ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಜನರು ತತ್ತರಿಸಿದ್ದು ಎಲ್ಲ ಅಧಿಕಾರಿ ವರ್ಗದವರು ರಾಜ್ಯ ಸರ್ಕಾರದ ಸೂಚನೆಯಂತೆ ಸಂತ್ರಸ್ಥರ ನೆರವು ಒದಗಿಸುವ ಕಾರ್ಯದಲ್ಲಿ ತೊಡಗಿದ್ದು ಕಾರಣ ಚನ್ನಮ್ಮಾಜಿಯ ವೀರಜ್ಯೋತಿಯು ಜಿಲ್ಲೆಯಾದ್ಯಂತ ಸಂಚರಿಸದೆ ಅ.೨೩ ರಂದು ಬೈಲಹೊಂಗಲದ ಚನ್ನಮ್ಮಾಜಿಯ ಸಮಾಧಿಯಿಂದ ನೇರವಾಗಿ ಕಿತ್ತೂರು ಬಂದು ತಲುಪಲಿದೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಇಲ್ಲಿಯ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಶನಿವಾರ ಉತ್ಸವದ ನಿಮಿತ್ತ ನಡೆದ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿಜಯೋತ್ಸವಕ್ಕಾಗಮಿಸುವ ಜನತೆಗೆ ಯಾವುದೇ ತೊಂದರೆ ಉಂಟಾಗಬಾರದು. ಅಲ್ಲದೆ ಎಲ್ಲ ಉಪಸಮಿತಿಯಲ್ಲಿರುವ ಅಧಿಕಾರಿಗಳು ಸಮಿತಿ ಸದಸ್ಯರ ಸಲಹೆಗಳನ್ನು ಆಲಿಸಬೇಕು. ಇದು ನಾಡಿನ ಉತ್ಸವ ಇದನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಹಣ ಪಾವತಿ
ಕಳೆದ ಭಾರಿಯ ಉತ್ಸವದಲ್ಲಿ ಭಾಗವಹಿಸಿದ ಕಲಾವಿದರು, ಕ್ರೀಡಾಪಟುಗಳು ಸೇರಿದಂತೆ ಯಾರಿಗಾದರೂ ಹಣ ಪಾವತಿಯಾಗದಿದ್ದಲ್ಲಿ ಅವರು ಎಸಿ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದ ಅವರು, ಚನ್ನಮ್ಮಾಜಿಯ ವಿಜಯೋತ್ಸವವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಲ ಉತ್ಸವ ವಿಶೇಷವಾಗಿ ಜಾನಪದ ಕಲಾ ಮೇಳ ಎಂಬ ಹೆಸರಾಂತ ಕಲಾಕಾರರ ತಂಡದಿಂದ ಕಾರ್ಯಕ್ರಮ ನೆರವೇರಲಿದೆ. ಅಲ್ಲದೆ ವಿಚಾರ ಸಂಕೀರ್ಣ ಹಾಗೂ ರೈತ ಗೋಷ್ಠಿಗಳು ಜರುಗುವವು. ಕೋಟೆ ಆವರಣ ಸ್ವಚ್ಛಗೊಳಿಸಲು ಗುತ್ತಿಗೆದಾರಿಗೆ ನೀಡಲಾಗುವುದು. ಪ ಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣ ಅಂದವಾಗಿರಿಸುವಲ್ಲಿ ಶ್ರಮ ವಹಿಸಬೇಕು, ಸರಕಾರ ಉತ್ಸವಕ್ಕೆಂದು ೧ ಕೋಟಿ ಅನುದಾನ ನೀಡುತ್ತಿದ್ದು ಅನುದಾನ ಸದ್ಬಳಿಕೆ ಮಾಡಿಕೊಂಡು ಅರ್ಥಪೂರ್ಣವಾದ ಉತ್ಸವ ಆಚರಿ ಎಂದು ಹೇಳಿದರು.
ಜಾರಿಕೊಳ್ಳುವಂತಿಲ್ಲ
ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಕಳೆದ ಭಾರಿ ಸರ್ಕಾರ ಉತ್ಸವಕ್ಕೆಂದು ನೀಡಿದ ರೂ.೫೦ ಲಕ್ಷ ಅನುದಾನದ ಹಣ ಸಂದಾಯವಾಗಿದೆ. ಹೀಗಾಗಿ ಕಲಾವಿದರೂ ಸೇರಿದಂತೆ ಇನ್ನುಳಿದ ಯಾರಿಗಾದರೂ ಹಣ ಪಾವತಿಯಾಗದಿದ್ದಲ್ಲಿ ಕೂಡಲೇ ಸಂಪರ್ಕಿಸುವಂತೆ ಕೋರಿದರು.
ಉತ್ಸವದ ಯಶಸ್ಸಿಗಾಗಿ ಹಾಗೂ ಕಾರ್ಯಗಳಿಗಾಗಿ ಅಧಿಕಾರಿ ವರ್ಗದವರು ಕೈಜೋಡಿಸುವ ಅಗತ್ಯ ಇದೆ. ಹೀಗಾಗಿ ತಾಲೂಕಾ ಮಟ್ಟದ ಅಧಿಕಾರಿಗಳು ಯಾವುದೇ ಕುಂಟು ನೆಪ ಹೇಳಿ ಜಾರಿಕೊಳ್ಳುವಂತಿಲ್ಲ ಎಂದು ಖಡಕ್ಕಾಗಿ ಹೇಳಿದ ಅವರು, ಉತ್ಸವದ ೧೩ ಸಮೀತಿಗಳು ಹಾಗೂ ಅವುಗಳ ಕರ್ತವ್ಯ ಕುರಿತು ವಿವರಿಸಿದರು.
ಉಳವಪ್ಪ ಉಳ್ಳೇಗಡ್ಡಿ, ಬಸವರಾಜ ಪರವಣ್ಣವರ, ಸಂದೀಪ ದೇಶಪಾಂಡೆ, ಬಸನಗೌಡ ಸಿದ್ರಾಮಣಿ, ಎಸ್ ಆರ್ ಪಾಟೀಲ ಇವರು ಮೆರವಣಿಗೆ ಹಾಗೂ ಇನ್ನಿತರ ವಿಷಯ ಕುರಿತು ಸಲಹೆಗಳನ್ನು ನೀಡಿದರು.
ತಹಶೀಲ್ದಾರ ಪ್ರವೀಣ ಜೈನ್, ಸಿಪಿಐ ಶ್ರೀಕಾಂತ ತೋಟಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಹುಬ್ಬೆರಿಸುವಂತೆ ಮಾಡಿದ ಪೆಂಡಾಲ್ ಟೆಂಡರ್ :
ಉತ್ಸವದ ವೇದಿಕೆಯ ಮುಂಭಾಗದಲ್ಲಿ ಹಾಕಲಾಗುವ ಶಾಮೀಯಾನದ ಕುರಿತು ಕಳೆದ ಭಾರಿ ತೀವ್ರ ಗೊಂದಲ ಉಂಟಾಗಿತ್ತು. ಇದನ್ನು ಪರಿಹರಿಸಲು ಶಾಸಕ ಮಹಾಂತೇಶ ದೊಡಗೌಡರ ಮುಕ್ತವಾದ ಟೆಂಡರ್ ಪ್ರಕ್ರಿಯೆ ಆರಂಭಿಸಿದ ಕಾರಣ ೬.೫೦ ಲಕ್ಷಕ್ಕೆ ಬಾಳೆಕುಂದ್ರಗಿ ಅವರಿಗೆ ಟೆಂಡರ್ ದೊರೆತಿತ್ತು.
ಈ ಭಾರಿಯೂ ಇಂತಹ ಗೊಂದಲ ನಿರ್ಮಾಣವಾದ ಪರಿಣಾಮ ಮತ್ತೆ ಟೆಂಡರ ಪ್ರಕ್ರಿಯೆಗೆ ಶಾಸಕ ದೊಡಗೌಡರ ಸೇರಿದಂತೆ ಅಧಿಕಾರಿಗಳು ಮುಂದಡಿ ಇಟ್ಟರು.ಇದರ ಪರಿಣಾಮ ಇಲ್ಲಿ ತೀವ್ರ ಸ್ಪರ್ಧೆ ಉಂಟಾಗಿ ಈ ಭಾರಿಯೂ ಬಾಳೇಕುಂದ್ರಗಿಗೆ ಕೇವಲ ರೂ.೯೯ ಸಾವಿರಕ್ಕೆ ಟೆಂಡರ್ ದೊರೆತು ಎಲ್ಲರೂ ಹುಬ್ಬೇರುವಂತೆ ಮಾಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ