ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾವೇರಿ ಈಗ ಬಹುಚರ್ಚಿತವಾಗುತ್ತಿರುವ ವಿಷಯ. ಇದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರಕ್ಕೆ ಬರೆದಿರುವ ಪತ್ರ.
ಕಾವೇರಿಯನ್ನು ನನಗೇ ಕೊಡಿ ಎಂದು ಸಿದ್ದರಾಮಯ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕಳೆದ 7 ವರ್ಷಗಳ ಕಾವೇರಿ ಸಂಗ ಬಿಡಲು ಅವರು ಸಿದ್ದರಿಲ್ಲ. ಹಾಗಾಗಿ ಹಿಂದಿನಿಂದ ಬಂದಿರುವ ಸಂಪ್ರದಾಯ ಪಾಲಿಸಲಾಗುತ್ತದೆಯೋ, ಸಿದ್ದರಾಮಯ್ಯ ಬೇಡಿಕೆ ಈಡೇರಿಸಲಾಗುತ್ತದೆಯೋ?
ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಕಾವೇರಿ ನಿವಾಸದಲ್ಲಿ ವಾಸಿಸುವುದು ವಾಡಿಕೆ. ಸಿದ್ದರಾಮಯ್ಯ ಕೂಡ 7 ವರ್ಷದ ಹಿಂದೆ ಮುಖ್ಯಮಂತ್ರಿಯಾದಾಗ ಕಾವೇರಿ ನಿವಾಸ ಸೇರಿಕೊಂಡಿದ್ದರು. 5 ವರ್ಷ ಮುಖ್ಯಮಂತ್ರಿಯಾಗಿ ಅಲ್ಲಿಂದಲೇ ಆಡಳಿತ ನಡೆಸಿದ್ದರು.
ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದ ನಂತರವೂ ಅವರು ಕಾವೇರಿ ನಿವಾಸ ತೆರವು ಮಾಡಿರಲಿಲ್ಲ. ಸಾಂವಿಧಾನಿಕ ಹುದ್ದೆ ಇಲ್ಲದಿದ್ದರೂ ಅಲ್ಲಿಯೇ ಮುಂದುವರಿದಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರಿಗೆ ಕಾವೇರಿ ನಿವಾಸವನ್ನು ಸಂಪ್ರದಾಯದ ಪ್ರಕಾರ ಅಲೋಟ್ ಮಾಡಲಾಗಿದೆ. ಆದರೆ ಸಿದ್ದರಾಮಯ್ಯ ತೆರವು ಮಾಡಿಲ್ಲದ ಕಾರಣ ಯಡಿಯೂರಪ್ಪ ಸ್ವಂತ ನಿವಾಸ ಧವಳಗಿರಿಯಲ್ಲೇ ವಾಸಿಸುತ್ತಿದ್ದಾರೆ.
ಇದೀಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರಿಗೆ ಸರಕಾರಿ ಮನೆ ನೀಡಬೇಕಾಗುತ್ತದೆ. ಅವರು ಇದೀಗ ಸರಕಾರಕ್ಕೆ ಪತ್ರ ಬರೆದಿದ್ದಾರೆ. ತಾವು ಇರುವ ಕಾವೇರಿ ನಿವಾಸವನ್ನೇ ತಮಗೆ ಮುಂದುವರಿಸುವಂತೆ ಕೋರಿದ್ದಾರೆ. ಇದಕ್ಕೆ ಸರಕಾರ ಒಪ್ಪಲಿದೆಯೇ? ಅಥವಾ ಯಡಿಯೂರಪ್ಪ ಆ ನಿವಾಸ ತಮಗೆ ಬೇಕೆಂದು ಸಿದ್ದರಾಮಯ್ಯ ತೆರವು ಮಾಡಲು ಸೂಚಿಸುತ್ತಾರೆಯೋ ಕಾದು ನೋಡಬೇಕಿದೆ.
ಸಧ್ಯಕ್ಕೆ ಕಾವೇರಿ ಬಹು ಚರ್ಚೆಯಲ್ಲಿರುವುದಂತೂ ನಿಜ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ