ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಕಾಯಂ ಆಗಿದೆ. ಈ ನಾಲ್ವರು ಅಪರಾಧಿಗಳ ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಹೊಸ ಗಲ್ಲುಕಂಬ ಸಿದ್ಧಗೊಂಡಿದೆ ಎಂದು ತಿಳಿದುಬಂದಿದೆ.
ನಿರ್ಭಯಾ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಆರು ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ತೀರ್ಪು ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ನಾಲ್ವರು ದೋಷಿಗಳಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯ ತೀರ್ಪನ್ನು ಸುಪ್ರೀಂ ನ್ಯಾಯಪೀಠ ಎತ್ತಿಹಿಡಿದಿತ್ತು. ಆದರೆ, ರಾಷ್ಟ್ರಪತಿಗಳಲ್ಲಿ ಕ್ಷಮಾದಾನಕ್ಕೆ ಮನವಿ ಸಲ್ಲಿಸಲು ಆತನಿಗೆ ಒಂದು ವಾರ ಕಾಲಾವಕಾಶವನ್ನೂ ನೀಡಿದೆ.
ಈ ನಡುವೆ ಗಲ್ಲುಶಿಕ್ಷೆ ನೀಡಲಾಗಿರುವ ನಾಲ್ವರು ಅಪರಾಧಿಗಳನ್ನು ತಕ್ಷಣ ನೇಣಿಗೆ ಏರಿಸಬೇಕು ಎಂದು ಕೋರಿ ನಿರ್ಭಯಾ ಪೋಷಕರು ಪಟಿಯಾಲ ಹೌಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾದ ಬೆನ್ನಲ್ಲೇ ನಿರ್ಭಯಾ ಪೋಷಕರ ಅರ್ಜಿ ವಿಚಾರಣೆ ನಡೆಯಿತು. ರಾಷ್ಟ್ರಪತಿಗಳಲ್ಲಿ ಕ್ಷಮಾದಾನ ಕೋರಲು ನಾಲ್ವರು ದೋಷಿಗಳಿಗೆ ಒಂದು ವಾರ ಕಾಲಾವಕಾಶ ಕೊಟ್ಟಿರುವ ಹಿನ್ನೆಲೆಯಲ್ಲಿ ತಕ್ಷಣವೇ ಇವರನ್ನ ನೇಣುಗಂಬಕ್ಕೇರಿಸುವಂತೆ ಆದೇಶಿಸಲು ಪಟಿಯಾಲ ಹೌಸ್ ಕೋರ್ಟ್ ನಿರಾಕರಿಸಿದೆ. ಜನೆವರಿ 7ಕ್ಕೆ ಈ ಅರ್ಜಿಯ ವಿಚಾರಣೆಯನ್ನು ಪಟಿಯಾಲಾ ಹೌಸ್ ನ್ಯಾಯಾಲಯ ಮುಂದೂಡಿದೆ.
ಕ್ಷಮಾದಾನ ಅರ್ಜಿ ತಿರಸ್ಕಾರಗೊಳ್ಳುವ ನಿರೀಕ್ಷೆಯಿದ್ದು, ನಾಲ್ವರು ಒಟ್ಟಿಗೆ ಗಲ್ಲಿಗೇರಿಸುವ ಸಲುವಾಗಿ ತಿಹಾರ್ ಜೈಲಿನಲ್ಲಿ ಈ ಗಲ್ಲುಕಂಬ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲೇ ಗಲ್ಲಿಗೇರಿಸಲಿರುವ ದೇಶದ ಮೊದಲ ಕಾರಗೃಹ ತಿಹಾರ್ ಜೈಲಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ