*ಯುವ ಪೀಳಿಗೆ ರಾಯಣ್ಣನ ದೇಶಾಭಿಮಾನ ಬೆಳಸಿಕೊಳ್ಳಬೇಕು: ಶಾಸಕ ಮಹಾಂತೇಶ ಕೌಜಲಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕೀರ್ತಿ ಇಡೀ ದೇಶಕ್ಕೆ ಚಿರಪರಿಚಿತವಾಗಿದೆ. ಯುವ ಪೀಳಿಗೆ ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸಂಗೊಳ್ಳಿ ರಾಯಣ್ಣನ ಹೋರಾಟ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂದಿನ ಪೀಳಿಗೆ ಶೂರ ಸಂಗೊಳ್ಳಿ ರಾಯಣ್ಣ ದೇಶ ಪ್ರೇಮ ಬೆಳಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ (ಜ.12) ಸಂಗೊಳ್ಳಿ ಶಾಲಾ ಆವರಣದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ -2026 ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಗೊಳ್ಳಿಯಲ್ಲಿ ಈಗಾಗಲೇ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಲಾಗಿದೆ. ದೇಶ್ಯಾದಂತ್ಯ ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯದಿಂದ ಶಾಲೆಗೆ ಪ್ರವೇಶ ಪಡೆಯುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅವರ ಹೆಸರು ಪರಿಚಯಿಸಲಾಗಿದೆ ಎಂದು ಹೇಳಿದರು.
ಸಂಗೊಳ್ಳಿಯ ರಾಕ್ ಗಾರ್ಡನ್ ವೀಕ್ಷಣೆಗೆ ಪ್ರತಿದಿನ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ನೋಡುಗರು ಬರುತ್ತಿದ್ದಾರೆ. ರಾಯಣ್ಣ ಜೀವನ ಚರಿತ್ರೆ ಪರಿಚಯಿಸುತ್ತಿರುವುದು ಇದರ ಮೂಲ ಉದ್ದೇಶ. ಮುಂಬರುವ ದಿನಗಳಲ್ಲಿ ಸಂಗೊಳ್ಳಿಯಲ್ಲಿ ಮ್ಯೂಸಿಕಲ್ ಮೌಂಟ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.
ಬೆಳಗಾವಿ ಜಿಲ್ಲೆ ಉತ್ಸವಗಳ ನಾಡು. ದೇಶಕ್ಕೆ ಹೋರಾಡಿದ ಮಹನೀಯರ ಪರಿಚಯ ಯುವ ಪೀಳಿಗೆಗೆ ಸಾರುವುದು ಉತ್ಸವಗಳ ಆಚರಿಸುವ ಉದ್ದೇಶವಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಮಾನ ಹೋರಾಟಗಾರರಾದ ರಾಯಣ್ಣ, ರಾಣಿ ಚನ್ನಮ್ಮನಂತಹ ಮಹನೀಯರ ದೇಶಪ್ರೇಮ ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು ಎಂದು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ತಿಳಿಸಿದರು.
ಜಿಲ್ಲಾ ಪಂಚಾಯಿತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ಸಂಗೊಳ್ಳಿ ರಾಯಣ್ಣ ಉತ್ಸವ ರಾಜ್ಯ ಸರ್ಕಾರ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸುತ್ತಿದೆ. ನಂದಗಡನಲ್ಲಿ ವೀರಭೂಮಿ ಸಂಗೊಳ್ಳಿ ರಾಯಣ್ಣ ಅವರ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡಲಾಗಿದೆ. ಮುಂದಿನ ಪೀಳಿಗೆಗೆ ರಾಯಣ್ಣನ ದಿಟ್ಟತನ, ದೇಶ ಪ್ರೇಮ ತಿಳಿಸುವ ನಿಟ್ಟಿನಲ್ಲಿ ವೀರಭೂಮಿ ಮ್ಯೂಸಿಯಂ, ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಸಂಗೊಳ್ಳಿಯ ಶ್ರೀ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮ.ನಿ.ಪ್ರ.ಸ್ವ.ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರವೀಣ ಜೈನ, ಪೊಲೀಸ್ ಉಪ ಅಧೀಕ್ಷಕಾರದ ವೀರಯ್ಯ ಹಿರೇಮಠ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ ಚಚಡಿ, ಬೈಲಹೊಂಗಲ ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಕಿತ್ತೂರು ತಹಶೀಲ್ದಾರ್ ಕಲ್ಲನಗೌಡ ಪಾಟೀಲ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.



