*ಬಾಂಬ್ ಹಾಕಲು ಜಮೀರ್ ಹೊಗುವ ಅಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಾಂಬ್ ಹಾಕಲು ಕಾಂಗ್ರೆಸ್, ಬಿಜೆಪಿಯವರು, ಜಮೀರ್ ಅವರು ಹೋಗಬೇಕಿಲ್ಲ. ಭದ್ರತಾ ಕರ್ತವ್ಯ ನಿರ್ವಹಿಸಲು ನಮ್ಮ ಸೈನಿಕರಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಜಮ್ಮು-ಕಾಶ್ಮೀರದ ಪಹಲ್ಲಾಮ್‌ನಲ್ಲಿ ಏ.22ರಂದು ನಡೆದ ಪಾಕ್ ಪೋಷಿತ ಉಗ್ರ ದಾಳಿ ಪ್ರಕರಣ ಕುರಿತುಂತೆ ಪ್ರತಿಕ್ರಿಯೆ ನೀಡಿದ್ದ ಸಚಿವ ಜಮೀರ್ ಅಹಮದ್ ಅವರು ಖುದ್ದು ತಾವೇ ಬಾಂಬ್ ಕಟ್ಟಿಕೊಂಡು ಪಾಕ್ ವಿರುದ್ಧ ಯುದ್ಧಕ್ಕೆ ಸಿದ್ಧ ಎಂದಿದ್ದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ನಮ್ಮ ದೇಶ ಕಾಯುವ 22 ಲಕ್ಷ ಯೋಧರಿದ್ದು, ಅವರು ತಮ್ಮ ಕರ್ತವ್ಯ ಮಾಡುತ್ತಾರೆ. ಯುದ್ಧ ಮಾಡುವ ವಿಚಾರ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಯಾವಾಗ, ಏನು ಮಾಡಬೇಕು ಎಂದು ಕೇಂದ್ರ ಸರ್ಕಾರವೇ ನೀರ್ಧರಿಸುತ್ತದೆ ಎಂದರು.
ಸೂಕ್ತ ಸಮಯದಲ್ಲಿ ಕೇಂದ್ರ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ಜಮೀರ್ ಅವರು ಬಾಂಬ್ ಹಾಕಲು ಹೋಗುವುದು ಬೇಡ ಎಂದು ಪರೋಕ್ಷವಾಗಿ ಹೇಳಿದರು.
ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನುಮತಿ ನೀಡಿದರೆ ನಾನೇ ದೇಹಕ್ಕೆ ಬಾಂಬ್ ಕಟ್ಟಿಕೊಂಡು ಹೋಗಲು ರೆಡಿ. ನಾನು ಜೋಶ್ ಅಥವಾ ತಮಾಷೆಗೆ ಈ ಮಾತು ಹೇಳುತ್ತಿಲ್ಲ. ಯುದ್ಧಕ್ಕೆ ಕರೆಯಲಿ ಅಲ್ಲಾಹು ಮತ್ತು ದೇವರ ಆಣೆಗೂ ಆತ್ಮಾಹುತಿ ಬಾಂಬರ್ ಆಗಿ ಪಾಕಿಸ್ತಾನಕ್ಕೆ ಹೋಗ್ತಿನಿ ಎಂದು ಇತ್ತೀಚೆಗೆ ಹೊಸಪೇಟೆಯಲ್ಲಿ ಜಮೀರ್ ಅವರು ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆಗೆ ಬಿಜೆಪಿ ನಾಯಕರೂ ತೀವ್ರವಾಗಿ ಟೀಕಿಸಿದ್ದಾರೆ. ಜಮೀರ್ ಅವರು ಮಾತನಾಡದೇ ಸುಮ್ಮನ್ನಿದ್ದರೆ ಸಾಕು. ಅದೇ ದೇಶಕ್ಕೆ ಅವರು ಮಾಡುವ ದೊಡ್ಡ ಸೇವೆ. ಸುಮ್ಮನೇ ಬಾಲಿಶ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ನಿನ್ನೆಯಷ್ಟೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೂ ಟಾಂಗ್ ನೀಡಿದ್ದರು.