ್ನು ವಿವರಿಸಿದರು.
ನಾವೀನ್ಯತೆಯ ಬಗ್ಗೆ ಮಾತನಾಡುತ್ತಾ ಅವರು ನಿಮ್ಮ ಹೊಸ ಆಲೋಚನೆಗಳನ್ನು ಹಾಗೂ ಸಂಶೋಧನೆಗಳನ್ನು ನೋಂದಾಯಿಸಿಕೊಳ್ಳುವುದು, ಅಂದರೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಐಪಿಆರ್) ರಕ್ಷಿಸುವುದು ಬಹಳ ಮುಖ್ಯ ಏಕೆಂದರೆ ಅದು ದೇಶದ ಆರ್ಥಿಕತೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂದು ಹೇಳಿದರು.
ಈ ಸಮಾರಂಭದಲ್ಲಿ ಒಟ್ಟು ೧೨೨ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಅದರಲ್ಲಿ ವಿ ಟಿ ಯು ರ್ಯಾಂಕ್ ವಿಜೇತರು ಮತ್ತು ಪ್ರತಿವರ್ಷದ ಪರೀಕ್ಷೆಯಲ್ಲಿ ಶ್ರೇಣಿ ಪಡೆದ ವಿದ್ಯಾರ್ಥಿಗಳಿದ್ದರು. ಇದಲ್ಲದೆ ದಾನಿಗಳು, ಶಿಕ್ಷಣ ತಜ್ಞರು ಮತ್ತು ಹಳೆಯ ವಿದ್ಯಾರ್ಥಿಗಳು ಇಟ್ಟ ದತ್ತಿ ನಿಧಿಯ ಪ್ರಶಸ್ತಿಗಳನ್ನು ನೀಡಲಾಯಿತು.
ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷ ಯು. ಏನ್. ಕಾಲಕುಂದ್ರಿಕರ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಂಶುಪಾಲರಾದ ಪ್ರೊ. ಡಿ. ಎ. ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಬಲವಂತ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ. ಡಿ. ಆರ್. ಜೋಶಿ ವಂದಿಸಿದರು. ಪ್ರೊ. ರಶ್ಮಿ ಅಡೂರ್ ಹಾಗೂ ಪ್ರೊ. ಜಾಹ್ನವಿ ಕಾರೇಕರ್ ನಿರೂಪಿಸಿದರು. ಈ ಕಾರ್ಯಕ್ರಮವನ್ನು ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗ ಸಂಯೋಜಿಸಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ