*ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ರೋಗಿ ಸಾವು ಪ್ರಕರಣ: ಸದನದಲ್ಲಿ ವೈದ್ಯಕೀಯ ವರದಿ ವಿವರಿಸಿದ ಸಚಿವರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ತಿನಲ್ಲಿ ಡಿ.8ರಂದು ನಡೆದ ಪ್ರಶ್ನೋತ್ತರ ವೇಳೆಯಲ್ಲಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯ ಪ್ರಕರಣವೊಂದು ಚರ್ಚೆಗೆ ಬಂದಿತು.
ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 13(139)ರ ಮೇಲಿನ ಚರ್ಚೆಯ ವೇಳೆ ಸದಸ್ಯರಾದ ಎಂ ನಾಗರಾಜು ಅವರು ವಿಷಯ ಪ್ರಸ್ತಾಪಿಸಿ, ತಪ್ಪಿತಸ್ಥ ವೈದ್ಯರು ಮತ್ತು ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪಟ್ಟುಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಬಿಮ್ಸ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವೈದ್ಯರಿಂದ ಯಾವುದೇ ನಿರ್ಲಕ್ಷ್ಯ ಆಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರ ನಿರ್ಲಕ್ಷ್ಯದಿಂದ ಒಬ್ಬ ರೋಗಿಯ ಹೊಟ್ಟೆಯ ಗಡ್ಡೆ ಬದಲಿಗೆ ಕರುಳನ್ನು ತೆಗೆದು ಹಾಕಲಾಗಿದೆ ಎಂದು ಸುದ್ದಿಯಾಗಿರುವದು ಸರ್ಕಾರದ ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಪರಿಶೀಲಿಸಲಾಗಿ, ರೋಗಿಯು ದೀರ್ಘಕಾಲದ ಮದ್ಯವ್ಯಸನಿ ಹಾಗೂ ತಂಬಾಕು ಅಗಿಯುವ ಇತಿಹಾಸವನ್ನು ಹೊಂದಿದ್ದು, ರೋಗಿಗೆ ಅಪೇಂಡಿಕ್ಸ್ ಕರುಳಿನ ರಂದ್ರ ಇರುವುದು ತಾಲ್ಲೂಕ ಆಸ್ಪತ್ರೆಯಿಂದ ನೀಡಿದ ಶಿಫಾರಸ್ಸು ಪತ್ರದಲ್ಲಿ ನಮೂದಿಸಲಾದ ಕಾರಣ, ಈ ರೋಗಿಗೆ ನಿಯಮಿತ ತನಿಖೆಗಳು, ಯುಎಸ್ಜಿ ಪರೀಕ್ಷೆ, ಸೋನಾಗ್ರಾಫಿ ಪರೀಕ್ಷೆಗಳನ್ನು ನಡೆಸಿದಾಗ ಅಪೇಂಡಿಕ್ಯೂಲರ್ ರಂದ್ರ ಇರುವುದು ಕಂಡುಬರುತ್ತದೆ. ದಿನಾಂಕ: 20/6/2025ರಂದು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಲ್ಯಾಪ್ರೋಟಮಿ ನಡೆಸಲಾಗಿದ್ದು, ಅಪೇಂಡಿಕ್ಸ್ ತುದಿಯಲ್ಲಿ ಉಬ್ಬಿಕೊಂಡಿರುವುದು ಕಂಡುಬಂದ ನಿಮಿತ್ತ ಅಪೇಂಡಿಸೆಕ್ಟಮಿ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕರುಳನ್ನು ಪರೀಕ್ಷಿಸಿದ್ದು, ಕರುಳು ಸಾಮಾನ್ಯವಾಗಿದ್ದುದರಿಂದ ತೆಗೆದಿರುವುದಿಲ್ಲವೆಂದು ಸಂಸ್ಥೆಯು ವರದಿಯಲ್ಲಿ ಸಲ್ಲಿಸಿರುತ್ತದೆ. ಕಾಲಕಾಲಕ್ಕೆ ರೋಗಿಗೆ ಚಿಕಿತ್ಸೆ/ಪರೀಕ್ಷೆ ನಡೆಸುತ್ತಿದ್ದಾಗ್ಯೂ ವೈದ್ಯಕೀಯ ಸಲಹೆಯ ವಿರುದ್ಧವಾಗಿ ರೋಗಿಯನ್ನು ರೋಗಿಯ ಸಂಬಂಧಿಕರು 22/6/2025 ಬಿಮ್ಸ್ ಸಂಸ್ಥೆಯಿಂದ ಬಿಮ್ಸ್ ಸಂಸ್ಥೆಯಿಂದ ಕರೆದೊಯ್ಯಲಾಗಿದೆ. ರೋಗಿಗೆ ಬಿಮ್ಸ್ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆಯ ವೇಳೆಯಲ್ಲಿ ವೈದ್ಯರಿಂದ ಯಾವುದೇ ನಿರ್ಲಕ್ಷ್ಯತೆ ಆಗಿರುವುದಿಲ್ಲ ಎಂದು ಸಚಿವರು ತಿಳಿಸಿದರು.



