ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಮೇಶ ಜಾರಕಿಹೊಳಿ ವಿಜಯಪುರಕ್ಕೆ ಎರಡು ಬಾರಿ ಬಂದು ನಮ್ಮ ಆತಿಥ್ಯ ಸ್ವೀಕರಿಸಿದ್ದಾರೆ, ನಾನು ಒಂದು ಬಾರಿಯಾದರೂ ಅವರ ಮನೆಗೆ ಊಟಕ್ಕೆ ಹೋಗುವುದು ಬೇಡವೇ ? ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹಾಸ್ಯಭರಿತವಾಗಿ ಹೇಳಿದರು.
ಬುಧವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಅಖಿಲ ಭಾರತ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ರಮೇಶ ಜಾರಕಿಹೊಳಿ ಅವರ ಮನೆಗೆ ತೆರಳಿ ಭೇಟಿ ಮಾಡಿದ್ದರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷವಿಲ್ಲ, ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ದೇವೆ ಅಷ್ಟೇ ಎಂದು ವಿವರಿಸಿದರು.
ಯಡಿಯೂರಪ್ಪ ಯುಗ ಮುಗಿದಿದೆ
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಯುಗ ಮುಗಿದಿದೆ. ಎರಡನೇ ತಲೆಮಾರಿನ ನಾಯಕರನ್ನು ಬೆಳೆಸುವ ಅಗತ್ಯವಿದೆ. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಳಿಕ ನರೇಂದ್ರ ಮೋದಿ ಅವರು ಬೆಳೆದರು. ಅದೇ ರೀತಿ ರಾಜ್ಯದಲ್ಲಿಯೂ ಯಡಿಯೂರಪ್ಪನವರ ನಂತರದ ತಲೆಮಾರಿನ ನಾಯಕರು ಬೆಳೆಯಬೇಕಾದ ಅಗತ್ಯವಿದೆ ಎಂದರು.
ಯುಗಾದಿ ಬಳಿಕ ಬದಲಾವಣೆ
ಯುಗಾದಿ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯಾಗುವುದು ನಿಶ್ಚಿತ,. ಮುಖ್ಯಮಂತ್ರಿ ಬೊಮ್ಮಾಯಿಯವರು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿರುವುದಕ್ಕೆ ಬೇರೇನೂ ಅರ್ಥ ಕೊಡುವ ಅಗತ್ಯವಿಲ್ಲ. ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಮಂತ್ರಿಗಳು ನಡೆಸುತ್ತಾರೆ. ಅದೇ ಉದ್ದೇಶದಿಂದ ಅವರು ತೆರಳಲಿದ್ದಾರೆ ಎಂದರು.
ಮೂರನೇ ಪೀಠದಿಂದ ಏನೂ ವ್ಯತ್ಯಾಸವಾಗಲ್ಲ
ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಯಿಂದ ಏನೂ ಪರಿಣಾಮವಾಗುವುದಿಲ್ಲ. ಮೂರು ಬಿಟ್ಟು ನೂರು ಪೀಠವಾದರೂ ಏನೂ ವ್ಯತ್ಯಾಸವಾಗಲ್ಲ ಎಂದರು. ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿ ಸಿಗಬೇಕೆಂದು ಹೋರಾಟ ನಡೆಸಿದ್ದೇವೆ. ಕರ್ನಾಟಕಬಜೆಟ್ ಪೂರ್ವದಲ್ಲಿಯೇ ಮೀಸಲಾತಿ ಕೊಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
ಸಚಿವ ಸಂಪುಟ ವಿಸ್ತರಣೆ ಆದಷ್ಟು ಶೀಘ್ರದಲ್ಲಿ ಆಗಬೇಕು. ಆರು ತಿಂಗಳು ಇರುವಾಗ ಸಚಿವ ಸ್ಥಾನ ಹಂಚಿಕೆ ಮಾಡಿದರೆ ಯಾವ ಕೆಲಸ ಮಾಡಲೂ ಸಾಧ್ಯವಿಲ್ಲ. ಕ್ಷೇತ್ರದ ಕಡೆ ಗಮನ ಹರಿಸುವುದು ಕಡಿಮೆಯಾಗುತ್ತದೆ ಎಂದರು.
ರಮೇಶ ಜಾರಕಿಹೊಳಿ ಎಲ್ಲಿದ್ದಾರೆ? ದೆಹಲಿಗೆ ತೆರಳಿದ್ದು ನಿಜವೇ? – ಪ್ರಗತಿವಾಹಿನಿಗೆ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ