ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಾನು 31 ವರ್ಷದಿಂದ ಪಕ್ಷದ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇನೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನನಗೆ ಏನು ಜವಾಬ್ದಾರಿ ಕೊಡಬೇಕೆನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ಆದರೆ ನಾನು ದಾರಿ ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.
ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ 3 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ರವೀಂದ್ರ ಕೌಶಿಕ್ ಇ- ಲೈಬ್ರರಿ ಮತ್ತು ವಿಕಲಚೇತನ ಮಕ್ಕಳಿಗಾಗಿ ನಿರ್ಮಾಣವಾಗಿರುವ ವಿಶಿಷ್ಠವಾದ ಉದ್ಯಾನವನ ಉದ್ಘಾಟಿಸುವರು. ಬೆಳಗಾವಿ ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುವ ಸದಸ್ಯರನ್ನು ಸನ್ಮಾನಿಸಲಿದ್ದಾರೆ.
ಈ ಕುರಿತು ಮಾಹಿತಿ ನೀಡಲು ಅಭಯ ಪಾಟೀಲ ಪತ್ರಿಕಾಗೊಷ್ಠಿ ಕರೆದಿದ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನ್ನ ಕೆಲಸವನ್ನು ಗುರುತಿಸಿಯೇ ನನಗೆ ಮಹಾನಗರ ಪಾಲಿಕೆ ಚುನಾವಣೆ ಜವಾಬ್ದಾರಿ ನೀಡಿದ್ದರು. ನಾನು ಯಾವತ್ತೂ ಅಧಿಕಾರ ಕೇಳಿದವನಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತ ಬಂದವನು. ಮುಂದೆಯೂ ಹೀಗೆಯೇ ಇರುತ್ತೇನೆ ಎಂದರು.
ಪಕ್ಷಕ್ಕೆ ಬಂದಾಗಿನಿಂದಲೂ ಸಾಮಾನ್ಯ ಕಾರ್ಯಕರ್ತನಾಗಿ ಬ್ಯಾನರ್, ಬಂಟಿಂಗ್ಸ್ ಕಟ್ಟುತ್ತ ಬಂದಿದ್ದೇನೆ. ಈಗಲೂ ಮುಂದುವರಿಸಿದ್ದೇನೆ. ಅಧಿಕಾರ ಕೊಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟಿದ್ದು ಎಂದರು.
ಇಷ್ಟೊಂದು ಸಾಧನೆ ಮಾಡಿದರೂ ನಿಮ್ಮನ್ನು ಗುರುತಿಸಿ ಮಂತ್ರಿಸ್ಥಾನ ಕೊಟ್ಟಿಲ್ಲ. ನೀವು ನಿಮ್ಮ ದಾರಿ ಬದಲಾಯಿಸುವ ಅಗತ್ಯವೇನಾದರೂ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನಿಂದಲೂ ಹೀಗೆಯೇ ಇದ್ದೇನೆ, ಮುಂದೆಯೂ ಹೀಗೇ ಇರುತ್ತೇನೆ ಎಂದರು.
ಶಿವಾಜಿ ಉದ್ಯಾನದ ಬಳಿಯ ರವೀಂದ್ರ ಕೌಶಿಕ್ ಇ ಲೈಬ್ರರಿ ದೇಶದಲ್ಲೇ ಅತ್ಯಂತ ವಿಶಿಷ್ಠವಾದದ್ದು. ಇದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಿಂದ 2.50 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೆಳಗಾವಿ ನಾಗರಿಕರು, ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅಭಯ ಪಾಟೀಲ ವಿನಂತಿಸಿದರು. (ಇ ಲೈಬ್ರರಿ ಕುರಿತು ಮಾಹಿತಿ – E-Library Inauguration – K-1)
ಹಾಗೆಯೇ ಟಿಳಕವಾಡಿಯಲ್ಲಿ ವಿಕಲಚೇತನ ಮಕ್ಕಳಿಗಾಗಿಯೇ ವಿಶಿಷ್ಟವಾದ ಉದ್ಯಾನ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಿಂದ 2.70 ಕೋಟಿ ರೂ. ವೆಚ್ಚ ಮಾಡಲಾಗಿದೆ. ವಿಕಲ ಚೇತನ ಮಕ್ಕಳು ಮತ್ತು ಅವರ ಪಾಲಕರಿಗಷ್ಟೆ ಅಲ್ಲಿ ಪ್ರವೇಶವಿರಲಿದೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಹಲವಾರು ಮಾದರಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಬೆಳಗಾವಿಗೂ ಸಾಕಷ್ಟು ಯೋಜನೆ ವೀಡುವ ವಿಶ್ವಾಸವಿದೆ. ಆದಷ್ಟು ಶೀಘ್ರ ಐಟಿ ಪಾರ್ಕ್ ಕೂಡ ಆಗಲಿದೆ ಎಂದು ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ರವೀಂದ್ರ ಕೌಶಿ ಇ- ಲೈಬ್ರರಿ ಕುರಿತು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ – (ಕನ್ನಡ, ಇಂಗ್ಲೀಷ್, ಮರಾಠಿ)
ಮಧ್ಯ ರಾತ್ರಿ ಶಾಸಕ ಅಭಯ್ ಪಾಟೀಲ ಏನು ಮಾಡುತ್ತಿದ್ದಾರೆ ನೋಡಿ
ಮತ್ತೆ ಶಾಸಕ ಅಭಯ ಪಾಟೀಲ್ ಮಧ್ಯರಾತ್ರಿ ಕಾರ್ಯಾಚರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ