ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಶ್ಚಿಮ ಘಟಗಳಲ್ಲಿ ಸುರಿಯುತ್ತಿರುವ ರಣಭೀಕರ ಮಳೆಗೆ ಬೆಳಗಾವಿಯಲ್ಲಿರುವ ಎಲ್ಲ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದ್ದು, ಹುಕ್ಕೇರಿ ತಾಲೂಕಿನ ಶಿರೂರ್ ಜಲಾಶಯದ ಮೂರು ಗೇಟ್ ನಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.
3.7 ಟಿಎಂಸಿ ಸಾಮರ್ತ್ಯ ಇರುವ ಶಿರೂರ್ ಡ್ಯಾಮ್ ನಲ್ಲಿ ಈಗ 3.1 ಟಿಎಂಸಿ ನೀರು ಸಂಗ್ರಹವಾಗಿದೆ. ಆರು ಗೇಟ್ ಹೊಂದಿರುವ ಈ ಡ್ಯಾಮ್ ಮೂರು ಗೇಟ್ ನಿಂದ ಪ್ರತಿನಿತ್ಯ 4,500 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ 2006ರಲ್ಲಿ ನಿರ್ಮಾಣವಾಗಿರುವ ಶಿರೂರ್ ಡ್ಯಾಮ್ ಬೇಸಿಗೆಯ ಕಾಲದಲ್ಲಿಯೂ ಈ ಡ್ಯಾಮ್ ಎಂದಿಗೂ ಖಾಲಿಯಾಗುವುದಿಲ್ಲ. ಅಲ್ಲದೆ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನಿಗೆ ಈ ನೀರನ್ನು ಬಳಕೆ ಮಾಡುತ್ತಾರೆ.
ಬೆಳಗಾವಿಯ ಶಿರೂರು ಅಣೆಕಟ್ಟು – ಮಾರ್ಕಂಡೇಯ ನದಿಯ ಮೇಲೆ ಎತ್ತರವಾಗಿ ನಿಂತಿದೆ. ಮಾರ್ಕಂಡೇಯ ನದಿಗೆ ಅಡ್ಡಲಾಗಿರುವ ಶಿರೂರು ಜಲಾಶಯವನ್ನು ಮುಖ್ಯವಾಗಿ ನೀರಾವರಿಗಾಗಿ ವಿನ್ಯಾಸಗೊಳಿಸಲಾಗಿದ್ದರೂ, ಇದು ಕುಟುಂಬ ಪ್ರವಾಸಗಳಿಗೆ ಜನಪ್ರಿಯ ತಾಣವಾಗಿದೆ. ಜಲಾಶಯದ ಗೇಟ್‌ಗಳ ಮೂಲಕ ನೀರು ಹರಿಯುವುದನ್ನು ನೋಡುವುದು ಅದ್ಭುತ ದೃಶ್ಯವಾಗಿದೆ. ಈ ನೀರು 432 ಚ.ಕಿ.ಮೀ ಜಲಾನಯನ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ.
ಬೆಳಗಾವಿ ನಗರ, ಹುಕ್ಕೇರಿ, ಹುದಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಜಲಾಶಯದ ನೀರು ಜೀವನಾಡಿಯಾಗಿದೆ. ಇದು ಈಗ ಭರ್ತಿಯಾಗಿದ್ದು, ರೈತರ ಹಾಗೂ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ