ಪ್ರಗತಿವಾಹಿನಿ ಸುದ್ದಿ, ಗೋಕಾಕ: ನಗರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿದ್ದ ಟೈಗರ್ ಗ್ಯಾಂಗನ್ನು ತಡವಾದರು ಕೂಡ ಪೊಲೀಸರು ಬಂಧಿಸಿದ್ದು, ಇದೊಂದು ಒಳ್ಳೆಯ ಬೆಳವಣಿಗೆ. ನಿಷ್ಪಕ್ಷಪಾತ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರ ಬರಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಟೈಗರ್ ಗ್ಯಾಂಗ್ ಬಂಧನ ವಿಚಾರವಾಗಿ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆಯೇ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿತ್ತು. ಗ್ಯಾಂಗ್ ನಿಂದಾಗಿ ಅಥವಾ ಮತ್ಯಾವ ಗುಂಪುಗಳಿಂದ ಜನರಿಗೆ ಮತ್ತು ಯಾವುದೇ ಸೆಕ್ಟರ್ ಗಳಿಗೆ ತೊಂದರೆಯಾಗಬಾರದು. ಇದೇ ರೀತಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು. ಟೈಗರ್ ಗ್ಯಾಂಗ್ ಅಲ್ಲದೇ ಈ ರೀತಿ ಯಾವುದೇ ಗ್ಯಾಂಗ್ ಸಕ್ರಿಯವಾಗದಂತೆ ಶಾಶ್ವತ ನಿರ್ನಾಮ ಮಾಡಬೇಕು ಎಂದು ಸಲಹೆ ನೀಡಿದರು.
ವಾಲ್ಮೀಕಿ ಸಮುದಾಯಕ್ಕೆ ೭.೫ ಮೀಸಲಾತಿ ವಿಚಾರವಾಗಿ ಮಾತನಾಡಿ, ಕಳೆದ ೪೦ ವರ್ಷಗಳಿಂದ ಶೇ. ೭.೫ ರಷ್ಟು ಮೀಸಲಾತಿ ದೊರೆಯಬೇಕು ಎಂಬ ನಿಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ನಿನ್ನೆ ರಾಜನಹಳ್ಳಿಯಲ್ಲಿ ಎಲ್ಲ ಶಾಸಕರು ಸೇರಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಈ ಯೋಜನೆ ಜಾರಿಯಾಗಬೇಕು ಎಂದು ಒಮ್ಮತದ ನಿರ್ಧಾರ ಕೈಗೊಂಡಿದ್ದು, ಸಿಎಂ ಭೇಟಿ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಐಶಾರಾಮಿ ಜೀವನ ನಡೆಸಲು, ಹೆಸರು ಮಾಡಲು ಕೊಲೆ, ದರೋಡೆ ಮಾಡಿಕೊಂಡು ಜನರನ್ನು ಭಯಗೊಳಿಸುತ್ತಿದ್ದ ಟೈಗರ್ ಗ್ಯಾಂಗ್‌ನ್ನು ಇತ್ತೀಚಿಗೆ ಗೋಕಾಕ್ ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ