*ರಾಜ್ಯ ಸರ್ಕಾರದಲ್ಲಿ ಅಲ್ಟ್ರಾ ಲೆಪ್ಟಿಸ್ಟ್ ಗಳಿದ್ದಾರೆ: ಕೇಂದ್ರ ಸಚಿವ ಪ್ರಲ್ಲಾದ ಜೋಶಿ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣ ಮುಂದೆ ಇಟ್ಟುಕೊಂಡು ಹಿಂದೂತ್ವದ ಭಾವನೆಗೆ ದಕ್ಕೆ ತರುವ ಷಡ್ಯಂತ್ರವನ್ನು ಕೆಲವರು ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡುತ್ತಿದೆ. ರಾಜ್ಯ ಸರ್ಕಾರದಲ್ಲಿ ಅಲ್ಟ್ರಾ ಲೆಪ್ಟಿಸ್ಟ್ ಜನರಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರ ಭಾವನೆಗೆ ಹಿಂದೂತ್ವದ ಅಸ್ಮಿತೆಗೆ ದಕ್ಕೆ ತರುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ಜನರು ಬೀದಿಗಿಳಿದು ದಂಗೆ ಎದ್ದಾಗ ಮಾತ್ರವೇ ರಾಜ್ಯ ಸರ್ಕಾರಕ್ಕೆ ಅರಿವಾಗುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿಕಾರಿದರು.
ಹಿಂದೂ ಸಮಾಜಕ್ಕೆ ಸುಣ್ಣ ಹಾಗೂ ಬೇರೆ ಸಮಾಜಕ್ಕೆ ಬೆಣ್ಣೆ ಹಚ್ಚುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ.ಡಿ. ಕೆ ಶಿವಕುಮಾರ್ ಅವರೇ ಷಡ್ಯಂತ್ರ ನಡೆದಿದೆ ಅಂತ ಹೇಳಿದ್ದಾರೆ ಅಂದರೇ ಉಪಮುಖ್ಯಮಂತ್ರಿ ಆಗಿ ಏನು ಕೂಡ ಮಾಡಲು ಆಗುತ್ತಿಲ್ಲ ಅಂದರೇ ನಿಜಕ್ಕೂ ಇದೊಂದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹರಿಹಾಯ್ದರು.
ಸರ್ಕಾರ ಕೂಡಲೇ ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಬೇಕು. ಅನಾಮಿಕ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ತಲೆ ಬುರುಡೆ ಹಿಡಿದುಕೊಂಡು ಬಂದವನನ್ನು ಬಂಧಿಸದೇ ಪೊಲೀಸ್ ಪ್ರೊಟೆಕ್ಷನ್ ಕೊಟ್ಟಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, 13 ಸ್ಥಳಗಳಲ್ಲಿ ಏನು ಸಿಕ್ಕಿಲ್ಲ ಅಂದರೂ ಬಾಹುಬಲಿ ಮೂರ್ತಿ ಬಳಿಯಲ್ಲಿ ಅಗೆಯಲು ಹೇಳಿರುವುದು ನಿಜಕ್ಕೂ ಷಡ್ಯಂತ್ರವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದರು.