
ಪ್ರಗತಿವಾಹಿನಿ ಸುದ್ದಿ, ಉಡುಪಿ: ಮೀನು ಹಿಡಿಯಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಜಲಸಮಾಧಿಯಾಗಿದ್ದು, ಓರ್ವ ವಿದ್ಯಾರ್ಥಿ ಬಚಾವ್ ಆಗಿರುವ ಘಟನೆ ಉಡುಪಿಯ ಕೊಡೇರಿಯ ಹೊಸಹಿತ್ಲು ಕಡಲ ತೀರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ.
ಮೃತರನ್ನು ಆಶಿಶ್ ದೇವಾಡಿಗ, ಸೂರಜ್ ಪೂಜಾರಿ, ಸಂಕೇತ ದೇವಾಡಿಗ ಎಂದು ಗುರುತಿಸಲಾಗಿದೆ. ಆಟವಾಡುತ್ತಿದ್ದ ಮಕ್ಕಳು ಗಾಳ ಹಿಡಿದು ಮೀನು ಹಿಡಿಯಲು ಹೋಗಿದ್ದಾರೆ. ನೀರಿನ ಆಳದ ಬಗ್ಗೆ ಅಂದಾಜು ಸಿಗದೆ ಮುಂದೆ ಹೋದ ಕಾರಣ ಮುಳುಗಡೆಯಾಗಿದ್ದಾರೆ.
ಹವಾಮಾನದ ವೈಪರೀತ್ಯದಿಂದ ಅಲೆಗಳ ಅಬ್ಬರ ಏಕಾಏಕಿ ಹೆಚ್ಚಾಗಿದೆ. ಇದ್ರಿಂದಾಗಿ ಮೂವರು ವಿದ್ಯಾರ್ಥಿಗಳು ಗಾಬರಿಯಾಗಿದ್ದು, ನಿಯಂತ್ರಣ ತಪ್ಪಿ ಉಸಿರುಗಟ್ಟಿ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯ ಮೀನುಗಾರರು ರಕ್ಷಿಸಲು ಮುಂದಾಗಿದ್ದರೂ ಪ್ರಯತ್ನ ಫಲನೀಡಿಲ್ಲ. ನೋಡನೋಡ್ತಿದ್ದಂತೆ ಜಲಸಮಾಧಿ ಆಗಿದ್ದಾರೆ.
ಮಕ್ಕಳನ್ನು ಕಳೆದುಕೊಂಡ ಪಾಲಕರು ಕಂಗಾಲಾಗಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.