*ನಮ್ಮ ದೇಶದ ಸಂವಿಧಾನ ತಿಳಿಯಲು ಸಾಂಸ್ಕೃತಿಕ ಇತಿಹಾಸ ಅರಿಯಬೇಕು: ಬಿ.ಎಸ್.ನಾಡಕರ್ಣಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತದ ಸಾಂಸ್ಕೃತಿಕ ಇತಿಹಾಸ ಓದಿದಾಗ ಭಾರತ ದೇಶದ ಸಂವಿಧಾನ ಎಷ್ಟು ಶ್ರೇಷ್ಠವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಯಾರಿಗೆ ಭಾರತದ ಸಾಂಸ್ಕೃತಿಕ ಇತಿಹಾಸದ ಅರಿವು ಇರುತ್ತದೆಯೊ ಅಂತಹವರಿಗೆ ಭಾರತದ ಸಂವಿಧಾನ ಅರ್ಥವಾಗುತ್ತದೆ ಎಂದು ನಿವೃತ್ತ ಶಿಕ್ಷಕರಾದ ಬಿ.ಎಸ್.ನಾಡಕರ್ಣಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ (ನ.26)ನಗರದ ಡಾ. ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನವದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.
ನಮ್ಮ ಭಾರತದ ಸಂವಿಧಾನ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಎರಡು ಹಕ್ಕಗಳನ್ನು ಕೊಟ್ಟಿದೆ ಒಂದು ಮದುವೆ ಹಕ್ಕು, ಇನ್ನೊಂದು ಮತದಾನದ ಹಕ್ಕು ಇವುಗಳಲ್ಲಿ ವಿಶೇಷ ಎಂದರೆ ಮದುವೆಯ ಹಕ್ಕಿನಿಂದಾಗಿ ಕೇವಲ ತನ್ನ ಕುಟುಂಬದ ಜವಾಬ್ದಾರಿಗಳನ್ನು ಮಾತ್ರ ನೋಡಿಕೊಳ್ಳಬಹುದು. ಆದರೆ ಮತದಾನದ ಹಕ್ಕಿನಿಂದಾಗಿ ರಾಷ್ಟ್ರ ನಡೆಸುವ ಜವಾಬ್ದಾರಿ ಹೆಣ್ಣು ಮಕ್ಕಳಿಗೆ ಸಂವಿಧಾನ ಕೊಟ್ಟಿದೆ ಎಂದರು.
ಮನುಸ್ಮೃತಿಯನ್ನು ಎಲ್ಲರು ಓದಿ, ಏಕೆಂದರೆ ಆ ಮನುಸ್ಮೃತಿಯಲ್ಲಿ ಮಹಿಳೆಯರ ಮೇಲೆ ಇದ್ದಂತಹ ಅನಿಷ್ಟ ಪದ್ಧತಿಗಳ ಬಗ್ಗೆ ತಿಳಿದುಕೊಂಡಾಗ ನಮ್ಮ ಭಾರತದ ಸಂವಿಧಾನ ಹೆಣ್ಣು ಮಕ್ಕಳಿಗೆ ಎಂತಹ ಬಲಿಷ್ಠ ಹಕ್ಕುಗಳನ್ನು ಕೊಟ್ಟಿದೆ ಎಂಬುದು ತಿಳಿಯುತ್ತದೆ. ಬಲಿಷ್ಠ ಹಕ್ಕುಗಳಿಂದಾಗಿ ಈಗ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಸಂವಿಧಾನ ಜಾರಿಯಾಗುವದಕ್ಕು ಮುನ್ನ ನಮ್ಮ ದೇಶದಲ್ಲಿ ಮಹಿಳೆಯರಿಗೆ ಬಹಳ ಗಂಭೀರವಾದ ಅನಿಷ್ಟ ಪದ್ಧತಿಗಳಾದ ಸತಿ ಸಹಗಮನ ಪದ್ಧತಿ, ವಿಧವಾ ಪುನರ ವಿವಾಹಗಳಂತಹ ಅನಿಷ್ಟ ಪದ್ಧತಿಗಳಿಂದ ಮುಕ್ತಿ ಕೊಟ್ಟು, ಸಂವಿಧಾನ ನಮಗೆ ರಕ್ಷಣೆ ಮಾಡಿದೆ. ಭಾರತದ ಸಂವಿಧಾನ ಜಾರಿಯಾದ ಮೇಲೆ ಮಹಿಳೆಯರಿಗೆ ತಮ್ಮ ಎಲ್ಲಾ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.
ಭಾರತದ ಸಂವಿಧಾನದಿಂದಾಗಿ ತುಳಿತಕ್ಕೆ ಒಳಗಾದ ಜನರು ಸಮಾಜದಲ್ಲಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ನಮ್ಮ ಹೆಮ್ಮೆಯ ಸಂವಿಧಾನದ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಸರಕಾರದ ಜವಾಬ್ದಾರಿ ಎಂದು ಸಂವಿಧಾನ ತಿಳಿಸುತ್ತದೆ. ವೈಜ್ಞಾನಿಕ ಮನೋಭಾವದಿಂದ ಅಭಿವೃದ್ಧಿ ಸಾಧ್ಯ ಇಲ್ಲಾವಾದರೆ ಮೌಡ್ಯಗಳಲ್ಲಿ ಜೀವನದ ಕಾಲಾವಧಿ ಹಾಳಾಗುತ್ತದೆ ಎಂದು ಬಿ.ಎಸ್. ನಾಡಕರ್ಣಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹರ್ಷ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ ಕುರಿಹುಲಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಚಿಲ್ಕರ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾಂತೇಶ ಚಿವಟಗುಂಡಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಚಣ್ಣನವರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗ, ಸರಕಾರಿ
ಇದಕ್ಕು ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಜರುಗಿತು. ಸಂವಿಧಾನ ಜಾಗೃತಿ ಜಾಥಾವನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಮ್ ಅವರು ಚಾಲನೆ ನೀಡಿದರು. ಜಾಗೃತಿ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಚನ್ನಮ್ಮ ವೃತ್ತದ ಮಾರ್ಗವಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನವನ ಬಂದು ಮುಕ್ತಾಯಗೊಂಡಿತು.



