Uncategorized

ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಈ ಜನ ಸಾಗರವೇ ಸಾಕ್ಷಿ – ಡಿ.ಕೆ.ಶಿವಕುಮಾರ

*ಮೈಸೂರು ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*

ಪ್ರಗತಿವಾಹಿನಿ ಸುದ್ದಿ, ಮೈಸೂರು: ಈ ಯಾತ್ರೆ ಕಾಂಗ್ರೆಸ್ ಪಕ್ಷದ ಯಾತ್ರೆಯಲ್ಲ, ಜನರ ಧ್ವನಿ. ನಿಮ್ಮ ನೋವು, ಸಮಸ್ಯೆ ಅರಿತು ಅವುಗಳಿಗೆ ಪರಿಹಾರ ನೀಡಲು ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬೆಳಗಾವಿಯಲ್ಲಿ ನಮ್ಮ ಪ್ರಜಾಧ್ವನಿ ಯಾತ್ರೆ ಆರಂಭಿಸಿ, ಬಹುತೇಕ ಜಿಲ್ಲೆಗಳನ್ನು ಕ್ರಮಿಸಿ ಇಲ್ಲಿಗೆ ಬಂದಿದ್ದೇವೆ.
ರಾಜ್ಯದಲ್ಲಿ ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಆಡಳಿತದಲ್ಲಿದೆ. ನಾವು ಉತ್ತಮ ಆಡಳಿತ ನೀಡಿದ್ದರೂ ಕಳೆದ ಚುನಾವಣೆಯಲ್ಲಿ ಜನ ನಮಗೆ ಪೂರ್ಣ ಆಶೀರ್ವಾದ ನೀಡಲಿಲ್ಲ. ನಮಗೆ 75-80, ಜೆಡಿಎಸ್ ಗೆ 38 ಸ್ಥಾನ ನೀಡಿತ್ತು. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜಾತ್ಯಾತೀತ ಜನತಾದಳಕ್ಕೆ ಅಧಿಕಾರ ನೀಡಿದೆವು. ನಾವು ಎಲ್ಲಾ ರೀತಿಯ ಬೆಂಬಲ ಪ್ರೋತ್ಸಾಹ ನೀಡಿದರೂ ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗಲಿಲ್ಲ.
ನಾವು ಎಂದೂ ಮುಖ್ಯಮಂತ್ರಿ ಸ್ಥಾನ ಬಯಸದೇ ಬೆಂಬಲ ನೀಡಿದ್ದೆವು. ಈ ಬಾರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಕೇಳಲು ನಾವು ಇಲ್ಲಿಗೆ ಬಂದಿದ್ದೇವೆ. ನಾನು ಪಕ್ಷದ ಅಧ್ಯಕ್ಷನಾಗಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ನಿಮ್ಮ ಸೇವೆ ಮಾಡಲು ಬದ್ಧರಾಗಿದ್ದೇವೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಧವೀಧರ ಕ್ಷೇತ್ರವನ್ನು ಕಾಂಗ್ರೆಸ್ 50 ವರ್ಷಗಳ ನಂತರ ಗೆದ್ದಿದೆ. ಮಂಡ್ಯ, ಕೋಲಾರ, ತುಮಕೂರು, ಹಾಸನದಲ್ಲಿ ನಮ್ಮವರು ಗೆದ್ದಿದ್ದಾರೆ.
ಜೆಡಿಎಸ್ ಪಕ್ಷದ ಶಾಸಕರು, ಮುಖಂಡರು ನಮ್ಮ ಪಕ್ಷ ಸೇರುತ್ತಿದ್ದಾರೆ. ಮನೋಹರ್ ಹಾಗೂ ಕಾಂತರಾಜ್ ಅವರು ಪರಿಷತ್ತಿನ ಹಾಲಿ ಸದಸ್ಯರಾಗಿದ್ದರೂ ಅಧಿಕಾರ ಬಿಟ್ಟು ಕಾಂಗ್ರೆಸ್ ಸೇರಿ ಪಕ್ಷವನ್ನು ಗೆಲ್ಲಿಸಿದ್ದಾರೆ. ಮಂಡ್ಯ, ಹಾಸನದಲ್ಲಿ ಕಾಂಗ್ರೆಸ್ ಶಾಸಕರಿಲ್ಲ, ಕೊಡಗಿನಲ್ಲೂ ಒಬ್ಬರಿಲ್ಲ, ಮೈಸೂರಿನಲ್ಲಿ ಕೇವಲ ಒಬ್ಬರು ಮಾತ್ರ. ಈ ಭಾಗದಲ್ಲಿ ಕೇವಲ 3 ಶಾಸಕರಿದ್ದಾರೆ. ಎದುರಾಳಿ ಪಕ್ಷದ 17 ಶಾಸಕರಿದ್ದರೂ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದರು. ಮಧುಮಾದೇಗೌಡರನ್ನು ಆರಿಸಿ ಕಳುಹಿಸಿದರು. ಜೆಡಿಎಸ್ ವಿಚಾರದಲ್ಲಿ ಜನ ನಿರೀಕ್ಷೆ ಕಳೆದುಕೊಂಡಿದ್ದಾರೆ.
ಮಧು ಬಂಗಾರಪ್ಪ, ದತ್ತಾ, ಕೋಲಾರ ಶ್ರೀನಿವಾಸ ಗೌಡರು, ಗುಬ್ಬಿ ಶ್ರೀನಿವಾಸ್, ಕಾಂತರಾಜ್, ಮನೋಹರ್ ಸೇರಿದಂತೆ 20 ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರೆಲ್ಲಾ ದಡ್ಡರೇ? ನೀವು ಆಲೋಚಿಸಬೇಕು. ನಾನು ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿಲ್ಲ ಎಂದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇವೆ ಎಂದು ಕುಮಾರಣ್ಣ ಹೇಳಿದ್ದಾರೆ.
ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿರುವ ನಾಯಕರಿಗೆಲ್ಲ ರಾಜಕೀಯ ಪ್ರಜ್ಞೆ ಇದೆ. ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅವರಿಗೆ ಚನ್ನಾಗಿ ಗೊತ್ತಿದೆ. ರಾಜ್ಯದ ಭವಿಷ್ಯ ಯಾರಿಂದ ಎಂದು ಅವರಿಗೆ ಅರಿವಿದೆ.
ಈ ಸಂದರ್ಭದಲ್ಲಿ ನಾನು ಇಲ್ಲಿನ ಸಂಸದ ಪ್ರತಾಪ್ ಸಿಂಹ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಬಹಿರಂಗ ವೇದಿಕೆಯಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಉಪಕುಲಪತಿ ಹುದ್ದೆ ನೇಮಕಕ್ಕೆ 4-5 ಕೋಟಿ ಲಂಚ ನೀಡಬೇಕು ಎಂದು ಸತ್ಯ ನುಡಿದಿದ್ದಾರೆ. ಅವರಿಗೆ ಕೋಟಿ ಧನ್ಯವಾದ ತಿಳಿಸುತ್ತೇನೆ. ಇನ್ನು ವಿಶ್ವನಾಥ್ ಅವರು ಯಡಿಯೂರಪ್ಪ ಅವರ ಕಾಲದಲ್ಲಿ ನೀರಾವರಿ ಇಲಾಖೆಯಲ್ಲಿ 20% ಕಮಿಷನ್ ಪಡೆದು ಗುತ್ತಿಗೆ ನೀಡಲಾಗಿದೆ ಎಂದಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ನಾವು ಚುನಾವಣೆಯಲ್ಲಿ ಸೋಲುತ್ತೇವೆ, ಹೀಗಾಗಿ ಪ್ರತಿ ಮತದಾರರಿಗೆ 6 ಸಾವಿರ ಹಣ ನೀಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಶಾಸಕ ಯತ್ನಾಳ್ ಅವರು ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಸ್ಥಾನಕ್ಕೆ 100 ಕೋಟಿ ನೀಡಬೇಕು ಎಂದಿದ್ದಾರೆ.
ಇನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೆಂಪಣ್ಣ ಅವರು ಈ ಸರ್ಕಾರದ ವಿರುದ್ಧ ಪ್ರಧಾನಿಗೆ ದೂರು ನೀಡಿದ್ದಾರೆ. ಮೈಸೂರಿಗೆ ಸಾಂಸ್ಕೃತಿಕ ನಗರಿ ಎಂಬ ಬಿರುದು ಇದ್ದರೆ, ಬೆಂಗಳೂರಿಗೆ ಸಿಲಿಕಾನ್ ಸಿಟಿ ಎಂಬ ಹೆಸರಿದೆ. ಕೇರಳಕ್ಕೆ ದೇವರ ನಾಡು ಎಂದು ಬಾಂಬೆಗೆ ಭಾರತದ ಆರ್ಥಿಕ ರಾಜಧಾನಿ ಎಂದು ಬಿರುದು ಇದೆ. ಬಿಜೆಪಿ ಸರ್ಕಾರ ಬಂದ ನಂತರ ನಮ್ಮ ರಾಜ್ಯಕ್ಕೆ ದೇಶದ ಭ್ರಷ್ಟಾಚಾರದ ರಾಜಧಾನಿ ಎಂಬ ಕೆಟ್ಟ ಬಿರುದು ಬಂದಿದೆ. ಇದೆಲ್ಲವನ್ನೂ ತೊಳೆದು ರಾಜ್ಯದ ಗೌರವ ಉಳಿಸಿ, ಯುವಕರಿಗೆ ನ್ಯಾಯ ಒದಗಿಸಬೇಕು.
ಬಿಜೆಪಿ ನುಡಿದಂತೆ ನಡೆಯಲಿಲ್ಲ. ಆದರೂ ಮುಂಬರುವ ತಿಂಗಳು 17 ರಂದು ಬಜೆಟ್ ಮಂಡಿಸುತ್ತಿದ್ದಾರಂತೆ. ನೀವು ಕಳೆದ ಬಜೆಟ್ ನೋಡಿ ಶೇ. 50 ರಷ್ಟೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಕಳೆದ ಚುನಾವಣೆ ಸಮಯದಲ್ಲಿ ಅವರು 600 ಭರವಸೆ ನೀಡಿ, 550 ಈಡಡೇರಿಸಿಲ್ಲ. ಆ ಮೂಲಕ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಈ ಬಗ್ಗೆ ನಿತ್ಯ ಪ್ರಶ್ನೆ ಕೇಳುತ್ತಿದ್ದು ಒಂದಕ್ಕೂ ಉತ್ತರ ನೀಡಲು ಆಗಿಲ್ಲ. ಇದು ಬಿಜೆಪಿಯ ಸತ್ಯ.
ಬಿಜೆಪಿ ಸರ್ಕಾರದ ಆಡಳಿತವನ್ನು ವಿಮರ್ಶೆ ಮಾಡಿ ಅವರ ದುರಾಡಳಿತ, ಭ್ರಷ್ಟಾಚಾರ, ಕೋಮುಹತ್ಯೆ, ದ್ವೇಷ ರಾಜಕಾರಣ ಒಳಗೊಂಡ ಬಿಜೆಪಿಯ ಪಾಪದ ಪುರಾಣವನ್ನು ನಾವು ನಿಮಗೆ ಕಳುಹಿಸಿಕೊಡುತ್ತೇವೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮಾಡಿದರಾ? ರಸಗೊಬ್ಬರ ಕಡಿಮೆ ಬೆಲೆಗೆ ನೀಡುತ್ತೇವೆ ಎಂದರು, ನೀಡಿದರಾ? ಅಡುಗೆ ಅನಿಲ 450 ನಿಂದ 1100 ರೂ ಆಗಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಟ್ಟರಾ? ನಿಮ್ಮ ಖಾತೆಗೆ 15 ಲಕ್ಷ ಹಣ ಹಾಕಿದ್ದಾರಾ? ಇಲ್ಲ. ಕೋವಿಡ್ ಬಂದಾಗ ನಾನು ಸಿದ್ದರಾಮಯ್ಯನವರು ಹೋರಾಟ ಮಾಡಿ ರೈತರು, ಬೀದಿ ವ್ಯಾಪಾರಿಗಳು, ಸಾಂಪ್ರದಾಯಿಕ ವೃತ್ತಿದಾರರಿಗೆ 10 ಸಾವಿರ ರು ನೀಡುವಂತೆ ಆಗ್ರಹಿಸಿದೆವು. ಯಾರಿಗಾದರೂ ಕೊಟ್ಟರೇ? ಇಲ್ಲ.
ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು, ಕೊಟ್ಟರಾ? ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಕರಣ ಮಾಡಿ ಇದ್ದ ಉದ್ಯೋಗ ಕಸಿದಿದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಐಪಿಎಸ್ ಅಧಿಕಾರಿ, ಪರೀಕ್ಷೆ ನಡೆಸಿದವರು, ಬರೆದವರು ಸೇರಿದಂತೆ ಸುಮಾರು 200 ಮಂದಿ ಜೈಲಿಗೆ ಹೋಗಿದ್ದಾರೆ. ಇಂತಹ ಭ್ರಷ್ಟಾಚಾರ ಯಾರ ಕಾಲದಲ್ಲಾದರೂ ಆಗಿತ್ತಾ? ನಾನು ಇಂಧನ ಸಚಿವನಾಗಿದ್ದಾಗ 25 ಸಾವಿರ ಜನರಿಗೆ ಉದ್ಯೋಗ ನೀಡಿದ್ದು ಒಬ್ಬರಾದರೂ ನನ್ನ ಅಥವಾ ಸಿದ್ದರಾಮಯ್ಯ ಅವರ ವಿರುದ್ಧ ಲಂಚ ನೀಡಿದ್ದೇವೆ ಎಂದು ಹೇಳಿದರೆ ನಾವು ರಾಜಕೀಯ ನೀವೃತ್ತಿ ಪಡೆಯುತ್ತೇವೆ. ಈ ವಿಚಾರವನ್ನು ನೀವು ಪ್ರತಿ ಮನೆ, ಮನೆಗೆ ತಲುಪಿಸಬೇಕು. ಈ ಸರ್ಕಾರವನ್ನು ಕಿತ್ತೊಗೆಯಬೇಕು.
ನಾವು ಬಸವಣ್ಣ, ಕುವೆಂಪು ಅವರ ಕರ್ನಾಟಕದ ಕನಸುಗಾರರು. ನಾವು ನುಡಿದಂತೆ ನಡೆಯುತ್ತೇವೆ. ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಗ್ಯಾರಂಟಿ ಯೋಜನೆ ರೂಪದಲ್ಲಿ 2 ಕಾರ್ಯಕ್ರಮ ಘೋಷಿಸಿದ್ದೇವೆ.
ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದೆವು. ಈ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಪ್ರತಿ ತಿಂಗಳಿಗೆ 1500 ರಂತೆ ವರ್ಷಕ್ಕೆ 18 ಸಾವಿರದಷ್ಟು ಹಣವನ್ನು ಪ್ರತಿ ಕುಟುಂಬ ಉಳಿಸಬಹುದಾಗಿದೆ. ನನ್ನ ಅವಧಿಯಲ್ಲಿ ರಾಜ್ಯದಲ್ಲಿದ್ದ 10 ಸಾವಿರ ಮೆ.ವ್ಯಾಟ್ ವಿದ್ಯುತ್ ಅನ್ನು 21 ಸಾವಿರ ಮೆ.ವ್ಯಾ ಗೆ ಹೆಚ್ಚಿಸಿದೆವು. ಆ ಮೂಲಕ ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ ಬೇರೆ ರಾಜ್ಯಗಳಿಗೆ ಮಾರುವಂತೆ ಮಾಡಿದ್ದೇವೆ.
ಇನ್ನು ಎರಡನೇ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಗೃಹಲಕ್ಷ್ಮಿ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿರುವ ಸಂದರ್ಭದಲ್ಲಿ ಅವರಿಗೆ ನೆರವಾಗಲು ರಾಜ್ಯದ ಪ್ರತಿ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು. ಆ ಮೂಲಕ ವರ್ಷಕ್ಕೆ 24 ಸಾವಿರ ನೆರವು ನೀಡಲಾಗುವುದು. ಹೀಗೆ ಈ ಎರಡೂ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 42 ಸಾವಿರದಷ್ಟು ಆರ್ಥಿಕ ಹೊರೆಯನ್ನು ತಗ್ಗಿಸಲು ಕಾಂಗ್ರೆಸ್ ಈ ಕಾರ್ಯಕ್ರಮ ರೂಪಿಸಿದೆ. ಐದು ವರ್ಷಗಳಲ್ಲಿ 2 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇದು ಲಂಚ ಅಲ್ಲ. ಸರ್ಕಾರದಿಂದ ನಿಮಗೆ ನೀಡುವ ಯೋಜನೆಗಳು. ಕಾಂಗ್ರೆಸ್ ಪಕ್ಷದ ಈ ಯೋಜನೆಗಳನ್ನು ಪಕ್ಷದ ಎಲ್ಲ ಕಾರ್ಯಕ್ರತರು ಪ್ರತಿ ಮನೆ ಮನೆಗೆ ತಲುಪಿಸಬೇಕು.
ಕೋವಿಡ್ ಸಮಯದಲ್ಲಿ ಪ್ರಧಾನಿಗಳು ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆಯಿರಿ, ದೀಪ ಹಚ್ಚಿ 21 ದಿನಗಳಲ್ಲಿ ಕೋವಿಡ್ ವಿರುದ್ಧದ ಯುದ್ಧ ಮುಕ್ತಾಯ ಮಾಡುತ್ತೇವೆ ಎಂದು ಹೇಳಿದ್ದರು. ಚಾಲಕರು, ರೈತರು, ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ಕೊಟ್ಟರಾ? ಆರ್ಥಿಕ ನೆರವು ಹಾಳಾಗಲಿ, ಆಕ್ಸಿಜನ್ ಇಲ್ಲದೆ ಸತ್ತ 36 ಜನರ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಲಿಲ್ಲ. ಒಂದು ರೂ. ಪರಿಹಾರ ನೀಡಲಿಲ್ಲ. ಮಂತ್ರಿ, ಅಧಿಕಾರಿ ಯಾರೂ ಆ ಕುಟುಂಬಗಳನ್ನು ಭೇಟಿ ಮಾಡಲಿಲ್ಲ. ನಾವು ನಮ್ಮ ನಾಯಕರು ಅವರ ಮನೆಗೆ ಹೋಗಿ ಸಾಂತ್ವನ ಹೇಳಿದೆವು. ಅಲ್ಲದೆ ಪ್ರತಿ ಕುಟುಂಬಕ್ಕೆ ಪಕ್ಷದ ವತಿಯಿಂದ 1 ಲಕ್ಷ ನೆರವು ನೀಡಿ ಬಂದಿದ್ದೇವೆ.
ನಾವು ನಮಗಾಗಿ ಅಧಿಕಾರ ಕೇಳುತ್ತಿಲ್ಲ. ನಿಮಗಾಗಿ, ನಿಮ್ಮ ಬದುಕಿನಲ್ಲಿ ಬದಲಾವಣೆ ತಂದು, ನಿಮ್ಮ ಕೈಗೆ ಅಧಿಕಾರ ನೀಡಲು ಕೇಳುತ್ತಿದ್ದೇವೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಗಟ್ಟಿಯಾಗಿದ್ದರೆ, ಜಿಲ್ಲಾ ಪಂಚಾಯ್ತಿ ತಾಲೂಕು ಪಂಚಾಯ್ತಿ ಚುನಾವಣೆ ಮಾಡಲಿಲ್ಲ ಏಕೆ? ಬಿಬಿಎಂಪಿ ಚುನಾವಣೆ ಮಾಡಲಿಲ್ಲ ಯಾಕೆ? ಅವರಿಗೆ ಮತದಾರರ ಮೇಲೆ ನಂಬಿಕೆ ಇಲ್ಲ.
ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಈ ಜನ ಸಾಗರವೇ ಸಾಕ್ಷಿ. ಈ ಜನ ಸಾಗರ ನೋಡಿ ಮುಂದಿನ ಚುನಾವಣೆಯಲ್ಲಿ ಮೈಸೂರು ಚಾಮರಾಜನಗರದ 15 ಕ್ಷೇತ್ರಗಳಲ್ಲಿ 15 ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ. ಇಲ್ಲಿ 15 ಸೀಟು ಗೆದ್ದಾಗ ನೀವು ವಿಧಾನಸೌಧದ ಮೆಟ್ಟಿಲು ಮಾಲೆ ಹೋಗುತ್ತಿರುತ್ತೀರಿ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ನಾನು ಮನವಿ ಮಾಡುತ್ತೇನೆ. ಕಾಂಗ್ರೆಸ್ ಮಾತ್ರ ದೇಶದಲ್ಲಿ ಎಲ್ಲ ವರ್ಗದ ಜನರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲಿದೆ. ನಿಮ್ಮ ಸೇವೆ, ಸ್ವಾಭಿಮಾನ, ರಾಜ್ಯದ ಗೌರವ ಉಳಿಸುತ್ತೇವೆ ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ಮೈಸೂರಿನಲ್ಲಿ ಗುರುವಾರ ಸಂಜೆ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ಶಾಸಕ ಯತಿಂದ್ರ ಸಿದ್ದರಾಮಯ್ಯ ಮತ್ತಿತರರು ಭಾಗವಹಿಸಿದ್ದರು.

ರೇಡ್‌‌ಗೆ ಹೋದ ಅಧಿಕಾರಿಯದ್ದೇ ಒಂದು ಸಿಡಿ ಸಿಕ್ಕಿದೆ – ರಮೇಶ ಜಾರಕಿಹೊಳಿ ಬಾಂಬ್

https://pragati.taskdun.com/a-cd-of-the-officer-who-went-to-the-raid-was-found-ramesh-jarakiholi-bomb/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button