ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಮಂಗಳವಾರ ಈಚೇಗೆ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸುರೇಶ ಅಂಗಡಿ ಮೃತರಾದ ಸಂದರ್ಭದಲ್ಲಿ ನಾನು ಕ್ವಾರಂಟೈನ್ ನಲ್ಲಿದ್ದೆ. ಹಾಗಾಗಿ ಆಗ ಬರಲು ಸಾಧ್ಯವಾಗಲಿಲ್ಲ. ಸುರೇಶ ಅಂಗಡಿ ಈ ಭಾಗದಲ್ಲಿ ಪಕ್ಷಕ್ಕೆ ದೊಡ್ಡ ಆಸ್ತಿಯಾಗಿದ್ದರು. ಪಕ್ಷವನ್ನು ಕೆಳಮಟ್ಟದಿಂದ ಕಟ್ಟಿ ಬೆಳೆಸಿದ್ದಾರೆ. ಅವರ ಕುಟುಂಬದೊಂದಿಗೆ ಪಕ್ಷ ನಿಲ್ಲಲಿದೆ ಎಂದು ಕಟೀಲು ಹೇಳಿದರು.
ಬೆಳಗಾವಿಯಲ್ಲಿ ಸುರೇಶ ಅಂಗಡಿ ಹೆಸರಿನಲ್ಲಿ ಸ್ಮಾರಕ ಸ್ಥಾಪಿಸುವ ಮತ್ತು ಬೆಳಗಾವಿ -ಬೆಂಗಳೂರು ಫಾಸ್ಟ್ ಎಕ್ಸ್ ಪ್ರೆಸ್ ರೈಲಿಗೆ ಅವರ ಹೆಸರಿಡುವ ಪ್ರಸ್ತಾಪ ಸರಕಾರದ ಮುಂದಿದೆ ಎಂದು ಕಟೀಲು ತಿಳಿಸಿದರು. ( ಈ ಕುರಿತು ಪ್ರಗತಿವಾಹಿನಿ ಹಕ್ಕೊತ್ತಾಯ ಮಾಡಿದ್ದು ಇಲ್ಲಿ ಉಲ್ಲೇಖನೀಯ –ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ )
ಸುರೇಶ ಅಂಗಡಿ ಪತ್ಮಿ, ತಾಯಿ ಮತ್ತು ಮಕ್ಕಳು ಉಪಸ್ಥಿತರಿದ್ದರು. ಕಟೀಲು ಜೊತೆ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮೊದಲಾದವರು ಇದ್ದರು.
ಸಿದ್ದರಾಮಯ್ಯಗೆ ಮಾನಮರ್ಯಾದೆ ಇಲ್ಲ
ಎಪಿಎಂಸಿ ಕಾಯ್ದೆ ಮತ್ತು ಭೂಸುಧಾರಣೆ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕಟೀಲು, ಈ ಎರಡೂ ಕಾಯಿದೆಗಳು ರೈತರಲ್ಲಿ ಶಕ್ತಿ ತುಂಬುವಂತದ್ದು. ತಾವು ಬೆಳೆದ ಬೆಳೆಗೆ ತಾವೇ ಬೆಲೆ ನಿರ್ಧರಿಸುವ ಪರಮಾಧಿಕಾರ ನೀಡುತ್ತದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರ ಮಾಡುತ್ತದೆ. ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ ಎಂದು ತೀವ್ರ ಟೀಕಾಪ್ರಹಾರ ಮಾಡಿದ ನಳಿನಿ ಕುಮಾರ ಕಟೀಲು, ಟಿಪ್ಪು ಜಯಂತಿ ಆಚರಣೆ ಮತ್ತು ವೀರಶೈವ -ಲಿಂಗಾಯತ ಒಡೆಯುವ ಮೂಲಕ ಜಾತಿ ಜಾತಿ, ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆತ್ಮಹತ್ಯೆ ಮಾಡಿಕೊಂಡ ಯಾವೊಬ್ಬ ರೈತನ ಮನೆಗೂ ಭೇಟಿ ನೀಡಲಿಲ್ಲ. ಸ್ವ ಕ್ಷೇತ್ರ ಮೈಸೂರಿನ ಜನರೇ ಅವರನ್ನು ತಿರಸ್ಕರಿಸಿ ಮನೆಗೆ ಕಳಿಸಿದ್ದಾರೆ. ಎಲ್ಲೆಲ್ಲೋ ನಿಂತು ಆರಿಸಿಬರಬೇಕಾಯಿತು. ಮಾನ ಮರ್ಯಾದೆ ಇದ್ದರೆ ಅವರು ಮನೆಯಲ್ಲೇ ಕುಳಿತುಕೊಳ್ಳಬೇಕು ಎಂದು ಕಟೀಲು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ