Kannada NewsKarnataka News

ಸುತ್ತೂರು ಶ್ರೀಗಳ ಕಾರ್ಯ ಇಡೀ ದೇಶಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್; ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸಚಿವರ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಸುತ್ತೂರು (ಮೈಸೂರು): ಕಪಿಲಾ ನದಿ ದಂಡೆಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳು ಸ್ಥಾಪಿಸಿರುವ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಕಾರ್ಯ ಇಡೀ ದೇಶಕ್ಕೆ ಮಾದರಿ. ಅಣ್ಣ ಬಸವಣ್ಣನವರ ಆಶಯಗಳಿಗೆ ತಕ್ಕಂತೆ ಮಠ ಕಾರ್ಯನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಸಚಿವರು, ಹತ್ತೂರ ಜಾತ್ರೆಗಿಂತ ಸುತ್ತೂರು ಜಾತ್ರೆ ಚೆಂದ ಎನ್ನುತ್ತಾರೆ. ಸುತ್ತೂರು ಜಾತ್ರೆಯನ್ನು ಒಂದು ಸುತ್ತು ಹೊಡೆದರೆ ಗೊತ್ತಾಗುತ್ತದೆ ಇದರ ವೈಭವ ಎಂದು ವರ್ಣಿಸಿದರು‌.

ಸುತ್ತೂರು ಜಾತ್ರೆಯನ್ನು ಅರಿವಿನ ಜಾತ್ರೆ ಎಂದೂ ಕರೆಯುತ್ತಾರೆ, ಶಿಕ್ಷಣದ ಜೊತೆಗೆ ಜಾಗೃತಿ ಮೂಡಿಸುವ ಅಪರೂಪದ ಜಾತ್ರೆ ಇದು. ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯವೇ ಸರಿ ಎಂದರು.

ಕೋಮು ಸೌಹಾರ್ದತೆ ಕಾಪಾಡಿಕೊಂಡು ಜಾತಿ-ಧರ್ಮ ಎಂದು ಲೆಕ್ಕಿಸದೆ ಸಾಮಾಜಿಕ ಕಾರ್ಯಗಳ ಮೂಲಕ ಇಡೀ ದೇಶಕ್ಕೆ ಮಾದರಿ ಮಠವಾಗಿ ಬೆಳೆದಿದೆ ನಮ್ಮ ಸುತ್ತೂರು ಮಠ ಎಂದು ಸಚಿವರು ಹೇಳಿದರು.

ಕೇವಲ ಜಾತ್ರೆಯಾಗಿರದೆ ಇದೊಂದು ಪರಂಪರೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕ್ಕತಿಕ ಮಹೋತ್ಸವಗಳ ಸಂಗಮದೊಂದಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಕಲೆಗಳ ಪ್ರದರ್ಶನ ಎಂದರೆ ತಪ್ಪಾಗಲಾರದು. ದಿನಕ್ಕೊಂದು ವಿಶೇಷತೆಯಿಂದ ಕೂಡಿರುವ ಈ ಜಾತ್ರೆಗೆ ಬರುವ ಕೋಟ್ಯಂತರ ಭಕ್ತರಿಗಾಗಿ ಮೂರು ಹೊತ್ತು ದಾಸೋಹ ವ್ಯವಸ್ಥೆಯನ್ನು ಏರ್ಪಡಿಸುವ ಮೂಲಕ ಸುತ್ತೂರು ಮಠ ಎಲ್ಲರಿಗೂ ಮಾದರಿಯಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಧಾರ್ಮಿಕ, ಸಾಮಾಜಿಕ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುತ್ತೂರು ಮಠ ದೇಶವೇ ಗುರುತಿಸುವ ಕೆಲಸ ಮಾಡಿದೆ. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸವನ್ನು ಶ್ರೀಮಠ ಮಾಡಿದೆ ಎಂದು ತಿಳಿಸಿದರು.

ಸುತ್ತೂರು ಶ್ರೀಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡಿದ್ದಾರೆ ಎಂದು ಶ್ರೀ ಮಠದ ಕಾರ್ಯವನ್ನು ಶ್ಲಾಘಿಸಿದರು.

ಸುತ್ತೂರು ಶ್ರೀಗಳೇ ನನಗೆ ಆದರ್ಶ:
ಸುತ್ತೂರು ಸ್ವಾಮೀಜಿಯವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಇದು ನಿರಂತರವಾಗಿ ಸಾಗಲಿ ಎಂದು ಆಶಿಸುತ್ತೇನೆ. ಸ್ವಾಮೀಜಿಗಳು ನನ್ನಂತಹ ಅದೆಷ್ಟೋ ರಾಜಕಾರಣಿಗಳಿಗೆ, ಆಡಳಿತಗಾರರಿಗೆ ಸದಾ ಮಾರ್ಗದರ್ಶಕರಾಗಿದ್ದಾರೆ ಎಂದು ಸಚಿವರು ಹೇಳಿದರು.

ನಮಗೆ ಮನಸ್ಸಿನಲ್ಲಿ ದುಗುಡ ಉಂಟಾದರೆ, ಏನೋ ಗೊಂದಲ ಉಂಟಾದರೆ ನಾವು ಸ್ವಾಮೀಜಿಗಳನ್ನು ನೆನಪಿಸಿಕೊಂಡರೆ, ಸುತ್ತೂರಿನ ಪುಣ್ಯ ನೆಲವನ್ನು ಸ್ಮರಿಸಿಕೊಂಡರೆ, ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಏನೋ ನೆಮ್ಮದಿಯೆನಿಸುತ್ತದೆ. ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವಾಗಲೂ ಸುತ್ತೂರು ಶ್ರೀಗಳ ಸಲಹೆ ಪಡೆದಿದ್ದೆ. ಸ್ವಾಮೀಜಿಗಳ ಆಶಿರ್ವಾದ ನಮ್ಮ ಮೇಲೆ, ನಮ್ಮ ಸರಕಾರದ ಮೇಲಿರಲಿ, ನಾಡಿನ ಸಮಸ್ತ ಜನರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಗೃಹಲಕ್ಷ್ಮಿ ಯೋಜನೆಯಿಂದ ಬಲ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಿಂದ ನಮ್ಮ ಮಹಿಳೆಯರ ಆರ್ಥಿಕ ಸಬಲೀಕರಣ ಆಗುತ್ತಿದೆ. ಈ ಯೋಜನೆಯನ್ನು ಜಾರಿಗೆ ತರುವ ಮಹತ್ವದ ಜವಾಬ್ದಾರಿಯನ್ನು ಸರ್ಕಾರ ನನಗೆ ನೀಡಿತ್ತು. ಈ ಯೋಜನೆ ಈಗ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನ್ನಿಧ್ಯ‌ ವಹಿಸಿದ್ದರು. ವಾಟಾಳ್ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ತರಳಬಾಳು ಮಠದ ಡಾ.ಶಿವಮೂರ್ತಿ ಸ್ವಾಮೀಜಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ದರ್ಶನ್, ಮಾಜಿ ಸಚಿವ ಸಿ.ಟಿ ರವಿ, ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button