Belagavi NewsBelgaum NewsKannada NewsKarnataka NewsLatest

ಸುಧಾರಿತ ಜಿಎಸ್ ಟಿಯಲ್ಲಿ ಯಾವುದೇ ಗೊಂದಲವಿಲ್ಲ, ಅತ್ಯಂತ ಸರಳವಾಗಿದೆ: ಡಾ.ರಾಜೇಶ ಮುಂಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಕೇಂದ್ರ ಸರಕಾರ ಜಿಎಸ್ ಟಿಯಲ್ಲಿ ತಂದಿರುವ ಬದಲಾವಣೆ ಅತ್ಯಂತ ಸರಳವಾಗಿದ್ದು ಯಾವುದೇ ಗೊಂದಲವಿಲ್ಲ ಎಂದು ಸಿಜಿಎಸ್ ಟಿ ಜಂಟಿ ಆಯುಕ್ತ ಡಾ.ರಾಜೇಶ ಮುಂಡೆ ಹೇಳಿದ್ದಾರೆ.

ಬೆಳಗಾವಿಯ ವಾಣಿಜ್ಯೋದ್ಯಮ ಸಂಘ (ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್) ಬುಧವಾರ ಆಯೋಜಿಸಿದ್ದ ಜಿಎಸ್ ಟಿ ರಿಫಾರ್ಮ್ಸ್ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. ನವರಾತ್ರಿಯ ಆರಂಭದ ದಿನದಿಂದಲೇ ಸರಳೀಕೃತ ಜಿಎಸ್ ಟಿ ಜಾರಿಗೆ ತರಬೇಕೆಂದು ಪ್ರಧಾನ ಮಂತ್ರಿಯವರು ನಿರ್ಧರಿಸಿದ್ದರು. ಅದರಂತೆ ತಿಂಗಳ ಮಧ್ಯಭಾಗದಲ್ಲಿ ಜಾರಿಗೊಳಿಸಲಾಯಿತು. ಬಹಳ ದೂರದೃಷ್ಟಿಯಿಂದ ಕೂಡಿದ ಸುಧಾರಣೆ ಇದಾಗಿದೆ. ಎಲ್ಲ ವರ್ಗದ ಜನರಿಗೂ ಅನುಕೂಲವಾಗಲೆಂದು ಸುಧಾರಣೆ ತರಲಾಗಿದೆ ಎಂದು ಅವರು ಹೇಳಿದರು. 

ಬೆಳಗಾವಿ ಚಾರ್ಟರ್ಡ್ ಅಕೌಂಟಟ್ಸ್ ಅಸೋಸಿಯೇಶನ್ ಅಧ್ಯಕ್ಷ ವೀರಣ್ಣ ಮುರಗೋಡ ಮಾತನಾಡಿ, ವಿಶ್ವದಲ್ಲೇ ಉತ್ತಮ ತೆರಿಗೆ ಪದ್ಧತಿ ಜಿಎಸ್ ಟಿಯಾಗಿದ್ದು, ಹಲವಾರು ದೇಶಗಳು ಉತ್ತಮ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಲು ಕಷ್ಟಪಡುತ್ತಿರುವಾಗ ಭಾರತ ಈ ವಿಷಯದಲ್ಲಿ ಸಾಕಷ್ಟು ಮುಂದೆ ಹೋಗಿದೆ. 8 ವರ್ಷದ ಹಿಂದೆ ಜಾರಿಗೆ ಬಂದಿರುವ ಜಿಎಸ್ ಟಿಯನ್ನು ಇನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಜಿಎಸ್ ಟಿ 2 ಜಾರಿಗೆ ಬಂದಾಗಿದೆ. ಶೀಘ್ರದಲ್ಲೇ ದೇಶದ ಆರ್ಥಿಕತೆ ಇನ್ನಷ್ಟು ಸುಧಾರಣೆ ಕಾಣಲಿದೆ ಎಂದರು. 

Home add -Advt

ಕರ್ನಾಟಕ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಉತ್ಪಾದಕ ರಾಜ್ಯಗಳಾಗಿದ್ದು, ಅತೀ ಹೆಚ್ಚು ಜಿಎಸ್ ಟಿ ನೀಡುವ ರಾಜ್ಯಗಳಾಗಿವೆ. ಬೇರೆ ಹಲವು ರಾಜ್ಯಗಳು ಜಿಎಸ್ ಟಿಯಲ್ಲಿ ಹೆಚ್ಚಿನ ಪಾಲು ಪಡೆಯುತ್ತಿದ್ದರೂ ಅವುಗಳ ಕೊಡುಗೆ ಕಡಿಮೆ ಎಂದ ಅವರು, ಯಾರಿಗಾದರೂ ಅಸಮಧಾನ, ಅನುಮಾನಗಳಿದ್ದರೆ ಕೇಂದ್ರ  ಜಿಎಸ್ ಟಿ ಮಂಡಳಿಗೆ ಮನವಿ ಸಲ್ಲಿಸಬಹುದು ಎಂದರು.

ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನ್ನೋಳಿ ಸ್ವಾಗತಿಸಿದರು. ತೆರಿಗೆ ಸಮಿತಿ ಚೇರಮನ್ ವಿಕ್ರಮ ಜೈನ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸತೀಶ್ ಕುಲಕರ್ಣಿ ವಂದಿಸಿದರು.

Related Articles

Back to top button