Kannada NewsKarnataka News

ಚುನಾವಣೆ ಕೆಲಸದಲ್ಲಿ ರಾಜೀ ಬೇಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅತ್ಯಂತ ಸೂಕ್ಷ್ಮ ಸಂದರ್ಭದಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ  ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿ ಕ್ಷಣವೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ವಿಷಯದಲ್ಲೂ ರಾಜೀ ಮಾಡಿಕೊಳ್ಳದೇ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಕೈಜೋಡಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿರುವ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ವಿವಿಧ ತಂಡಗಳಿಗೆ ಗೋಕಾಕ ನಗರದಲ್ಲಿ ಗುರುವಾರ (ಸೆ.26) ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನ ದಿನದಂದು ಚುನಾವಣಾ ಸಿಬ್ಬಂದಿ ಮಾಡುವ ಅತೀ ಸಣ್ಣ ತಪ್ಪು ಕೂಡ ಬಾರೀ ಗೊಂದಲವನ್ನು ಸೃಷ್ಟಿಸುತ್ತದೆ. ಆದ್ದರಿಂದ ಜವಾಬ್ದಾರಿಯನ್ನು ಅರಿತುಕೊಂಡು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು.
ಸೆಕ್ಟರ್ ಅಧಿಕಾರಿಗಳಿಗೆ ವಹಿಸಲಾಗಿರುವ ಮತಗಟ್ಟೆಗಳನ್ನು ಖುದ್ದಾಗಿ ಪರಿಶೀಲಿಸಿ ಅಲ್ಲಿರುವ ಅನುಕೂಲ-ಅನಾನುಕೂಲಗಳನ್ನು ಪಟ್ಟಿ ಮಾಡಿ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ದುರ್ಬಲ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ವಿಶ್ವಾಸ ವೃದ್ಧಿಸುವ ಕೆಲಸವನ್ನು ಚುನಾವಣಾ ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳು ಮಾಡಬೇಕು ಎಂದರು.

ಎಂ 3 ಇವಿಎಂ ತರಬೇತಿ ಶೀಘ್ರ:

ಇದೇ ಮೊದಲ ಬಾರಿ ಎಂ 3 ಇವಿಎಂ ಬಳಕೆ ಮಾಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹೊಸ ಯಂತ್ರಗಳ ಬಳಕೆ ಕುರಿತು ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಇವಿಎಂ ತಾಂತ್ರಿಕ ತೊಂದರೆ ಸೇರಿದಂತೆ ಯಾವುದೇ ರೀತಿಯ ಪರಿಸ್ಥಿತಿ ಎದುರಾದಾಗ ಒತ್ತಡ ಅಥವಾ ಆತಂಕಗಳಿಗೆ ಒಳಗಾಗದೇ ಕೆಲಸ ಮಾಡಬೇಕು; ಯಾವುದೇ ಸಂದೇಹಗಳಿದ್ದರೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.
ಸಾರ್ವಜನಿಕರು ಪ್ರತಿಯೊಂದನ್ನು ಗಮನಿಸುತ್ತಿರುವುದರಿಂದ ಸೆಕ್ಟರ್ ಅಧಿಕಾರಿಗಳು, ಎಸ್.ಎಸ್.ಟಿ, ಎಫ್.ಎಸ್.ಟಿ/ ವಿ.ಎಸ್.ಟಿ ತಂಡಗಳು ತಮಗೆ ವಹಿಸಿದ ಕೆಲಸವನ್ನು ದಕ್ಷತೆಯಿಂದ ನಿರ್ವಹಿಸಬೇಕು ಎಂದು ಡಾ.ಬೊಮ್ಮನಹಳ್ಳಿ ಹೇಳಿದರು.

ಸಮಗ್ರ ತಿಳಿವಳಿಕೆ ಹೊಂದಿರಬೇಕು 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು, ಚುನಾವಣಾ ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಂಡಾಗ ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆ. ಆದ್ದರಿಂದ ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವ ಪ್ರತಿಯೊಬ್ಬ ಅಧಿಕಾರಿಯೂ ನಿಯಮಾವಳಿಗಳ ಬಗ್ಗೆ ಸಮಗ್ರ ತಿಳಿವಳಿಕೆ ಹೊಂದಿರಬೇಕು ಎಂದರು.
ಇವಿಎಂ, ವಿವಿಪ್ಯಾಟ್ ಬಳಕೆ, ಅಣುಕು ಮತದಾನ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಏನೇ ಸಂದೇಹಗಳಿದ್ದರೂ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ, ಪರಿಹರಿಸಿಕೊಳ್ಳಬೇಕು.
ಉಪ ಚುನಾವಣೆ ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಲಾಗುತ್ತಿದ್ದು, ಆದಾಗ್ಯೂ ತಾಂತ್ರಿಕ ದೋಷಗಳಿಂದ ಏನಾದರೂ ತಪ್ಪುಗಳಾದರೆ ಕೂಡಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಒತ್ತಡಕ್ಕೆ ಸಿಲುಕಿ ಮತ್ತಷ್ಟು ಗೊಂದಲ ಸೃಷ್ಟಿಸದೇ ಶಾಂತಚಿತ್ತರಾಗಿ ಕಾರ್ಯನಿರ್ವಹಿಸಬೇಕು ಎಂದು ಡಾ.ರಾಜೇಂದ್ರ ಸಲಹೆ ನೀಡಿದರು.
ಚುನಾವಣೆಗೆ ನಿಯೋಜಿತಗೊಂಡಿರುವ ಎಲ್ಲರೂ ಜಾತ್ಯಾತೀತವಾಗಿ ನಿಷ್ಪಕ್ಷಪಾತ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ಡಾ.ರಾಜೇಂದ್ರ ಹೇಳಿದರು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ

ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು, ಸೆಕ್ಟರ್ ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳ ನಡುವೆ ಸಮನ್ವಯತೆಯನ್ನು ಸುಲಭಗೊಳಿಸುವ ರೀತಿಯಲ್ಲಿ ಈ ಬಾರಿ ನೇಮಕ ಮಾಡಲಾಗಿದೆ ಎಂದರು.
ನೀತಿಸಂಹಿತೆ ಉಲ್ಲಂಘನೆ ಸಂದರ್ಭದಲ್ಲಿ ದೂರು ದಾಖಲಿಸುವಾಗ ಪೊಲೀಸ್ ಸೆಕ್ಟರ್ ಅಧಿಕಾರಿಗಳು ಚುನಾವಣಾ ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚುನಾವಣೆಯಲ್ಲಿ ನಿರ್ಲಕ್ಷ್ಯ ಅಥವಾ ಲೋಪದೋಷಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸುವುದರಿಂದ ಅಧಿಕಾರಿಗಳು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಉಪ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ರಮೇಶ್ ಕಳಸದ, ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪುರೆ, ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಜಗದೀಶ್ ರೂಗಿ, ತರಬೇತುದಾರ ಎನ್.ವಿ.ಶಿರಗಾಂವಕರ ಮತ್ತಿತರರು ಉಪಸ್ಥಿತರಿದ್ದರು.
ಚುನಾವಣಾ ಸೆಕ್ಟರ್ ಹಾಗೂ ಪೊಲೀಸ್ ಸೆಕ್ಟರ್ ಅಧಿಕಾರಿಗಳು, ಎಫ್.ಎಸ್.ಟಿ, ವಿ.ಎಸ್.ಟಿ, ವಿ.ವಿ.ಟಿ ಹಾಗೂ ಮಾದರಿ ನೀತಿ ಸಂಹಿತೆ ತಂಡದ ಅಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಚುನಾವಣಾ ಖರ್ಚು-ವೆಚ್ಚ ಲೆಕ್ಕಾಚಾರ; ಪ್ರಚಾರ ಸಭೆ-ಸಮಾರಂಭಗಳ ವಿಡಿಯೋ ಚಿತ್ರೀಕರಣ ಮತ್ತು ಪರಿಶೀಲನೆ; ಸಾಕ್ಷ್ಯಗಳ ದಾಖಲೀಕರಣ; ಆದಾಯ ತೆರಿಗೆ, ವಾಣಿಜ್ಯ ತೆರಿಗೆ ನಿಯಮಗಳು, ಅಬಕಾರಿ ಕಾಯ್ದೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾತಿ; ಸಾರ್ವಜನಿಕರೇ ವಿಡಿಯೋ ಅಥವಾ ಛಾಯಾಚಿತ್ರಗಳ ಸಮೇತ ನೇರವಾಗಿ ದೂರು ದಾಖಲಿಸುವ ಅನುಕೂಲವಾಗುವಂತೆ ಕಲ್ಪಿಸಲಾಗಿರುವ ಸಿವಿಜಿಲ್ ಆಪ್ ಸೇರಿದಂತೆ ಅನೇಕ ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button