Belagavi NewsBelgaum NewsFilm & EntertainmentKannada NewsKarnataka NewsLatest

*ರಂಗಭೂಮಿ ಮೂಲಕ ಸಮಾಜಕ್ಕೆ ಇಂಜಕ್ಷನ್ ಕೊಡಬೇಕಾದ ಅನಿವಾರ್ಯತೆ ಇದೆ : ಶಶಿಧರ ನರೇಂದ್ರ* *ರಂಗಸೃಷ್ಟಿಯ ರಂಗಭೂಮಿ ದಿನಾಚರಣೆ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದರೂ ದೌರ್ಜನ್ಯ, ಕ್ರೌರ್ಯ ಹೆಚ್ಚಾಗುತ್ತಿದೆ. ಯಾರನ್ನೂ ಆದರ್ಶ ಎಂದು ಪರಿಗಣಿಸುವ ಸ್ಥಿತಿ ಇಲ್ಲ. ಇಂತಹ ಸಂದರ್ಭದಲ್ಲಿ ರಂಗಭೂಮಿ ಮೂಲಕ ಸಮಾಜಕ್ಕೆ ಇಂಜಕ್ಷನ್ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ರಂಗಕರ್ಮಿ, ಸಾಹಿತಿ ಡಾ. ಶಶಿಧರ ನರೇಂದ್ರ ಹೇಳಿದ್ದಾರೆ.

ಬೆಳಗಾವಿಯಲ್ಲಿ ಗುರುವಾರ ಸಂಜೆ ರಂಗಸೃಷ್ಟಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ನಂತರ ಕಳೆದು ಹೋದ ಮೌಲ್ಯಗಳನ್ನು ಹುಡುಕುವ ಅನಿವಾರ್ಯತೆ ಇದೆ. ರಂಗಭೂಮಿ ಯಾವುದನ್ನು ಪ್ರತಿನಿಧಿಸಬೇಕು ಎನ್ನುವ ಗೊಂದಲವಿದೆ. ಎಲ್ಲಿ ಆಶಾಭಾವನೆ ಇಟ್ಟುಕೊಳ್ಳಬೇಕು ಎಂದು ಗೊತ್ತಾಗುತ್ತಿಲ್ಲ. ಮುಂಬಯಿ ಬಾಂಬ್ ಸ್ಫೋಟದ ಆರೋಪಿಯನ್ನು ಇಷ್ಟು ವರ್ಷದ ನಂತರ ಭಾರತಕ್ಕೆ ತರುತ್ತಿದ್ದೇವೆ. ಭಾರತದಲ್ಲಿ  ಅದ್ಭುತ ಮಾನವ ಶಕ್ತಿ ಇದ್ದರೂ ಸಂಕಲ್ಪ ಶಕ್ತಿ ಸೋಲುತ್ತಿದೆ ಎಂದು ಅವರು ಹೇಳಿದರು.

 ಸುಶಿಕ್ಷಿತರ ಸಂಖ್ಯೆ ಏರುತ್ತಿದ್ದರೂ ಶೋಷಣೆ, ಕ್ರೌರ್ಯ ಹೆಚ್ಚಾಗುತ್ತಿದೆ. ಆ ದೃಷ್ಟಿಯಿಂದ ಅಶಿಕ್ಷಿತರೇ ಉತ್ತಮ ಎನ್ನುವ ಸ್ಥಿತಿ ಬಂದಿದೆ. ಅವರು ದೇವರಿಗಾದರೂ ಹೆದರುತ್ತಿದ್ದರು. ಸುಶಿಕ್ಷಿತ ವಲಯದಲ್ಲೇ ಮುಗ್ದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ. ವ್ಯಕ್ತಿಗತ ನಿಯಂತ್ರಣ ಹಾಕಿಕೊಳ್ಳದಿದ್ದರೆ ಒಬ್ಬೊಬ್ಬರಿಗೆ 10 ಪೊಲೀಸರಿದ್ದರೂ ಏನೂ ಮಾಡಲು ಸಾಧ್ಯವಿಲ್ಲ. ಮಠಾಧೀಶರು ಮತ್ತು ದೊಡ್ಡ ಸ್ಥಾನದಲ್ಲಿರುವ ಯಾರನ್ನೂ ಆದರ್ಶ ಎಂದುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಸಮಾಜಕ್ಕೆ ರಂಗಭೂಮಿ ಮೂಲಕ ಇಂಜಕ್ಷನ್ ಕೊಡಬೇಕಾದ ಅನಿವಾರ್ಯತೆ ಇದೆ. ಉತ್ತಮ ಸಮಾಜ ನಿರ್ಮಾಣಕ್ಕೆ ರಂಗಭೂಮಿ ಕಾರಣವಾಗಲಿ ಎಂದು ಅವರು ಹೇಳಿದರು. 

ಶಿರೀಶ್ ಜೋಶಿ ಅವರ ಪ್ರಿಂಟಿಂಗ್ ಮಶಿನ್ ಮತ್ತು ಮೀ ಟೂ ನಾಟಕಗಳ ಗ್ರಂಥ ಬಿಡುಗಡೆ ಮಾಡಿದ ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಮಾತನಾಡಿ, ಸಾಹಿತ್ಯ ಯಾರ ಸ್ವತ್ತೂ ಅಲ್ಲ, ಅದು ಎಲ್ಲರ ಆಸ್ತಿ. ತಂಡವನ್ನು ಕಟ್ಡಿ ಮುನ್ನಡೆಸುವುದು ಸುಲಭವಲ್ಲ. ಶಿರೀಶ್ ಜೋಶಿ ನಿವೃತ್ತಿಯ ನಂತರ ಇನ್ನಷ್ಟು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ರಂಗಸೃಷ್ಟಿ ಅತ್ಯಂತ ಕ್ರಿಯಾಶೀಲ ಸಂಘಟನೆ. ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.​ಇಂದು ಮೊಬೈಲ್ ನಮ್ಮ ಕ್ರಿಯಾಶೀಲತೆಯನ್ನು ತಿಂದು ಹಾಕುತ್ತಿದೆ. 

Home add -Advt

ಮೊಬೈಲ್ ಬದಿಗಿಟ್ಟು ಸಾಂಸ್ಕೃತಿಕ ಕೆಲಸದಲ್ಲಿ ತೊಡಗಿಕೊಳ್ಳುವುದು ಅಗತ್ಯವಾಗಿದೆ ಎಂದೂ ಅವರು ಹೇಳಿದರು.

​ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಅಧ್ಯಯನ ಪೀಠದ ಸಂಯೋಜಕ ಡಾ.ಎಚ್.ಬಿ. ನೀಲಗುಂದ ಮಾತನಾಡಿ, ನಾಟಕಗಳು​ ಇತಿಹಾಸ ತಿರುಚುವ ಕೆಲಸ ಮಾ​ಡ​ದೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊ​ಡುವ ಮೂಲಕ ಪರಂಪರೆ ಕಟ್ಟುವ ಕೆಲಸ ಮಾಡಬೇಕು. ಪೂರ್ವಾಗ್ರಹಪೀಡತವಾಗದೆ ಸ್ವಾರ್ಥರಹಿತವಾಗಿ ಸಮಾಜದಲ್ಲಿ ಆನಂದಪರ ವಾತಾವರಣ ಸೃಷ್ಟಿಯಾಗುವಂತೆ ನೋಡಿಕೊಳ್ಳಬೇಕು ಎಂದರು.


​ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್, ಪುಸ್ತಕೋದ್ಯಮಕ್ಕೆ ಸಹಾಯ ಮಾಡುವ ಕೆಲಸವನ್ನು ಸರಕಾರ ಮಾಡಬೇಕು. 2021ರಿಂದ ಪುಸ್ತಕ ಖರೀದಿ ಆಗಿಲ್ಲ. ಕೇರಳ​ ಮತ್ತು ತಮಿಳುನಾಡುಗಳಲ್ಲಿ​ ಪ್ರತಿ ಲೇಖಕರ ತಲಾ 500 ಪುಸ್ತಕ ಖರೀದಿಸಲಾಗುತ್ತಿದೆ​. ಕರ್ನಾಟಕದಲ್ಲೂ ಅದೇ ರೀತಿಯಾಗಬೇಕು ಎಂದರು. 

​ರಂಗಸೃಷ್ಟಿಯ ಈ ವರ್ಷದ ರಂಗಗೌರವವನ್ನು ಹಿರಿಯ ರಂಗಕರ್ಮಿ ​ಶಂಕರ ಅರಕೇರಿ ಅವರಿಗೆ ನೀಡಿ ಸನ್ಮಾನಿಸಲಾಯಿತು.  ತಮ್ಮನ್ನು ಗುರುತಿಸಿ ರಂಗಗೌರವ ನೀಡಿದ್ದಕ್ಕಾಗಿ ರಂಗಸೃಷ್ಟಿ ಬಳಗಕ್ಕೆ ಧನ್ಯವಾದ ಸಲ್ಲಿಸಿದರು. 

​​ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್ ಅಧ್ಯಕ್ಷೀಯ ನುಡಿಗಳನ್ನಾಡಿ, ರಂಗಸೃಷ್ಟಿಯ ಕಾರ್ಯಚಟುವಟಿಕಗಳ ಕುರಿತು ವಿವರಿಸಿದರು.​ ಶಿರೀಶ್ ಜೋಶಿ​ ಎಲ್ಲರ ಸಹಕಾರವನ್ನು ಸ್ಮರಿಸಿದರು. ಸುಭಾಷ ಏಣಗಿ ಅವರಿಗೆ ಕೃತಿ ಅರ್ಪಣೆ ಮಾಡಿ ಸನ್ಮಾನಿಸಲಾಯಿತು. ಇದೇ ವೇಳೆ ರಂಗಸೃಷ್ಟಿಯ ವಿವಿಧ ನಾಟಕಗಳಲ್ಲಿ ಅಭಿನಯಿಸಿದ ಕಲಾವಿದರಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. 

​ಮಂಜುಳಾ ಜೋಶಿ ಪ್ರರ್ಥನೆ ಹಾಡಿದರು. ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ.ಹೆಗಡೆ ಸ್ವಾಗತಿಸಿದರು.​ ಡಾ.ರಾಮಕೃಷ್ಣ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಪಿ.ಜಿ.ಕೆಂಪಣ್ಣವರ್ ಅತಿಥಿಗಳನ್ನು ಪರಿಚಯಿಸಿದರು. ಜಯಶ್ರೀ ಕೆಎಂ ರಂಗಭೂಮಿ ಸಂದೇಶ ವಾಚಿಸಿದರು. ಶರಣಯ್ಯ ಮಠಪತಿ ಮತ್ತು ಶೃದ್ಧಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ​ಶರಣಗೌಡ ಪಾಟೀಲ ವಂದಿಸಿದರು. 

Related Articles

Back to top button