ಅಲ್ಲಿ ಮಗ ಕಣ್ಣೀರು, ಇಲ್ಲಿ ತಾಯಿ ಕಣ್ಣೀರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ರಾಜ್ಯ ರಾಜಕೀಯದಲ್ಲಿ ಎರಡು ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಎರಡು ಪ್ರಕರಣಗಳ ಮಹತ್ವದ ತನಿಖೆ ನಡೆಯುತ್ತಿದ್ದು, ರಾಜಕೀಯ ಘಟಾನುಘಟಿಗಳು ಆತಂಕಕ್ಕೊಳಗಿದ್ದಾರೆ.
ಒಂದು, ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರನ್ನು ಕಳೆದ 3 ದಿನಗಳಿಂದ ನಿರಂತರ ತನಿಖೆ ನಡೆಸುತ್ತಿದ್ದಾರೆ. ಗಣೇಶ ಹಬ್ಬದ ದಿನವೂ ಬಿಡದೆ ಅವರನ್ನು ತನಿಖೆಗೊಳಪಡಿಸಿದ್ದಾರೆ.
ಇನ್ನೊಂದು, ರಾಜ್ಯದಲ್ಲಿ ನಡೆದಿದೆ ಎನ್ನಲಾದ ಪೋನ್ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆ ಕೂಡ ಇಂದೇ ಆರಂಭವಾಗಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಕಷ್ಟಕ್ಕೀಡಾಗಲಿದ್ದಾರೆ ಎನ್ನಲಾಗುತ್ತಿದೆ.
ಹಿಂದಿನ ಸಮ್ಮಿಶ್ರ ಸರಕಾರದ ಈ ಇಬ್ಬರು ನಾಯಕರ ವಿರುದ್ಧ ತನಿಖೆ ನಡೆಯುತ್ತಿರುವುದರಿಂದ ಬಿಜೆಪಿ ನೇತೃತ್ವದ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಹಾಗಾಗಿ ರಾಜ್ಯ ರಾಜಕೀದಲ್ಲಿ ತೀವ್ರ ಕುತೂಹಲ ಮೂಡಿಸುತ್ತಿದೆ ಈ ಎರಡೂ ಪ್ರಕರಣಗಳು.
ಡಿಕೆಶಿ ಕಣ್ಣೀರು
ಡಿ.ಕೆ.ಶಿವಕುಮಾರ ಮೂರನೇ ದಿನವಾದ ಇಂದು ಬೆಳಗ್ಗೆ 11.30ರ ಹೊತ್ತಿಗೆ ನವದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡುತ್ತಿರುವಾಗ ಅವರು ಕಣ್ಣೀರು ಸುರಿಸಿದರು.
ಹಬ್ಬದ ದಿನವಾದ ಇಂದು ತಂದೆಗೆ ಎಡೆ ನೀಡಬೇಕಾದ ದಿನ. ಆದರೆ ಅದಕ್ಕೂ ಅವಕಾಶವಾಗಲಿಲ್ಲ. ನಾನು ಮತ್ತು ನನ್ನ ತಮ್ಮ ಇಬ್ಬರೂ ನವದೆಹಲಿಯಲ್ಲೇ ಇರಬೇಕಾಗಿದೆ. ಬಿಜೆಪಿ ನಮ್ಮ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ನೊಂದುಕೊಂಡರು.
ಡಿ.ಕೆ.ಶಿವಕುಮಾರ ಕಣ್ಣೀರು ಹಾಕುವುದನ್ನು ಟಿ.ವಿ.ಯಲ್ಲಿ ನೋಡಿದ ಅವರ ತಾಯಿ ಬೆಂಗಳೂರಿನಲ್ಲಿ ಕಣ್ಣೀರು ಹಾಕಿದರು. ತಮ್ಮ ಮಗ ಬೆಳೆಯುವುದನ್ನು ಕಂಡು ಬಿಜೆಪಿಯವರು ಅಸೂಯೆಯಿಂದ ಹೀಗೆಲ್ಲ ಮಾಡಿಸುತ್ತಿದ್ದಾರೆ. ನಾವು ಮೊದಲಿನಿಂದಲೂ ಶ್ರೀಮಂತರಿದ್ದು, ಡಿ.ಕೆ.ಶಿವಕುಮಾರ ಯಾರಿಗೂ ಅನ್ಯಾಯ ಮಾಡಿಲ್ಲ, ಮೋಸ ಮಾಡಿಲ್ಲ ಎಂದು ಗಳಗಳನೆ ಅತ್ತರು.
ಎಚ್.ಡಿ.ಕುಮಾರಸ್ವಾಮಿ ಟ್ವೀಟ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎರಡನೆಯ ದಿನವಾದ ಇಂದೂ ಕೂಡ ಡಿ.ಕೆ.ಶಿವಕುಮಾರ ಬೆಂಬಲಕ್ಕೆ ಮನಿಂತಿದ್ದಾರೆ. ಶಿವಕುಮಾರ ಬೆಂಬಲಿಸಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಇಂತಹ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆನ್ನುವ ಕುರಿತು ಶಿವಕುಮಾರ ಅವರಿಗೆ ಸಲಹೆಯನ್ನೂ ಕುಮಾರಸ್ವಾಮಿ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಡಿಕೆಶಿ ಬೆಂಬಲಕ್ಕೆ ಬರಲು ಹಿಂದೆ ಮುಂದೆ ನೋಡುತ್ತಿರುವ ಸಂದರ್ಭದಲ್ಲಿ ಕುಮಾರಸ್ವಾಮಿ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ.
ಒಟ್ಟಾರೆ ಎರಡೂ ಪ್ರಕರಣಗಳು ರಾಜ್ಯ ರಾಜಕೀದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ