ಗಿರೀಶ್ ಭಟ್
ಅರೆ ಇಷ್ಟು ಬೇಗ ಸಂಜೆಯಾಯಿತೇ? ಬೆಳಗಾಗುವುದೇ ತಡ ಸಂಜೆಯಾಗೇ ಬಿಡುತ್ತದೆ ಎಂದು ನಾವು ಮನೆಯಲ್ಲಿ ಸಹಜವಾಗಿ ಮಾತನಾಡಿಕೊಳ್ಳುತ್ತೇವೆ. ಕರೋನಾ ಕಾಟದ ನಡುವೆ ಹಬ್ಬಗಳ ಸಾಲು ಬಂದೇ ಬಿಟ್ಟಿದೆ. ಸ್ನೇಹಿತರನ್ನು ಎಷ್ಟೋ ವರ್ಷಗಳಾದ ಮೇಲೆ ಭೆಟಿಯಾಗುತ್ತೇವೆ. ಮದುವೆ ಯಾಯಿತೆ? ನಿನಗೆಷ್ಟು ಮಕ್ಕಳು? ಎಲ್ಲಿ ಕೆಲಸ? ಇತ್ಯಾದಿ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಕೆಲವರ ಮದುವೆ ೩೫ ವರ್ಷದ ನಂತರ ನಡೆಯಬಹುದು. ಅಯ್ಯೋ ’ನನ್ನ ಮಕ್ಕಳು ನನ್ನ ಕೈಗೆ ಬರುವಾಗ ನಾನು ಮುದುಕನಾಗಿರುತ್ತೇನೆ. ನಾನು ಇನ್ನೂ ಜೀವವಿಮೆ ಮಾಡಿಸಿಲ್ಲ. ನಾನು ಬೇಗ ಮದುವೆಯಾಗಬೇಕಿತ್ತು’. ಹೀಗೇ ಹತ್ತು ಹಲವಾರು ಪ್ರಶ್ನೆಗಳನ್ನು ನಮ್ಮಲ್ಲಿ ನಾವೇ ಪದೇ ಪದೇ ಕೇಳಿಕೊಳ್ಳುತ್ತೇವೆ. ಇಷ್ಟೆಲ್ಲ ಪೀಠಿಕೆ ಹಾಕಲು ಕಾರಣ ಸಮಯ. ಸಮಯಕ್ಕೆ ಸರಿಯಾಗಿ ಮದುವೆ ಆಗದೇ ಇದ್ದರೆ ಇವೆಲ್ಲ ಸಮಸ್ಯೆಗಳು. ಈಗಂತೂ ಹೆಚ್ಚು ಕಡಿಮೆ ಎಲ್ಲ ಜಾತಿಯಲ್ಲಿ ವಧುವಿನ ಕೊರತೆ. ಇದರಿಂದಾಗಿ ವಧು ಹುಡುಕಿ-ಹುಡುಕಿ ಸುಸ್ತಾಗಿ ಕೊನೆಗೆ ನಾವವರಿಗೆ ಹೊಂದಿಕೊಳ್ಳುಂತಹ ಬೇರೆ ಜಾತಿಯ ಹುಡುಗಿ ವಿವಾಹವಾಗುವುದು ಸಾಮಾನ್ಯವಾಗಿಬಿಟ್ಟಿದೆ.
ಅದಕ್ಕೆ ಹೇಳುವುದುಂಟು. ಹಣವನ್ನು ಎಷ್ಟಾದರೂ ಗಳಿಸಬಹುದು. ಆದರೆ ಸಮಯ ಮಾತ್ರ ಹಣಕ್ಕಿಂತ ಅಮೂಲ್ಯವಾದದ್ದು. ಅದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ಒಂದೇ ಸಮನೆ ಓಡುತ್ತಲೇ ಇರುತ್ತದೆ ಅಲ್ಲವೆ? ಕಳೆದುಹೋದ ಸಮಯವನ್ನು ಎಷ್ಟೇ ಪ್ರಯತ್ನಪಟ್ಟರೂ ಮರಳಿ ಪಡೆಯಲಾಗುವುದಿಲ್ಲ. ನಮ್ಮ ವಯಸ್ಸೂ ಹಾಗೆ.
ಚಿಕ್ಕವರಿರುವಾಗ ಶಾಲೆಗೆ ಹೋಗುವಾಗ ಸೋಮವಾರ ಶಾಲೆಗೆ ಹೋಗುವುದೇ ಬೇಸರ. ಏಕೆಂದರೆ ಭಾನುವಾರ ಶಿಕ್ಷಕರ ಕಾಟದಿಂದ ತಪ್ಪಿಸಿಕೊಂಡಿರುತ್ತೇವೆ ಎಂಬ ಸಂತೋಷ. ನಂತರದ ವರ್ಷಗಳಲ್ಲಿ ಕೆಲಸ ಮಾಡುವಲ್ಲಿ ಕಿರಿ-ಕಿರಿ. ಇವತ್ತು ಸೋಮವಾರ. ಅಯ್ಯೋ ಭಾನುವಾರಕ್ಕೆ ಇನ್ನೂ ೬ ದಿನ ಕಾಯಬೇಕೆ? ಸೋಮವಾರ ಬೆಳಿಗ್ಗೆ ಸಮಯ ನೋಡಿದ್ದೇ ನೋಡಿದ್ದು. ಎಷ್ಟು ಬೇಸರ ಎಂದರೂ ಸಮಯ ಓಡುವುದು ಮಾತ್ರ ನಿಲ್ಲುವುದಿಲ್ಲ.
ಇನ್ನು ಶಿಕ್ಷಣ ಮುಗಿಸಿ ೨೧-೨೪ ವಯಸ್ಸಿನೊಳಗೆ ಉತ್ತಮ ಕೆಲಸ ಹುಡುಕಿಕೊಳ್ಳಬೇಕು. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅದು ಸುಲಭವೇನಲ್ಲ. ಅದಕ್ಕೆಂತಲೆ ಹಲವಾರು ತರಬೇತಿ ಕೇಂದ್ರಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡಿವೆ. ಅದೇ ಈಗಿನ ಒಂದು ಹಣ ಗಳಿಸುವ ಉದ್ಯಮವಾಗಿಬಿಟ್ಟಿದೆ. ’ಏ ನಾನು ಕೆಎಸ್ ಮಾಡಬೇಕು, ಐಎಸ್ ಮಾಡಬೇಕು ನನಗೆ ವಿಶೇಷ ತರಬೇತಿ ಬೇಕು’ ಎಂದುಕೊಂಡರೆ ಅಲ್ಲೊಂದಷ್ಟು ದಿನ ಸಮಯ ವ್ಯರ್ಥವಾಗುತ್ತದೆ. ಅದು ಓಡುತ್ತಲೇ ಇರುತ್ತದೆ. ಅದಕ್ಕೆ ’ರಿಪ್ಲೆ-ರಿವರ್ಸ್’ ಆಗುವುದು ತಿಳಿದೇ ಇಲ್ಲ. ’ಕಂಟ್ರೋಲ್ ಝಡ್’ ಅಂತೂ ಅದಕ್ಕೇ ಗೊತ್ತೇ ಇಲ್ಲ. ಮನುಷ್ಯನ ಆಯುಷ್ಯವು ’ಒಂದು ಒಡಕು ಕೊಡದಲ್ಲಿ ನೀರು ಸೋರಿದಂತೆ ಸೋರುತ್ತ ಹೋಗುತ್ತದೆ. ಮನುಷ್ಯನಿಗೆ ಸಾವು ಸದಾ ನೆರಳಿನಂತೆ ಹಿಂಬಾಲಿಸುತ್ತಿರುತ್ತದೆ’ ಎಂದು ಕೆಲವು ವರ್ಷಗಳ ಹಿಂದೆ ಒಂದು ಧಾರ್ಮಿಕ ಗ್ರಂಥದಲ್ಲಿ ಓದಿದ ನೆನಪು.
ಹದಿಹರಯದವರಿದ್ದಾಗ ಹೊಸ ಹುಮ್ಮಸ್ಸಿನ್ಲಲ್ಲಿ ನಾನೇನಾದರೂ ಸಾಧಿಸಬಲ್ಲೆ ಎನ್ನುವ ಆತ್ಮವಿಶ್ವಾಸವಿರುತ್ತದೆ. ಈ ಕೆಲವು ವರ್ಷಗಳಲ್ಲಿ ನಾವೆಷ್ಟು ವರ್ಷ ಬದುಕಬಹುದು, ಬದುಕುತ್ತೇವೆ ಎನ್ನುವುದರ ಕಾಳಜಿ ಇರುವುದಿಲ್ಲ. ಹೆಚ್ಚಾಗಿ ೩೫ ವರ್ಷಗಳ ನಂತರ ಈ ಕುತೂಹಲ ಹೆಚ್ಚಾಗಿ ಮನಸ್ಸಿನಲ್ಲಿ ಬರುತ್ತಿರುತ್ತದೆ. ಟಿವಿ-ಪತ್ರಿಕೆಗಳಲ್ಲಿ ಜನಪ್ರಿಯ ವ್ಯಕ್ತಿಗಳು-ಸಿನಿಮಾ ನಟರು ತೀರಿಕೊಂಡಾಗ ಅವರೆಷ್ಟು ವರ್ಷ ಬದುಕಿದರು? ಅವರಿಗೆ ಏನಾಗಿತ್ತು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ರರವನ್ನು ಗೂಗಲ್‌ನಲ್ಲಿ ಹುಡುಕಿ ವಿಕೆಪಿಡಿಯಾ ಮೂಲಕವಾದರೂ ತಿಳಿದುಕೊಳ್ಳುತ್ತೇವೆ. ಆದರೆ ಮದುವೆಯಾದ ನಂತರ ಮನುಷ್ಯನ ಜೀವದಲ್ಲಿ ಮೊದಲಿದ್ದ ಉತ್ಸಾಹ-ಹುಮ್ಮಸ್ಸು ಇರುವುದಿಲ್ಲ. ಅಯ್ಯೊ ನಾನು ಚಿಕ್ಕವನಿದ್ದಾಗ ಮನೆಯಲ್ಲಿ ಹಿರಿಯರೆಲ್ಲ ಓದು ಓದು ಎಂದು ಬಯ್ಯುತ್ತಿದ್ದರು. ನಾನು ಸರಿಯಾಗಿ ಓದಲೇ ಇಲ್ಲ. ಆಗ ಓದಿದ್ದರೆ ಜೀವನದಲ್ಲಿ ಇನ್ನೂ ಹೆಚ್ಚು ಸಂಬಳದ ಕೆಲಸವನ್ನೇ ಹಿಡಿಯಬಹುದಿತ್ತು ಎಂದು ನಮಗೆ ನಾವೇ ಬೈದುಕೊಳ್ಳುತ್ತಿರುತ್ತೇವೆ.
ಜೀವನದಲ್ಲಿ ಸಮಯ ಪರಿಪಾಲನೆ ಬಹು ಮುಖ್ಯವಾದದ್ದು. ನಮ್ಮನ್ನು ಯಾರಾದರೂ ಭೇಟಿಯಾಗಬೇಕು ಎಂದಿದ್ದಾರೆ ಎಂದುಕೊಳ್ಳೋಣ. ಇಂತಿಷ್ಟು ಸಮಯಕ್ಕೆ ಅವರು ಇಂತಲ್ಲಿ ಬಾ ಎಂದು ಹೇಳಿದ್ದಾರೆ. ನಾವು ಅವರನ್ನು ಹೆಚ್ಚು ಹೊತ್ತು ಕಾಯಿಸದೆ ಸರಿಯಾದ ಸಮಯಕ್ಕೆ ಅಲ್ಲಿರಬೇಕು. ದೂರದ ಯಾವುದೋ ಊರಿಗೆ ತೆರಳಬೇಕು. ಮೊದಲು ಬೆಳಿಗ್ಗೆ ಬೇಗ ಏಳಬೇಕು. ಅಯ್ಯಪ್ಪ ಈಗಂತೂ ಛಳಿಗಾಲ. ಮೊಬೈಲ್ ಅಲಾರಾಂ ಹೊಡೆದುಕೊಂಡ ಮೇಲೆ ಇನ್ನೊಂದು ೧೦ ನಿಮಿಷ ಮಲಗಿದರಾಯಿತು ಎಂದು ಅದನ್ನು ಬಂದ್ ಮಾಡಿ ಮಲಗಿದರೆ ೧ ಗಂಟೆ ತಡವಾದರೂ ಆದೀತು. ಏಳುವುದೇ ವಿಳಂಬವಾದರೆ ಬಸ್/ರೈಲು ತಪ್ಪಿಸಿಕೊಂಡು ಊರಿಗೆ ತಲುಪುವುದೂ ತಡವೇ. ಅದು ದಿನಕ್ಕೊಂದೇ ರೈಲಿನ ವ್ಯವಸ್ಥೆ ಇದ್ದರಂತೂ ಒಂದು ದಿನ ನಮ್ಮ ಪ್ರಯಾಣ ವಿಳಂಬವೇ. ವಿದ್ಯಾರ್ಥಿಗಳು ತಮ್ಮ ಕಲಿಕಾ ಜೀವನದಲ್ಲಿ ಸರಿಯಾದ ಸಮಯಕ್ಕೆ ಶಾಲೆ/ಹೈಸ್ಕೂಲ್/ಕಾಲೇಜಿಗೆ ಹಾಜರಿರಬೇಕು. ಪರೀಕ್ಷೆಯಲ್ಲಂತೂ ಒಂದು ನಿಮಿಷ ತಡವಾದರೂ ಅವರು ಮಾರ್ಕ್ಸ್ ಕಡಿಮೆ ತೆಗೆದುಕೊಳ್ಳುವ ಅತಂಕವಿದೆ. ಅಂತೆಯೇ ಉದ್ಯೋಗ ಸಂದರ್ಶನಕ್ಕೆ ತೆರಳುವಾಗ ಅಲ್ಲಿ ’ಮೊದಲು ಬಂದವರಿಗೆ ಮೊದಲ ಆದ್ಯತೆ’ ಇರುವುದರಿಂದ ಇಲ್ಲೂ ಸಮಯವೇ ಮಹತ್ವ ಪಡೆದುಕೊಳ್ಳುತ್ತದೆ. ಅಂತೆಯೇ ನಮ್ಮ ಜೀವನವೂ ಮುಂದೊಂದು ದಿನದ ಒಂದು ನಿರ್ದಿಷ್ಟ ಸಮುಯದಲ್ಲಿ ಕೊನೆಯಾಗುತ್ತದೆ. ಆದ್ದರಿಂದಲೇ ಜಗತ್ತಿನ ಶ್ರೇಷ್ಠ ವ್ಯಕ್ತಿಗಳೆಲ್ಲ ಸಮಯಕ್ಕೆ ಅಷ್ಟೊಂದು ಮಹತ್ವ ಕೊಟಿದ್ದರು ಮತ್ತು ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುತ್ತಿದ್ದರು.
ಜಗತ್ತಿನಲ್ಲಿ ಹಣಕ್ಕಿಂತ ಹೆಚ್ಚು ಮೌಲ್ಯಯುತವಾದದ್ದೆಂದರೆ ಅದು ಸಮಯವೇ ಆಗಿದೆ. ಅಂತೆಯೇ ನಾವು ಖರೀದಿಸುವ ಪ್ರತಿಯೊಂದು ವಸ್ತುವಿಗೂ ಒಂದು ’ನಿರ್ದಿಷ್ಟ ದಿನಾಂಕ’ (ಎಕ್ಸ್‌ಪೈಯರಿ ಡೇಟ್) ನಮೂದಿಸಿರುವುದನ್ನು ನೋಡುತ್ತೇವೆ. ಹಾಲು ಒಂದಷ್ಟು ದಿನಗಳಿಗಷ್ಟೇ ಸೀಮಿತ. ಅದೊ ನಂತರ ಕೆಟ್ಟು ಹೋಗುತ್ತದೆ. ಔಷಧಿಗಳಲ್ಲಂತೂ ’ನಿರ್ದಿಷ್ಟ ದಿನಾಂಕ’ ಬಹು ಮುಖ್ಯ. ದಿನಾಂಕ ಮುಗಿದ ಔಷಧಿಗಳನ್ನು ನಾವು ತೆಗೆದುಕೊಂಡರೆ ಅದರ ಪರಿಣಾಮವೇ ಬೇರೆ. ದಿನನಿತ್ಯ ನಾವು ಬಳಸುವ ಚಾಲನಾ ಪರವಾನಗಿ ಪತ್ರ, ವಾಹನ ವಿಮೆ, ಎಟಿಎಮ್ ಕಾರ್ಡ್, ಮೊಬೈಲ್ ಸಿಮ್ ಹೀಗೆ ಎಲ್ಲವೂ ಸಮಯ ಮೀರುವಂತಹವೇ.
ಭೂತಕಾಲದ ಬಗ್ಗೆ ಚಿಂತಿಸಿ ಸಮಯ ಹಾಳುಮಾಡಿಕೊಳ್ಳಬಾರದು. ಭವಿಷ್ಯದ ಬಗ್ಗೆ ಬಹಳ ಆಲೋಚಿಸಿಯೂ ಸಮಯ ವ್ಯರ್ಥಮಾಡಿಕೊಳ್ಳಬಾರದು. ವರ್ತಮಾನ ಕಾಲದ ಸಮಯವನ್ನು ಸರಿಯಾಗ ಯೋಜಿಸಿ ಮುನ್ನಡೆಯಬೇಕು. ಹೀಗೆ ’ಸಮಯ ನಿರ್ವಹಣೆ’ (ಟೈಮ್ ಮ್ಯಾನೇಜ್‌ಮೆಂಟ್) ಜಾರಿಗೆ ತಂದುಕೊಂಡಾಗ ಮಾತ್ರ ನಾವು ಅಂದುಕೊಂಡ ಗುರಿಯ ಸಮೀಪವಿರುತ್ತೇವೆ. ಬೆಳಿಗ್ಗೆ ಎದ್ದು ಕಚೇರಿಗೆ ತೆರಳುವಾಗಲೂ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ. ಚಳಿಯಾದರೂ ಆಲಸ್ಯ ಬಿಟ್ಟು ೭ ಗಂಟೆಗೇ ಎದ್ದಿದ್ದೇನೆ. ಆದರೂ ೧೦ ಗಂಟೆ ಆಗಿದ್ದೇ ಗೊತ್ತಾಗಲಿಲ್ಲ. ಈ ಕಚೇರಿಯ ವಿಷಯ ಬಂದಾಗ ಒಂದು ಒಳ್ಳೆ ಸಂಗತಿ ನೆನಪಾಯಿತು. ಕಚೇರಿಗೆ ಹೋಗುವ ಅವಸರದಲ್ಲಿ ನಮ್ಮ ಬೈಕ್/ಕಾರ್ ಚಲಾಯಿಸುವಾಗ ಅತಿ ವೇಗದಲ್ಲಿ ವಾಹನ ಚಲಾಯಿಸಿ ಅನಾಹುತ ಮಾಡಿಕೊಳ್ಳುವ ಪ್ರಸಂಗಗಳೂ ಸಾಕಷ್ಟಿವೆ. ಅಷ್ಟೇ ಅಲ್ಲದೇ ಟೈಮ್ ಆಗಿದೆ ಎಂಬ ಗಡಿಬಿಡಿಯಲ್ಲಿ ಒಮ್ಮೊಮ್ಮೆ ಪರ್ಸ್, ವಾಚ್, ಮೊಬೈಲ್, ತಿಂಡಿ ಡಬ್ಬ ಮುಂತಾದವುಗಳನ್ನು ಬಿಟ್ಟು ತೆರಳುತ್ತೇವೆ. ಅದೇ ರೀತಿ ನಮ್ಮ ಕೆಲಸ-ಕಾರ್ಯಗಳು ಸರಿಯಾಗಿ ಸಾಗುತ್ತಿರುವಂತೆ ನೋಡಿಕೊಳ್ಳುವುದಕ್ಕೆ ಸಮಯ ನಿರ್ವಹಣೆ ಅತ್ಯವಶ್ಯ. ಆಗಾಗ ಸಮಯವನ್ನು ನೋಡುತ್ತಿರಲು ಕೂಡ ಸಮಯ ಬೇಕು.
ಉತ್ತಮ ಸಮಯ ನಿರ್ವಹಣೆ ನಮಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನದನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚು ಉಚಿತ ಸಮಯಕ್ಕೆ (ಫ್ರೀ ಟೈಮ್) ಕಾರಣವಾಗುತ್ತದೆ. ನಮ್ಮ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ. ಟೈಮ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧ ಪಟ್ಟ ಮೊಬೈಲ್ ಆಪ್‌ಗಳೂ ಸಾಕಷ್ಟಿವೆ. ಇದರಿಂದ ಹೆಚ್ಚು ವೃತ್ತಿಜೀವನದ ಯಶಸ್ಸು ಪಡೆದುಕೊಳ್ಳಬಹುದು. ಹೀಗೆ ಸಮಯದ ಮಹಿಮೆ ಎಷ್ಟು ಹೇಳಿದರೂ ಕಡಿಮೆಯೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ