Kannada NewsKarnataka NewsLatestPolitics

 *ಇದೊಂದು ರಾಜಕೀಯ ಸಂಚು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್* 

* *ವಿಪಕ್ಷಗಳ ವಿರುದ್ಧ ಸಚಿವರ ಆಕ್ರೋಶ* 

 ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು* : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ. ಇದೊಂದು ರಾಜಕೀಯ ಸಂಚು ಅಂತ ಎಲ್ಲರಿಗೂ ಗೊತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋರ್ಟ್ ತೀರ್ಪು ಬಂದಿದೆ, ನಮ್ಮ ಮುಂದೆ ಬೇರೆ ಬೇರೆ ಆಯ್ಕೆಗಳಿವೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಹೇಳಿದರು. 

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಮೊದಲು ವಿಪಕ್ಷದವರಿಗೆ ಹೇಳಿ, ಅವರ ಪಕ್ಷದಲ್ಲಿ ಎಷ್ಟು ಜನರ ಮೇಲೆ FIR ಇದೆ.  ಎಷ್ಟು ಜನರು ಜಾಮೀನಿನ ಮೇಲೆ ಹೊರಗಿದ್ದಾರೆ ಅಂತ ಮೊದಲು ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು. ‌

ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳ್ಳಿಸುವ ಯತ್ನ ನಡೀತಾ ಇದೆ. ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ. ದೇಶದಲ್ಲಿ ಪ್ರಜಾಪ್ರಭುತ್ವದ ಅಸ್ಥಿತ್ವಕ್ಕೆ ಧಕ್ಕೆ ಬಂದಿದೆ. ಕರ್ನಾಟಕದ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಇದನ್ನ ವಿಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. 

ನಮ್ಮ ನೈತಿಕತೆ ಬಗ್ಗೆ ಮಾತನಾಡುವವರಿಗೆ ನೈತಿಕತೆ ಇದ್ಯಾ? ಮೊದಲು ಅದನ್ನು ಅವರು ಅರಿಯಲಿ. ಅವರಿಗೆ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು. ಈಗ ಬಂದಿರುವ ಸವಾಲನ್ನು  ರಾಜಕೀಯವಾಗಿಯೇ ಎದುರಿಸಲಾಗುವುದು ಎಂದರು.

 *ಸಿಎಂ ಜೊತೆ ಇಡೀ ಕಾಂಗ್ರೆಸ್ ಪಕ್ಷವಿದೆ* 

ನಾವು ನಿಮ್ಮ ಜೊತೆಗೆ ಇದ್ದೀವಿ ಅಂತ ಹೇಳುವ ಸಲುವಾಗಿ ಸಿಎಂ ಭೇಟಿ ಮಾಡಿರುವೆ‌. ನಿಮ್ಮ ನಾಯಕತ್ವವನ್ನು ಒಪ್ಪಿಕೊಂಡಿದ್ದೀವಿ. ನಿಮ್ಮ ಜೊತೆಗೆ ನಾವೆಲ್ಲರೂ ಇರ್ತೀವಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿರುವೆ. ಇಡೀ ಕಾಂಗ್ರೆಸ್ ಪಕ್ಷ ಸಿಎಂ ಜೊತೆಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button