
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಲಿಂಗಾಯತರ ಬಗ್ಗೆ ಆಡಿರುವ ಮಾತುಗಳು ವಿಡಿಯೊದಲ್ಲಿ ದಾಖಲಾಗಿವೆ. ಹೀಗಾಗಿ ತಿರುಚುವ ಪ್ರಶ್ನೆಯೇ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, “ಈ ವಿಷಯ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾದಾಗ ಹೇಳಿಕೆ ತಿರುಚಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈಗ ಅಂಥ ಪರಿಸ್ಥಿತಿಗಳಿಲ್ಲ. ಅವರ ಮಾತುಗಳು ವಿಡಿಯೊದಲ್ಲಿ ದಾಖಲಾಗಿದ್ದು ಅದನ್ನು ತಿರುಚುವುದು ಸಾಧ್ಯವಿಲ್ಲ” ಎಂದರು.
“ಸಿದ್ದರಾಮಯ್ಯ ಅವರು ಮೊದಲು ಹೇಳಿದ್ದೇ ಬೇರೆ. ಆ ಮೇಲೆ ಹೇಳಿದ್ದೇ ಬೇರೆ. ಅವರ ಹೇಳಿಕೆಗಳನ್ನು ಅವರು ತಿರುಚಿದ್ದಾರೆ. ವಿಡಿಯೊದಲ್ಲಿರುವ ಅವರ ಮಾತು ಬಹಳ ಸ್ಪಷ್ಟವಾಗಿದೆ. ಜನರೇನೂ ದಡ್ಡರಲ್ಲ” ಎಂದು ಬೊಮ್ಮಾಯಿ ಛೇಡಿಸಿದರು.
“ರಾಹುಲ್ ಗಾಂಧಿ ಅವರು ಕೂಡಲಸಂಗಮಕ್ಕೆ ಭೇಟಿ ನೀಡಿರುವುದು ಕೇವಲ ತೋರಿಕೆಗೆ ಮಾತ್ರ. ಅವರಿಗೆ ಈಗ ಅಷ್ಟಾದರೂ ಕಾಳಜಿ ಬಂದಿರುವುದು ಸಮಾಧಾನಕರ. ಲಿಂಗಾಯತ ಮುಖ್ಯಮಂತ್ರಿ ಮಾಡಬೇಕೆಂಬ ಬಗ್ಗೆ ಬಿಜೆಪಿ ಹೈಕಮಾಂಡ್ ನಿರ್ಧಾರ ತಳೆಯಲಿದೆ. ಚುನಾವಣೆ ಫಲಿತಾಂಶ ಬಂದ ನಂತರ ಎಲ್ಲವೂ ನಿರ್ಧಾರವಾಗಲಿವೆ” ಎಂದು ಅವರು ಹೇಳಿದರು.